ಕಾವ್ಯ ನೀತಿ
ಶ್ರೀವಲ್ಲಿ ಶೇಷಾದ್ರಿ ಅವರ ಕವಿತೆ
ಪ್ರಕೃತಿಯೊಳಗಣ ರಾಜನೀತಿ.
ಓ ಪ್ರಕೃತಿ ನೀನು ಅಸ್ತಿ ಹಸಿ ಬಿಸಿ ರಕುತದ
ಚರಾಚರಗಳು ಈ ರಂಗಸ್ಥಳದೊಳಗೆ ಒಮ್ಮೆ
ಅಂಕುರಾದಾಗಿನಿಂದ ಒಂದಂಶವಾಗುವವರೆಗೂ
ಉಳಿವಿಗಾಗಿ ಹೋರಾಟ ನಡೆಸಿ ಸೆಣಸಿ
ಬೆಂದು ಹೈರಾಣಾಗಿ ಇಲ್ಲವೆ ಬಲು ಸರಾಗವಾಗಿ
ಅದು ಅವರವರ ವೈಯಕ್ತಿಕ ವಿಷಯ ಬಿಡು
ಬಸಿರ ಗೆದ್ದು ಉಸಿರ ಚೀಲವ ಬಿಗಿ .ಹಿಡಿದು
ಅಗಣಿತದ ಅನಂತ ವಿಭಿನ್ನ ಜೀವಜಾತಗಳು
ಹಗಲಿರುಳು ಅವಿರತವೂ ಭಾರವೆನ್ನದವಳೆ
ಓ ನಿನ್ನ ಮಡಿಲಿದು ರಾಜಮಾತೆಯೊಡಲು ಕಣೆ.
ಓ ಪ್ರಕೃತಿ ನೀನು ಸ್ಥಿತಿ ಒಳಗಡಗಿದ ತುತ್ತು ಚೀಲಕ್ಕಿಷ್ಟು
ಬಣ್ಣ ಬಣ್ಣದ ವೇಷ ಗಂಟೆಗೊಂದು ಘಳಿಗೆಗೊಂದು
ಮನದ ಮಂಥನ ಆತ್ಮಾವಲೋಕನ ಅನುಸಂಧಾನ
ಮತ್ತೊಂದೆಡೆ ಗಟ್ಟಿಜಟ್ಟಿ ಪಟ್ಟು ಒಟ್ಟಾರೆಯಾಗಿ
ಅಷ್ಟೊ ಇಷ್ಟೊ ಗುಪ್ತ ಲೆಕ್ಕಾಚಾರದಲ್ಲಿ
ತಿಂದು ತೇಗಿ ಹೆಕ್ಕಿ ಕಕ್ಕಿಬಿಕ್ಕಿ ಕಣ್ಣು ಕುಕ್ಕಿದರೂ
ಸಂಕುಲಕ್ಕೆ ಸಾವರಿಸಿ ಸರಿಗಟ್ಟಿ ಅತ್ತಲಿಂದಿತ್ತ
ನುರಿತ ನಾಯಕಿಯಂದದಲಿ ತಾರಾಡಿ ಹೋರಾಡಿ
ಹವಣಿಸಿ ಹೊಂಚು ಹಾಕಿ ಹೊತ್ತು ಹೊತ್ತಿಗೂ ಹಂಚುವ
ನೀನೋರ್ವ ಪ್ರಜಾಪ್ರಭುತ್ವದಾಯಿತ್ವೆ ಕಣೆ.
ಓ ಪ್ರಕೃತಿ ನಿನಗೆ ಆಹುತಿ ಎಲ್ಲ ತೀರ್ಪದುವೆ ನಿನ್ನ
ಚಿತ್ತದ ಕಡೆಮಾತು ಕಣೆ ಉನ್ನತಿ ಪ್ರಗತಿಗೆ
ಬೆನ್ನಿಗೆ ಬೆನ್ನು ಕೊಟ್ಟು ಬಲಗೈ ಜೀವದ ಜೀವ
ಸಂಜೀವಿನಿ ಕಾಮಧೇನುವಿನಂತಿದ್ದವಳೆ ಇವಳೆ
ಆಸೆಯ ಮೆಟ್ಟಿಲು ಮಜಲುಗಳ ಆಟವಾಡಿ ದಾಟಿಸುವ
ಪ್ರತಿ ಗತಿಯೂ ಜೀವಜಾಲದಲ್ಲಿ ಹದ್ದಿನ ಕಣ್ಣಿಟ್ಟು
ಹೊತ್ತು ತುತ್ತು ಗತ್ತು ಗಮ್ಮತ್ತು ಮುಗಿದೊಡನೆ
ಇತ್ತಲಿಂದತ್ತ ಗಸ್ತುಹೊಡೆದೊಡೆದು ಕಡೆಗೆ
ಉಸಿರ ಚೀಲವ ಕಸಿದು ಒಸಗಿ ಹಾಕುವ
ಸಿಂಹಿಣಿ ಸಂಹಾರಿಣಿ ನೀನೆಂದರೆ ಸರ್ವಾಧಿಕಾರಿಣಿ ಕಣೆ.
ಶ್ರೀವಲ್ಲಿ ಶೇಷಾದ್ರಿ.