ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಕಣ್ಣೀರಿಗೆಲ್ಲಿಯ ಅರ್ಥ
ಬಿಸಿಯಾಗಿರುವಾಗಲೇ
ಹಳಚಿ ಹೋದ ಅಡುಗೆಗೆ
ಮಾಲಿಕರಾಗುವ ಕಷ್ಟ
ಯಾರಿಗೂ ಬರಬಾರದು
ಒಲವೆಂಬುದು ಅದೆಷ್ಟು ಎಚ್ಚರದಲಿ
ಉಂಡರೂ ತಟ್ಟೆ ಯಿಂದ
ಸೋರಿ ನೆಲಕೆ ಸೇರಿ ಮರಳಿ
ಕೈಗೆಟುಕದಂತಾದುದಕೆ
ಸಾಕ್ಷಿಯಾದ ದುರ್ದೈವಿಗಳ
ಪಟ್ಟಿಯಲಿ ನಮ್ಮ ಹೆಸರಿಗೂ
ಜಾಗ ಇಷ್ಟು ಬೇಗ ಸಿಗುವದೆಂದು
ಎಣಿಸಿರದ ಮೂರ್ಖತನಕೆ
ಸಾಕ್ಷಿಯಾಗಿರುವ ಹಣೆಬರಹ
ನಿರ್ಧಾರವಾಗಿದೆ.
ಒಂದಿಷ್ಟು ಹರಿದಾಗಲೆ
ನಾವು ಅಂಚಿಗೆ ಸರಿದದ್ದು
ಪರಿತ್ಯಕ್ತರಾದದ್ದು
ಮಾತಿನಲಿ ಹೇಳದೆ ನಾ
ಸೊತು ಹೋಗಿರುವೆ
ನಾಜೂಕು ಗಾಜನು
ಒಡೆಯದಂತೆ
ಕಾದಿಟ್ಟಿದ್ದೆ ಟಳಾರೆಂದು
ಚೂರು ಚೂರಾದ ಮೇಲೆ
ಯಾವ ದೇವರು
ತಾನೆ ಕೂಡಿಸಬಲ್ಲ
ವಿದಾಯಕ್ಕೆ ನಾಕು ಹನಿ
ಕಣ್ಣೀರು ಮಾತಿಲ್ಲ ದ
ಎರಡು ಮಾತು
ಅರ್ಪಿಸಿ ದೂರ ಹೊರಟಿರುವೆ
ಇದೇ ಜನ್ಮದಲಿ ಮರಳಿ
ಸೇರುವ ಕನಸು ಕೈಗೂಡದ ಅರಿವಿದ್ದೂ
ಕನಸು ಕಾಣುವ ಹುಚ್ಚುತನ ಮಾಡುವ
ಮನಕೆ ನಾನೆ ಜವಾಬುದಾರ
ಒಂದು ಸತ್ಯದ ಮಾತು
ಈ ವಿರಹವೂ ಒಂದು ರೀತಿಯಲಿ
ಸುಖ ಕೊಡುವದು
ಪ್ರೇಮದ ದುರಂತಕ್ಕೆ
ಇನ್ನೊಂದು ಅಧ್ಯಾಯ ಸೇರಿದೆ ಅಷ್ಟೇ.
ವೈ.ಎಂ.ಯಾಕೊಳ್ಳಿ
ಅತ್ಯಂತ ಭಾವಪೂರ್ಣವಾದ ಕವಿತೆ ಸರ್ ಧನ್ಯವಾದಗಳು
ಅದ್ಭುತ ಸರ್