ಅವ್ವನ ನೆನಪಲಿ

ಅವ್ವನ ನೆನಪಲಿ…

ಮಲ್ಲಿಕಾರ್ಜುನ ಕಡಕೋಳ

ಸಗರನಾಡು – ಮಸಬಿನ  ಪ್ರಾಂತ್ಯದ ಸುರಪುರ ಬಳಿಯ ” ಜಾಲಿಬೆಂಚಿ ”  ಅವ್ವನ  ತವರೂರು. ಏಳೂರು  ಗೌಡಕಿಯ ವತನದಾರ ಮನೆತನದಾಕೆ.  ಕಡಲೇಬೇಳೆ ಬಣ್ಣದ ತುಂಬು ಚೆಲುವೆಯಾದ  ಆಕೆಯನ್ನು ನೋಡಿದ  ಅಪ್ಪನಿಗೆ, ಮದುವೆಯಾಗುವುದಾದರೇ.. ಈ ಸಾಹೇಬಗೌಡರ ಮಗಳು ನಿಂಗಮ್ಮ ಗೌಡತಿಯನ್ನೇ ಆಗಬೇಕೆಂಬ ಸಂಕಲ್ಪ  ಮಾಡಿದ.

ಅಪ್ಪನಿಗೆ ಆಗ ಉಂಡುಡಲು  ಯಥೇಚ್ಛವಾಗಿದ್ದುದು ಕಡುಬಡತನ ಮಾತ್ರ. ನಮ್ಮೂರ ಸಾಹುಕಾರರ ಹೊಲ – ಮನೆಯಲ್ಲಿ ಜೀತಕ್ಕಿದ್ದ. ಸಾಹುಕಾರರಿಗೆ  ನೂರಾರು ಎಕರೆ ಜಮೀನು. ಅದೆಲ್ಲ  ಜಮೀನು ತನ್ನದೆಂದು ” ಫೋಸು ” ಕೊಟ್ಟು ಸುಳ್ಳುಹೇಳಿ ಅವ್ವನನ್ನು ಲಪಟಾಯಿಸಿದನಂತೆ. ೧೯೪೮ ರ ರಜಾಕಾರರ ಸಪಾಟಿಯಷ್ಟೊತ್ತಿಗೆ  ಅವರ ಲಗ್ನವಾಗಿ ಅಜಮಾಸು ಎರಡು  ಪಟ್ಟಗಳೇ ಅಂದರೆ ಇಪ್ಪತ್ನಾಲ್ಕು  ವರುಷಗಳು ಕಳೆದಿದ್ದವಂತೆ. 

ಒರಟು ಕಗ್ಗಲ್ಲಿನಂತಹ  ಅಪ್ಪನನ್ನು  ತಿದ್ದಿ,ತೀಡಿ  ಮೂರ್ತಿ  ಮಾಡಿದ  ಕೀರ್ತಿ ತನ್ನದೆಂದು  ಅವ್ವ  ಹೇಳುತ್ತಿದ್ದಳು. ಅದಕ್ಕೆ  ಅಪ್ಪ  ಕೊಡುವ  ಉತ್ತರವೆಂದರೆ  ನೀನೇನು  ಕಿತ್ತೂರ  ಚೆನ್ನಮ್ಮ… ನೇರೂ  ಮಗಳು  ಇಂದ್ರಾಗಾಂಧೀನಾ..? ಅಂತಿದ್ದ.  ಆದರೆ  ನಮ್ಮ  ಮನೆತನವೆಂಬ  ವೃಕ್ಷದ  ಬೇರು, ಬೊಡ್ಡೆ, ಒಟ್ಟು  ಮರವೇ  ಅವಳು.  ನನ್ನಪ್ಪ , ಮಡಿವಾಳಪ್ಪನವರ  ತತ್ವಪದಗಳೊಂದಿಗೆ ಊರೂರು  ಶಪಥ  ಭಜನೆಗಳನ್ನು  ಹುಡುಕುತ್ತ  ತಿರುಗುವ  ತಿರುಗಲು ತಿಪ್ಪ.  ಅವನೊಂದಿಗೆ  ತಾನು  ಕಳೆದ ಮುಕ್ಕಾಲು  ಶತಮಾನದ  ಕತೆಗಳನ್ನು  ಅವ್ವ  ಸ್ವಾರಸ್ಯಕರವಾಗಿ  ನಿರೂಪಿಸುತ್ತಿದ್ದಳು.  

ನನ್ನವ್ವ  ತೀರಿಕೊಂಡು(29.05.2015) ನಾಲ್ಕು  ವರುಷ  ತೀರಿದವು. ಯಾವುದೇ  ಕಾರಣಕ್ಕು  ತಾನು  ಕಡಕೋಳ ಮಡಿವಾಳಪ್ಪನ  ಸನ್ನಿಧಾನದಲ್ಲೇ  ಪ್ರಾಣ  ಬಿಡಬೇಕೆಂಬುದು  ಅವಳ ಸಂಕಲ್ಪವಾಗಿತ್ತು.  ಅಷ್ಟಕ್ಕು  ಅವ್ವ  ತನ್ನ  ಸಂಕಲ್ಪ  ಈಡೇರಿಸಿಕೊಂಡಳು.  ೧೯೮೯ ರಲ್ಲಿ  ಅಪ್ಪ  ತೀರಿಕೊಂಡ  ಮೇಲೆ  ಅವ್ವ  ನಮ್ಮೊಂದಿಗೆ  ದಾವಣಗೆರೆಯಲ್ಲೇ  ಇರ್ತಿದ್ದಳು.  ಹಾಗಿರಬೇಕಿದ್ರೇ  ನಮ್ಮನೆಗೆ  ಬರುವ ರಂಗಕರ್ಮಿಗಳು, ಸಾಹಿತಿ,  ಪತ್ರಕರ್ತರಿಗೆ  ಅವಳ  ಪರಿಚಯ  ಮಾಡಿ ಕೊಡದಿದ್ದರೆ  ಸಣ್ಣ  ಮಕ್ಕಳಂತೆ  ಮುನಿಸಿಕೊಂಡು  ಬಿಡ್ತಿದ್ದಳು. 

 

ಕಂಚ್ಯಾಣಿ ಶ್ಯಾಣಪ್ಪ ,  ಪಿ.ಬಿ. ಧುತ್ತರಗಿ,  ಸತ್ಯಂಪ್ಯಾಟಿ ನಿಂಗಣ್ಣ ಮಾಸ್ತರ ( ಅವ್ವನ  ಮಾತಿನಲ್ಲಿ ) ,  ರವಿ ಬೆಳಗೆರೆ, ಬಸೂ, ಆರ್.ನಾಗೇಶ್, ಮುಖ್ಯಮಂತ್ರಿ ಚಂದ್ರು,  ಆರ್. ನಾಗರತ್ನಮ್ಮ, ಆರ್.ಟಿ. ರಮಾ,  ಮಾಸ್ಟರ್  ಹಿರಣ್ಣಯ್ಯ….ಹೀಗೆ  ಯಾರೇ  ಬರಲಿ  ಅವರೊಂದಿಗೆ  ತಾನು  ಮಾತಾಡುವ  ಅದಮ್ಯ  ಹಂಬಲ  ಆಕೆಗೆ.

ಒಮ್ಮೆ ಎಂ.ಪಿ. ಪ್ರಕಾಶ್ ನಮ್ಮನೆಗೆ  ಬಂದು ಅವಳೊಂದಿಗೆ ತಾಸೊಪ್ಪತ್ತು  ಸಂವಾದಕ್ಕಿಳಿದರು. ಅವ್ವ ಜವಾರಿ ಸ್ವರದಲಿ ಮಧುರವಾಗಿ  ಹಾಡುವ  ಮಡಿವಾಳಪ್ಪನ ತತ್ವಪದ ಕೇಳಿ ಅವರು  ಮೈ ಮರೆತರು. ಊಟಮಾಡಿ ಮತ್ತೆ ಮತ್ತೆ  ಹಾಡುಕೇಳಿ…  ಹೋಗುವಾಗ,  ಎಂ.ಪಿ. ಪ್ರಕಾಶ  ಅವ್ವನ  ಕಾಲುಮುಟ್ಚಿ  ನಮಸ್ಕರಿಸಿದರು.  

ಪ್ರಕಾಶ  ಹೋದಮೇಲೆ ” ಅವರು  ದೊಡ್ಡವರು.. ಮಂತ್ರಿಗಳು ” ಅಂತ ಹೇಳಿದೆವು. ಅವಳಲ್ಲಿ ಯಾವ  ಪ್ರತಿಕ್ರಿಯೆಯೂ  ಇರಲಿಲ್ಲ. ಆದರೆ ಅವರು ಸ್ವಾಮಿಗೋಳು, ಅಯನೋರು  ಅಂದೆವು… ಆಗನೋಡಿ  ಅವಳ  ಪಾಪಪ್ರಜ್ಞೆಯ  ಕಟ್ಟೆಒಡೆದು  ಭೋರ್ಗರೆಯತೊಡಗಿತು. 

” ಅಯ್ಯೋ ನರಕಕ್ಕೆ ಹೋಗ್ತಿನಪೋ..  ಜಂಗಮರು ನನ್ನ ಪಾದಮುಟ್ಟಿ ನಮಸ್ಕಾರ ಮಾಡಿದರು ” ಅಂತ ಭೋರ್ಯಾಡಿ ಗೊಳೋ ಅಂತ ದುಃಖಿಸ ತೊಡಗಿದಳು. ಅವರು ಮತ್ತೆ  ಯಾವಾಗ ಬಂದಾರು…ಅವರ ಪಾದ  ತೊಳೆದು ಧೂಳುಪಾದಕ  ಕುಡಿದು  ಪಾವನವಾಗಲು ವರುಷಗಟ್ಟಲೇ  ಶಬರಿಯಂತೆ ಕಾಯ್ದಳು. ಕಡೆಗೂ ಪ್ರಕಾಶರು ಬರಲೇಇಲ್ಲ.       

ಅವ್ವ ನನಗೆ ಬಾಲ್ಯದಲ್ಲಿ ಮಾಡಿ ಕೊಡುತ್ತಿದ್ದ ಬಿಸಿ ಬಿಸಿ ರೊಟ್ಟಿ ಮುಟ್ಟಿಗೆ ಎಂದರೆ ಮೃಷ್ಟಾನ್ನ ಭೋಜನ ಅಂತಾರಲ್ಲ ಅಷ್ಟೊಂದು ಸಂತೃಪ್ತಿಯ ಊಟ ನನಗದು. ಅವಳೇನೇ ತಿಂಡಿ, ಅಡಿಗೆ ಮಾಡಿರಲಿ ಅದಕ್ಕೆ ಅವ್ವ ಎನ್ನುವ ಕೈಗುಣದ ರುಚಿ ಇರ್ಲೇಬೇಕು. ಅನ್ನಕ್ಕೆ ಸಾರು ಹಾಕೊಂಡು ಉಂಡಂಗೆ ಹೋಳಿಗೆಗೆ ತುಪ್ಪ ಸುರುವಿಕೊಂಡು ಉಂಡಾಗಲೇ ಆಕೆಗೆ ಸಮಾಧಾನ. ಬಾಯಿ ಕಟ್ಟುತ್ತಿರಲಿಲ್ಲ. ಒಂದಲ್ಲ ಎರಡು  ಬಾರಿಬಿದ್ದು  ಕಾಲು ಮುರಕೊಂಡಳು.  ಅಷ್ಟಾದರೂ ಆಕೆ ಬೆತ್ತ ಹಿಡಿಯಲಿಲ್ಲ. ಆದರೆ ಕಡೆ ಕಡೆಗೆ ವಾರಗಟ್ಟಲೇ ಊಟ  ಬಿಟ್ಟಳು. ಪೂರ್ತಿ ಮೆತ್ತಗಾದಳು. ದಾವಣಗೆರೆಯಿಂದ ತನ್ನನ್ನು  ಕಡಕೋಳಕ್ಕೆ ಕರ್ಕೊಂಡು  ಹೋಗಬೇಕೆಂದು ಎದೆಯೊಡೆದು ಹಾಸಿಗೆ  ಹಿಡಿದಳು. 

ನೀನು ಇಲ್ಲೇ ತೀರಿಕೊಂಡರೂ ಊರಿಗೆ (ಕಡಕೋಳ) ತಗೊಂಡು  ಹೋಗ್ತೀನೆಂದರೂ  ಕೇಳುತ್ತಿರಲಿಲ್ಲ. ” ಮಲ್ಲಣ್ಣ… ನೀನು ತಗೊಂಡು  ಹೋಗ್ತಿ  ಖರೇ.. ನನಗ ಹ್ಯಂಗೊತ್ತಾಗ್ತದಪ.. ಸತ್ತು  ಹೋಗಿರ್ತಿನಲ್ಲ…ಊರಲ್ಲಿ ಮಡಿವಾಳಪ್ಪನ ನೆಲಕ್ಕ ತಲಿ ಕೊಟ್ಟು  ಪ್ರಾಣ ಬಿಡಬೇಕು ” ಅಂತಿದ್ಳು..ಹಂಗೇ  ಆಯ್ತು. 

೨೦೧೫ ರ ಮೇ ೨೮ ರಂದು  ಮುಂಜಾನೆ ಡಾವಣಗೇರಿಯಿಂದ  ಹೊರಟು ರಾತ್ರಿ ಹತ್ತುಗಂಟೆಗೆ  ಕಡಕೋಳ ತಲುಪಿದಾಗ ಅವಳಿಗೆ ಸ್ವರ್ಗ ತಲುಪಿದ  ಖಂಡುಗ ಖುಷಿ. ಮಡಿವಾಳಪ್ಪನ ಕಾಯಕ ಭೂಮಿಯ ಮಣ್ಣಲ್ಲಿ ಮಣ್ಣಾಗಲು  ಸಂತಸ  ಪಟ್ಟಳು.  ರಾತ್ರಿಯೆಲ್ಲ, ಮತ್ತು ಮಳ್ಳೇ  ಮರುದಿನ  ಊರಿಗೂರೇ ಬಂದು  ಅವ್ವನೊಂದಿಗೆ ಮಾತಾಡಿತು.  ಮೇ ೨೯ರ ಸಂಜೆ ನಾಲ್ಕುಗಂಟೆಗೆ  ಮಡಿವಾಳಪ್ಪನ  ಧ್ಯಾನದೊಳಗೆ ಅವ್ವ ಲೀನವಾದಳು.

***********

2 thoughts on “ಅವ್ವನ ನೆನಪಲಿ

Leave a Reply

Back To Top