ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?

ಕಂಬನಿ ಹನಿಗಳ ಸುರಿಸುತ ಇದ್ದರೆ
ಒರೆಸುವರಾರು ಸಖಿಯೆ
ಕತ್ತಲ ಕೋಣೆಯು ಅರಿಯದು ನಿನ್ನ
ಕಣ್ಣಿನ ಹನಿಗಳು ಸುರಿಯೆ//

ಕಾಣದು ಒಡಲಿನ ಉರಿಗಳ ಬೇಗುದಿ
ಕಣ್ಣೇ ಇರದಿಹ ಕುರುಡರಿಗೆ
ನೋವಲಿ ಬೇಯುವ ಬದಲಿಗೆ ನೀನು
ಛಲದಲಿ ಎದ್ದರೆ ಶುಭಗಳಿಗೆ//

ಸಾಧನೆ ಎನ್ನುವ ಶರಧಿಯ ಆಳವ
ಮುಳುಗಿ ಏಳಲೇ ಬೇಕಂತೆ
ಸುಮ್ಮನೆ ಅರಚುವ ಬಾಯಿಗೆ ನೀನು
ಬೀಗವ ಹಾಕು ಸಾಕಂತೆ//

ಸಟೆಯನು ಆಡುವ ಸುಳ್ಳರ ಮಾತಿಗೆ
ಗಮನವ ಎಂದೂ ಹರಿಸದಿರು
ನಿನ್ನಯ ಕಾರ್ಯವ ದಿಟದಲಿ ಮಾಡುತ
ಗಮ್ಯವ ನೀನು ತಲುಪುತಿರು//

ನಿನ್ನೊಳಗಿರುವ ವಿಶ್ವಾಸದ ದೀಪವ
ಹಚ್ಚು ದಿಟ್ಟ ಹಣತೆಯಲಿ
ಭರವಸೆ ಎನ್ನುವ ತೈಲವ ನಿಕ್ಕುತ
ಬತ್ತಿಯ ಉರಿಸು ಧೈರ್ಯದಲಿ//

ತುಳಿತವ ಕಂಡ ಮನಗಳೆ ಮೇಲಕೆ
ಎದ್ದು ನಿಲ್ಲುವವು ನೋಡಲ್ಲಿ
ಕೆಸರಿನ ಕೊಳದಲಿ ಹುಟ್ಟಿದ ಪಂಕಜ
ಅರಳುವ ಪರಿಗೆ ಬಾಗಲ್ಲಿ//

ಫಲಗಳು ತುಂಬಿದ ತರುವಿಗೆ ಮಾತ್ರವೆ
ಕಲ್ಲನು ಎಸೆವರು ಬೀಳಿಸಲು
ಒಳಿತನು ಮಾಡಲು ಹೊರಟರೆ ಜಗದಲಿ
ಎಳೆವರು ಕಾಲನು ಸೋಲಿಸಲು//

ಮನದಲಿ ಮರುಗುತ ಕುಳಿತರೆ ಗೆಳತಿ
ಕಾರ್ಯವು ಕೆಡುವುದು ಕೇಳಮ್ಮ
ನಿನಗೆ ನೀನೇ ಧೈರ್ಯವ ತುಂಬುತ
ಬದುಕಿನ ಸಾಗರ ದಾಟಮ್ಮ//


2 thoughts on “ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?

  1. ಧನ್ಯವಾದಗಳು,
    ಶುಭವಾಗಲಿ ಪತ್ರಿಕೆಗೆ, ಸಂಪಾದಕರಿಗೆ.

    …..ಶುಭಲಕ್ಷ್ಮಿ.

  2. ಛಲದಲಿ ಎದ್ದರೆ ಶುಭಗಳಿಗೆ…
    ಗಮ್ಯವ ನೀನು ತಲುಪುತ್ತಿರು…

    ಕವಿತೆಯ ಈ ಸಾಲುಗಳು ಮನವ ಹುರಿದುಂಬಿಸುವಂತಿದೆ

    ನಾಗರಾಜ ಜಿ ಎನ್ ಬಾಡ

Leave a Reply

Back To Top