ಸಮ್ಮಾನದ ಬೀಡಿಗೆ
ಶಾಲಿನಿ ಆರ್.
ಪ್ರಕೃತಿಯ ಭಾವೊತ್ಕರ್ಷ
ದಿನದಿಂದ ದಿನಕೆ
ಎಲ್ಲೆಲ್ಲೂ ನಗೆಯ ರಂಗವಲ್ಲಿ
ನದಿ ಕಾನನಗಳ
ಅಂಗಳದ ತುಂಬ,
ಹೂ ಹಾಸಿದೆ
ಡಾಂಬರಿನ ಹಾದಿಯುದ್ದಕೂ
ಮರುಳಾಗಿ ಒಂದೇ ಹಠ
ತುಸು ಹೆಚ್ಚೆ ಹೊತ್ತು ನಿಲುವೆ
ವಾಹನಗಳ ಸುಳಿವಿರದ
ಹಾದಿ ತುಂಬ,
ಕಂಡು ಕಾಣದ ಹಕ್ಕಿ ಪಕ್ಕಿ
ಮರಳಿ ಕಲರವ
ಮೂಲೆ ಮೂಲೆಯ
ಕಾಂಕ್ರೀಟಿನ ಕಾಡಿನಲ್ಲೆಲ್ಲಾ,
ಜಂಗಮವಾಣಿಯಲಿ
ಸೆರೆ ಹಿಡಿದರು ದಣಿವಾರದ
ಪ್ರಕೃತಿಯ ಹಾವಾಭಾವ
ಮತ್ತದರ ಕಾಪಿಡುವ ಧಾವ,
ಮನುಜನ ಸಹಜ ಭಾವ!
ನಿಧಾನಿಸಿದೆ ಪ್ರಕೃತಿ
ಹೂ ಮನದ
ಉಸಿರಿನೇರಿಳಿತದಲಿ
ಶುದ್ದ ನರನಾಡಿನಲಿ ,
ಸಮ್ಮಾನದಿ ನಲಿವ
ಪರಿಸರಕೂ ಬಂದಿದೆ ಉನ್ಮಾದ
ಎಂದೋ ಕಳೆದ
ಪಾರದರ್ಶಕ ನಡಿಗೆ
ಕಳೆಯದಿರಲಿ ಮತ್ತೆಂದು
ಹರಕೆ ತೇರು ಹರಿದಿದೆ,
ತಗ್ಗು ದಿಬ್ಬಗಳ ಬಾಳಿನಲು
ಸಗ್ಗತೋರಿದೆ ಸೃಷ್ಟಿ ಸಮಷ್ಟಿ,
ಹುಸಿ ಮುನಿಸ ಮುಸಿ ನಗುತ
ಕುಡಿಗಣ್ಣಲೆ ಸನ್ನೆ ಮಾಡಿಹಳು
ಹಸಿರುಟ್ಟು ನಲಿದು
ಮತ್ತೆ ಎಚ್ಚರಿಸುತಿಹಳು,
ಪಾಠ ಕಲಿಸಲೆಂದೇ ಬಂದ
ಉಸಿರ ಸೋಕಿದ ಗಾಳಿ,
ಪಲ್ಲಟಗೊಂಡಿದೆ
ಧಾವಂತ ಬದುಕು,
ಅತಿಯಲ್ಲೆ ಅವನತಿಯ
ಸೂತ್ರ ಹಿಡಿದು,
ಮತ್ತೆ ಹುಡುಕಾಟ
ಮೂಲ ಮಂತ್ರದ ತಡಕಾಟ
ಮುಖವಾಡ ಇದ್ದ ಮುಖಕೆ
ಮತ್ತೊಂದು ಮುಖವಾಡದ ಕವಚ
ಕಳಚಿಡುವ ತವಕ ವೇಗ,
ಮತ್ತೆ ಸರಳ ಬದುಕಿಗೆ
ಸಹಜ ಸಮ್ಮಾನದ ಬೀಡಿಗೆ…
************
Very nice madam