ಚಿತ್ರಕೃಪೆ:ಗೂಗಲ್

ಶಿರೂರು ಗುಡ್ಡದ ದಾರುಣ ಕುಸಿತದ ಅಂತ್ಯದ ಜೊತೆಗೆ,ಕಣ್ಮರೆಯಾದ ಜೀವಗಳ ಶೋಧನಾ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ, ಕೇರಳದ ಸ್ವರ್ಗಕ್ಕೆ ಕಿಚ್ಚುಹಚ್ಚುವ “ವಯನಾಡು” ಗುಡ್ಡ ಕುಸಿತ,ಭೂಕುಸಿತದ ಜೊತೆಗೆ,ಮಳೆರಾಯ ಜವರಾಯನಾಗಿ ಆರ್ಭಟಿಸುವ ಪ್ರವಾಹದ ಭೀಕರತೆಗೆ ಅಕ್ಷರಶಃ ಊರಿಗೆ ಊರೇ ಕಣ್ಣ ಎದುರು ಮಾಯವಾದ ಹೃದಯ ವಿದ್ರಾವಕ ಘಟನೆ ಅರಗಿಸಿಕೊಳ್ಳಲಾಗದಂತಹ ದುರಂತಕ್ಕೆ ಯಾರನ್ನು ದೂರುವುದು?ಯಾರಿಗೆ ಶಪಿಸುವುದು? ಆದ ಜೀವಹಾನಿಗೆ ಪರಿಹಾರವೇ ಅಂತಿಮ ಪರಿಹಾರವಾದಿತೇ? ಎಂಬಲ್ಲ ಆತಂಕಕಾರಿ ನೋವಿನ ವಿಷಯಗಳು ಎಂದಾದರೂ,ಶಾಶ್ವತವಾಗಿ ಸಾಂತ್ವಾನ ನೀಡಲು ಸಾಧ್ಯವೆ? ನದಿ ಪಾತ್ರದ ಜನರ ಜೀವನ‌ ಅಸ್ತವ್ಯಸ್ತತೆಗೆ ತತ್ತರಿಸುವ ಕ್ಷಣಗಳಾಗಿ ಪರಿವರ್ತಿಸುವ ಸಮಯ ಉಹಿಸಲು ಯಾರಿಗೆಲ್ಲ ಸಾಧ್ಯ ಹೇಳಿ! ನೀರಿನ ಮಟ್ಟ ಏರುತ್ತಿದ್ದಂತೆ,ನದಿ ನೀರಲ್ಲಿಯ ಹೂಳನ್ನು ತೆರವುಗೊಳಿಸದೇ, ಅದರ ಮೇಲೆ ಉಕ್ಕಿಹರಿಯುವ ನೀರು ಸಹಜವಾಗಿಯೇ ಏರಲು ಕಾರಣವಾಗುತ್ತದೆ.ಮಳೆಯ ಅವಾಂತರಗಳಿಗೆ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವತ್ತ ಈಗ ಚಿಂತಿಸುವುದು ಮೊದಲಿಗಿಂತ ಅನಿವಾರ್ಯಾವಾಗಿದೆ.

ಬರಗಾಲದ ರಣ ರಣ ಬಿಸಿಲಿಗೆ ಕಂಗೆಟ್ಟ ಜೀವಗಳು,ಆಗಸದತ್ತ ನೆತ್ತಿಯೆತ್ತಿ ಬೇಡುವ ಕಂಗಳಿಗೆ,ಒಂದು ಹನಿನೀರು ಗಂಟಲ ಸೇರಬಾರದೇ ಎಂಬ ನಿಟ್ಟುಸಿರು! ನೇಸರನ ಕೆಂಡದಂತಹ ತಾಪವನ್ನು ಸಹಿಸುವ ಸಂಕಟ ಯಾರಿಗೆ ತಾನೇ ಬೇಕು? ಸನ್ನಿವೇಶ ಹೀಗೆಲ್ಲ ಬದಲಾಗುವುದೆಂಬ,ಒಂದು ಮುನ್ಸೂಚನೆ ಸಿಗದಿರುವುದು ನಮ್ಮ ಸುಧಾರಿತ ವ್ಯವಸ್ಥೆಗಳಲ್ಲಿ ಒಂದಾಗಿದೆ.ಶಿರೂರು ಗುಡ್ಡ ಕುಸಿತವು ಇಡೀ ಮನುಕುಲ ಸಂಕುಲವನ್ನೆ ಬೆಚ್ಚಿ ಬೀಳಿಸುತ್ತಿದೆ.ಸಹ್ಯಾದ್ರಿಯ ಸರಣಿ ಸಡಿಲತೆಗೆ ಕಾರಣವಾಗುತ್ತಿರುವುದು ಭಯದ ಸೂಚನೆ! ಮಳೆಯ ಆರ್ಭಟ ತಗ್ಗದಿರುವುದು ಇನ್ಯಾವ ಆತಂಕಕ್ಕೆ,ಸಂಕಟಕ್ಕೆ ಎಡಮಾಡಿಕೊಡುವುದೋ‌ ಎಂಬ ಅಳಕು ಅಲ್ಲಿ ವಾಸಿಸುತ್ತಿರುವ ಜನರಿಗೆ ಕಾಡದಿರದು.ಈಗಾಗಲೇ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾದವರಿಗೆ ಮುಂದೇನು ಎಂಬ ಪ್ರಶ್ನೆ? ಇಲ್ಲಿ ಕಳೆದುಕೊಂಡಿದ್ದು ಕೇವಲ ಆಸ್ತಿಯಲ್ಲ! ಕುಟುಂಬದ ಅಸ್ಮಿತೆ!ಸಮಾಜದ ಬಹುಮುಖ್ಯ ಜನಜೀವನ ವ್ಯವಸ್ಥೆ! ಅದರಲ್ಲೂ ನಿರ್ದಿಷ್ಟವಾಗಿ ಪ್ರಕೃತಿಯ ಮಡಿಲು ದಿನದಿಂದ ದಿನಕ್ಕೆ ಬಂಜೆಯಾಗುತ್ತಿರುವುದು!

ಎಲ್ಲೋ ಹುಡುಕಿದೆ ಇಲ್ಲದ ಆಸರೆಯ
ನೂಕುನುಗ್ಗಲು ನಡುವೆ ಬರಸಿಡಿಲು
ಹೊಕ್ಕಿ ತುಕ್ಕು ಹಿಡಿದಿಹುದು
ಬಾಳ ಭವಿಷ್ಯದ ಕೊನೆಯಲ್ಲಿ
ಜಲವಿಲ್ಲದೆ ಜೀವನವಿಲ್ಲ
ಧರೆ ತಂಪಾಗದೆ ಉಳಿವಿಲ್ಲ…

ನಿಜ,ಅಲ್ಲವಾ? ನಾವೆಷ್ಟು ಏರಿಳಿತ ಕಂಡರು,ಕೊನೆ ಬಂದು ನಿಲ್ಲುವುದು ಗೇಣು ಹೊಟ್ಟೆಗಾಗಿ! ವಿಪರ್ಯಾಸವೆಂದರೆ ಸತ್ಯಗೊತ್ತಿದ್ದರು,ಮಿಥ್ಯದ ಹಿಂದೆ ಅಂಗಲಾಚುವುದು ತಪ್ಪಿಲ್ಲ.ನೀರಿನ ಮೇಲೆ ಅಧಿಕಾರ ಚಲಾಯಿಸುವ ನಾವು, ಒಂದು ದಿನ ನೀರಿನವನು ಮೋಟರ್ ಕೆಟ್ಟಿದೆ ಒಂದ ವಾರ ನೀರು ಬಿಡಲು ಆಗಲ್ಲ ಎಂದರೆ ಮುಗಿತು ನಮ್ಮ ಕತೆ! ನೀರಿನ ಮಹತ್ವದ ಕುರಿತು ಮನೆಯಲ್ಲಿ ವಿಚಾರಗೋಷ್ಠಿಯೇ ಎರ್ಪಡುತ್ತದೆ.ನೀರಿಗಾಗಿ ಮಾರಾಮಾರಿ ಕೂಡ ಆಗುತ್ತದೆ. ಶಾಲಾ,ಕಾಲೇಜುಗಳಲ್ಲಿ ಜಲ ಸಂರಕ್ಷಣೆಯ ಕುರಿತು ಪ್ರಾತ್ಯಕ್ಷಿಕೆಗಳು ನಡೆಯುತ್ತವೆ.ಮಕ್ಕಳಿಗೆ ನೀರಿನ ಮಹತ್ವದ ಕುರಿತು ಮನದಟ್ಟು ಮಾಡಲಾಗುತ್ತದೆ.ಪ್ರತಿ ದಿನ ಬಳಸುವ ನೀರಿನ ಪ್ರಮಾಣದ ಬಗ್ಗೆ ತಿಳಿಸಿದಾಗ್ಯೂ ಅಂತರಾವಲೋಕನದ ಮಹತ್ವ ಎಷ್ಟು ಎಂಬುದನ್ನು ಅರ್ಥೈಸಲು ಧೀರ್ಘ ಸಮಯದ ನಿರೀಕ್ಷೆಯಿದೆ.

ಬಣ ಬಣ ಗುಟ್ಟುತ್ತಿದ್ದ ಮೇಘನ ಸಂದೇಶ ಹೊತ್ತು ಬರುವ ಮುನ್ಸೂಚನೆಯನ್ನು ಕಂಡಾಗ ರೈತನ ಮೊಗದಲ್ಲಿ ನಸುನಗೆ… ಇನ್ನಾದರೂ ಬರಡಾದ ಭೂಮಿಯ ಹದಗೊಳಿಸಬಹುದೆಂದು ಪೂರ್ವ ತಯಾರಿಗೆ ಸಿದ್ದನಾಗುವ ದೃಶ್ಯ ಹೃದಯ ಸ್ಪರ್ಶ.ಬಹುತೇಕ ಎಲ್ಲ ಆಣೆಕಟ್ಟುಗಳು ಬರಿದಾಗಿ ಇದನ್ನೇ ನಂಬಿ ಬದುಕುವ ಜನಜೀವನ ಒಂದು ತೊಟ್ಟು ಜಲಕ್ಕಾಗಿ ಪರಿತಪಿಸುವಾಗ ಧರೆತಂಪೆರೆವ ಒಂದೊಂದು ಹನಿಗಳ ಸದ್ದಿಗೆ ಹೆಜ್ಜೆ ಹಾಕಿದ ಯುವ ಮನಸ್ಸುಗಳು,ಮಣ್ಣಿನ ವಾಸನೆಯನ್ನು ಆಸ್ವಾದಿಸುವುದೇ ಹಬ್ಬವೆಂದರೂ ತಪ್ಪಲ್ಲ.ಕಪ್ಪಗೆ ಮದುವೆ ಮಾಡಿದ್ದೂ ಸಾರ್ಥಕವಾಯಿತೆಂದು,ಮಂಡೂಕಗಳ ಸಂಗೀತದಲ್ಲಿ ಮೈಮರೆತ ಜಗತ್ತು! ಹಬ್ಬಕ್ಕೊಂದು ಭರ್ಜರಿ ಊಟ ಬೇಕಲ್ಲ! ಕಾಂಕ್ರೀಟ್ ಕಾಡ ನಿರ್ಮಿಸಿ, ನೈಸರ್ಗೀಕ ಜೀವನ ಬಯಸುವ ನಮ್ಮ ಮನಸ್ಸುಗಳಗೆ ಏನೆನ್ನಬೇಕು? “ಬಿತ್ತಿದ್ದನ್ನು ಬೆಳೆದುಕೋ” ಎಂಬ ಮಾತನ್ನು ಅಲ್ಲಗಳೆಯಲು ಸಾಧ್ಯವೇ?.ಉತ್ತರ ಪ್ರದೇಶದಲ್ಲಿ ಮೇಘಾ ಸ್ಫೋಟದ ಅವಾಂತರಕ್ಕೆ ಜೀವಗಳು ಅನಾಯಾಸವಾಗಿ ಬಲಿಯಾಗುತ್ತಿರುವುದನ್ನು ಉಹಿಸಲು ಸಾಧ್ಯವಿಲ್ಲ!.ಮಣ್ಣಿನಡಿಯಲ್ಲಿ ಉಸಿರು ಚೆಲ್ಲುವ ಸ್ಥಿತಿ ಯಾವ ಶತ್ರುವಿಗೂ ಬೇಡ!

ಧೋ ಧೋ ಎಂದು ಎಡಬಿಡದೆ ರಣರಣ ಬಿಸಿಲಿಗೆ ಪ್ರತ್ಯುತ್ತರವಾಗಿ ರೌದ್ರ ನರ್ತನದ….ವರುಣನನ ಆರ್ಭಟಕ್ಕೆ ತತ್ತರಿಸಿದ ಕೆಲವೊಂದಿಷ್ಟು ಪ್ರದೇಶಗಳು ಅಕ್ಷರಶಃ ನರಕಯಾತನೆಯನ್ನೆ ಅನುಭವಿಸುವಂತಾಗಿದೆ.
ಮುಂಗಾರು ರೈತನ ಪಾಲಿಗೆ ವರವಾಗದೇ ಶಾಪವಾಗಿ ಪರಿಣಮಿಸಿದೆ. ಎತ್ತ ಕಣ್ಣಾಯಿಸಿದರೂ ಜಲದಿಗ್ಬಂಧನದ ಕರುಣಾಜನಕ ಛಾಯೆ!.,ಜೀವ ಉಳಿದರೆ ಸಾಕೆಂಬ ಕರೆಗಳು ಭಗವಂತನ ಕಿವಿ ತಲುಪಿರಬಹುದು. ಈಗಾಗಲೇ ಈ ಸುದ್ದಿಯನ್ನಾಧರಿತ ಸತ್ಯ ಘಟನೆಯೊಂದು ನಡೆದಿದೆಯೆಂದರೆ ಆಶ್ಚರ್ಯ!” ವಯನಾಡು” ದುರಂತದಲ್ಲಿ ಸಿಲುಕಿದ ಅಜ್ಜಿ,ಮೊಮ್ಮಗಳದು.ಅಜ್ಜಿ ತನ್ನ ಮೊಮ್ಮಗಳೊಂದಿಗೆ ನೀರಿನ ಸೆಳೆತಕ್ಕೆ ಸಿಲುಕಿದರೂ ಹೇಗಾದರೂ ಮಾಡಿ ಬದುಕಬೇಕು,ಮೊಮ್ಮಗಳನ್ನು ಕಾಪಾಡಬೇಕೆಂದು ಅರಣ್ಯ ಪ್ರದೇಶದಲ್ಲಿ ನೀರಿನೊಂದಿಗೆ ಕಷ್ಟ ಪಟ್ಟು
,ಎದುರಿಗೆ ಮೂರು ಗಜಗಳನ್ನು ಕಂಡು ಭಯಗೊಳ್ಳುತ್ತಾರೆ.ಮೊದಲೆ ಆಪತ್ತಿಗೆ,ದುರಂತಕ್ಕೆ ಸಿಲುಕಿದ ಬೇರೆ ದಾರಿ ಕಾಣದೆ ಕೈ ಮುಗಿದು ದೇವರ ಸ್ವರೂಪ‌ ಆನೆಯೆಂದು ನಮ್ಮ ಜೀವನಕ್ಕೆ ಯಾವುದೇ ತೊಂದರೆ ಮಾಡಬೇಡೆಂದು,ಸತ್ತು ಬದುಕಿದ ಜೀವ ಉಳಿಸೆಂದು ಅಂಗಲಾಚಿಸುವಾಗ,ಅಲ್ಲಿದ್ದ ಆನೆಗಳ ಕಣ್ಣಲ್ಲಿ ನೀರು ಕಂಡು ಮೌನವಾಗುತ್ತಾಳೆ.ಮಾನವೀಯತೆಯನ್ನು ಮೆರೆದ ಆನೆಗಳು ಬೆಳಗಾಗುವ ತನಕ ಅಲ್ಲಿಯೇ ಅಜ್ಜಿ ಮೊಮ್ಮಗಳಿಗೆ ರಕ್ಷಣೆ ಒದಗಿಸಿ ಹೊರಟು ಹೋದ ಘಟನೆ ಈಗ ಪ್ರಸ್ತುತವೆನಿಸುತ್ತದೆ.ಪ್ರಕೃತಿಯ ಸಹಜ ಜೀವಂತಿಕೆಯನ್ನು ಆಡಂಬರದ ಆಧುನಿಕತೆಯ ಹೆಸರಲ್ಲಿ ಹಸಿರನ್ನು ಕಸಿದ ಪರಿಣಾಮ ಉಸಿರು ಚಲ್ಲುವ ಸ್ಥಿತಿಗೆ ಬಂದು ನಿಂತಿದ್ದೆವೆ ಎಂದರೆ ತಪ್ಪಾಗದು.ಇತ್ತ ಆಣೆಕಟ್ಟುಗಳು ತುಂಬಿ ತುಳುಕುವುದಷ್ಟೆಅಲ್ಲ.ಸತ್ತ ಹತ್ತು ಹಳ್ಳಿಯ ಜನಜೀವನ ಅತಂತ್ರ ಸ್ಥಿತಿಯಲ್ಲಿದೆಯೆಂದರೆ ಮೈಮನಸ್ಸು ದುಃಖ ಪಡುತ್ತಿದೆ.ಎತ್ತ ಸಾಗಿದೆ ಮಾನವನ ಬದುಕು?
ಪ್ರಕೃತಿಯೆಂಬ ಕೋರ್ಟ್ ನಲ್ಲಿ ವರುಣನೆಂಬ‌ ನ್ಯಾಯಾಧೀಶನ ಮುಂದೆ?

ಭೂಮಿಯ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋದಂತೆಲ್ಲ,ಮುಂದೊಂದು ದಿನ ಇದಕ್ಕಿಂತ ಭೀಕರ ಬರಗಾಲದ ಜೊತೆಗೆ,ಭೀಕರ ಮಳೆ,ಸುನಾಮಿ,ಚಂಡಮಾರುತ,ಹೀಗೆ ಹತ್ತು ಹಲವು ಪ್ರಕೃತಿ ವಿಕೋಪಗಳು ವಿಚಿತ್ರವಾಗಿ ಮನುಷತ್ವದ ಅಸ್ತಿತ್ವಕ್ಕೆ ಪೂರ್ಣ ವಿರಾಮ ನೀಡುವ ಹೆಜ್ಜೆಗಳು ಕಾಣಸಿಗಬಹುದು…
ಅವೈಜ್ಞಾನಿಕ ರಸ್ತೆ ಕಾಮಗಾರಿ,ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಸ್ತೆಗಳ ಮೇಲ್ದರ್ಜೆ, ವಿಸ್ತರಣೆಯ ವೇಳೆ ಅವೈಜ್ಞಾನಿಕವಾಗಿ ೯೦ ಡಿಗ್ರಿಗೆ ಗುಡ್ಡ ಕಡಿದಿರುವುದೂ ಕುಸಿತಕ್ಕೆ ಕಾರಣವಾಗಿದ್ದು”ವಯನಾಡು” ಮತ್ತು “ಉತ್ತರ ಕನ್ನಡ”ದ ಶಿರೂರಿನಲ್ಲಿ ಘೋರ ದುರಂತ ಸಂಭವಿಸಿದ್ದು ಇದೆ ಕಾರಣಕ್ಕೆ,ಜೀವಹಾನಿಗೆ ಕಾರಣವಾಗಿದೆ. ಸಹಸ್ರಾರು ವರ್ಷಗಳ ಗುಡ್ಡವೇ ಕಣ್ಮರೆಯಾಗಿದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟಗಳಲ್ಲಿ ನಿರಂತರವಾಗಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.ಮುಂದಿನ ಪೀಳಿಗೆಗೆ ಸ್ವಾಸ್ಥ್ಯ ಪರಿಸರ ಉಳಿಸದೇ ಹೋದರೆ ಅವರ ಬದುಕು ಇನ್ನೂ ದುರಂತದ ಕಂದಕಕ್ಕೆ ನಾವೇ ದೂಡಿದಂತಾಗುತ್ತದೆ. ಇನ್ನಾದರೂ ನದಿ ಪ್ರದೇಶ, ಸಮುದ್ರದ ತೀರ,ಗುಡ್ಡ ಕುಸಿತದ ಆಸುಪಾಸಿನಲ್ಲಿ ಬದುಕ ಕಟ್ಟಿಕೊಂಡ‌ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ,ಜೀವಗಳ ಮಾರಣ ಹೋಮ ತಡೆದಂತಾಗುತ್ತದೆ.

ಭೂ ಕುಸಿತ ತಡೆಯುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಹೆಚ್ಚು ಮಳೆಯಾಗುವ ಬೆಟ್ಟಗುಡ್ಡಗಳ ಕಡೆ ಮನುಷ್ಯ ಹಸ್ತಕ್ಷೇಪ ಮತ್ತು ವ್ಯವಹಾರಿಕ ಕೇಂದ್ರಗಳಾನ್ನಾಗಿ ಮಾಡದೇ,ಬಿದ್ದ ಮಳೆಯ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ದೊಡ್ಡ ದೊಡ್ಡ ಬೇರುಗಳು ಬಿಡುವ ಮರಗಳನ್ನ ಬೆಳಸಬೇಕು.ಪ್ರತಿ ವರ್ಷ ಇದೇ ಸಮಯದಲ್ಲಿ ನರಕ ದರ್ಶನ ಆಗದಂತೆ ಪರ್ಯಾಯ ಜೀವನ ವ್ಯವಸ್ಥೆ ಕಂಡುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತವಾಗಿದೆ.ಮನುಷ್ಯ ಮಾಡುವ ತಪ್ಪುಗಳಿಗೆ ಪ್ರಕೃತಿ ಕಲಿಸಿದ ಪಾಠದ ಸ್ಯಾಂಪಲ್ ಅಷ್ಟೇ!ಇನ್ನಾದರೂ ಎಚ್ಚೆತ್ತುಕೊಳ್ಳೊಣ!

*ಚಿತ್ರಕೃಪೆ: ಗೂಗಲ್


16 thoughts on “

  1. ನಿಮ್ಮ ಬರವಣಿಗೆಯ ಶೈಲಿ ಮನಮುಟ್ಟುತ್ತದೆ ಮೇಡಮ್….ವಾಸ್ತವಿಕತೆ ನಮ್ಮ ಮುಂದೆ ತೆರೆದಿಟ್ಟಂತಿದೆ

  2. ಮಳೆರಾಯನ ಆರ್ಭಟಕ್ಜೆ ಆದ ಜೀವಹಾನಿ,ಭೂಹಾನಿ,ಯಾರಿಗೂ ಬೇಡವಾದ ಇಂಥಹ ಸನ್ನಿವೇಶಗಳು,ನೋವುಗಳು ತಡೆಯಲಾರದ ಸಂಕಟಗಳ ಬಗ್ಗೆ ಬರೆದ ನಿನ್ನ ಬರವಣಿಗೆಯಲ್ಲಿ ಮೂಡಿ ಬಂದ ಆ ಸಂದರ್ಭದ ಛಾಯೆ ಕಣ್ತುಂಬಿ ಬಂತು.ಸುಂದರವಾಗಿ ಮೂಡಿ ಬಂದಿದೆ. ಗೆಳತಿ.

  3. ಪ್ರಕೃತಿಯ ಮೇಲೆ ಮನುಷ್ಯನ ವಿಕೃತಿ ಪ್ರಕೃತಿ ಎದುರಾಗಿ ನಿಂತರೆ…….. ಮನುಕುಲದ ಸರ್ವನಾಶ…… ಇನ್ನಾದರೂ ನಾವೆಲ್ಲ ಎಚ್ಚರಿಕೆ ವಹಿಸಿ ನಮ್ಮ ಉಳಿವಿಗಾಗಿ ಪ್ರಕೃತಿ ಉಳಿಸೋಣ ಜೀವ ಆಸ್ತಿ ಕಳೆದುಕೊಂಡ ಬಂಧು ಭಾoದವರಿಗಾಗಿ ನಮ್ಮ ಸಹಾಯ ಹಸ್ತ ನೀಡೋಣ ನಿನ್ನ ಬರಹ ಚೆನ್ನಾಗಿ ಮೂಡಿ ಬಂದಿದೆ ❤️❤️❤️
    J.N.

  4. aಒಳ್ಳೆಯ ಲೇಖನ ಬರೆದಿದ್ದೀರಿ. ಅಭಿನಂದನೆಗಳು.

    ಹೂಲಿಶೇಖರ ಹಿರಿಯ ಸಾಹಿತಿಗಳು ಬೆಂಗಳೂರು

  5. ಪ್ರಸ್ತುತ ಸ್ಥಿತಿಯ ಚಿತ್ರಣ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ…. ಅಭಿನಂದನೆಗಳು ನಿಮಗೆ…

  6. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ಮಾಡಿದ ದಬ್ಬಾಳಿಕೆಯ ಘೋರ ಪರಿಣಾಮ ಇದು,
    ಎರಡು ಘಟನೆಗಳನ್ನು ಸಮೀಕರಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡುವ ಉತ್ತಮ ಬರಹ.
    ಶುಭವಾಗಲಿ
    ನಾಗರಾಜ ಆಚಾರಿ ಕುಂದಾಪುರ

  7. ಮನುಷ್ಯನ ದುರಾಸೆ… ಪ್ರಗತಿಯ ಹೆಸರಿನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡಗಳ ಕಡಿತ… ಪ್ರಕೃತಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಿದೆ…ಎಂಬ ಮಾತನ್ನು ಬಹಳ ಕಾರ್ಮಿಕವಾಗಿ ಬರೆದಿದ್ದಿ…ಸುಪರ್

  8. ಪ್ರಕೃತಿಯನ್ನು ಹಾನಿಗೈದು ಈಗ ನೋವನ್ನು ಅನುಭವಿಸುತ್ತಿರುವ ನಾವು ಬಿತ್ತಿದ್ದನ್ನೇ ಬೆಳೆಯುತ್ತಿದ್ದೇವೆ, ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇನ್ನಾದರೂ ನಾವು ಎಚ್ಚರಾಗದಿದ್ದರೆ ಭವಿಷ್ಯ, ಮುಂದಿನ ಪೀಳಿಗೆಯ ವಿನಾಶಕ್ಕೆ ನಾವೇ ಕಾರಣರಾಗುತ್ತೇವೆ.

    ವಾಸ್ತವದ ಚಿತ್ರಣವನ್ನು ನೀಡಿದ ಅರ್ಥಪೂರ್ಣ ಲೇಖನ ಮೆಡಮ್.

    …ಶುಭಲಕ್ಷ್ಮಿ ನಾಯಕ

  9. ಎಂತಹ ಸುಂದರ ಲೇಖನ
    ಮನಕಲುಕುವ ವಾಸ್ತವತೆಗೆ
    ಹೃದಯ ಹಿಂಡಿಹಿಪ್ಪಿಯಾದ
    ಅನುಭವ
    ಪ್ರಕೃತಿಗೆ ವಿರುದ್ದ ಬಾಳಲಾಗದು ಮನುಜ
    ಎಂದು ಎಚ್ಚರಿಸಿದೆ ನಿಮ್ಮ ಬರವಣಿಗೆ

    ಡಾ.ಸುಧಾ ಧಾರವಾಡ

  10. ಟೀಚರ್ ನಿಮ್ಮ ಬರವಣಿಗೆಯಲ್ಲಿ ಪ್ರಕೃತಿ ನಮಗೆ ಮುಖ್ಯ ಹಾಗೂ ಪ್ರಕೃತಿ ಕಾಪಾಡುವದರಿಂದ ನಮ್ಮ ಮುಂದಿನ ಪೀಳಿಗೆಯನ್ನು ಕಾಪಾಡಲು ಸಾಧ್ಯ.ಎಲ್ಲರ ಮನೆ ಮನೆ ಮುಟ್ಟುವ ಹಾಗೆ ಬರವಣಿಗೆ ಮುಡಿ ಬಂದಿದೆ

Leave a Reply

Back To Top