ಲೇಖನ ಸಂಗಾತಿ
ಗೀತಾ ಅಂಚಿ
‘ಮಣ್ಣೆತ್ತಿನ ಅಮವಾಸ್ಯೆ..’
ಮಣ್ಣೆತ್ತಿನ ಅಮವಾಸ್ಯೆ..
ಬಾಲ್ಯದ ಜೀವನ ಬಲುಚಂದ ನೋಡ ಗೆಳತಿ..ನಮಗೆಲ್ಲಾ ಸಣ್ಣೋರಿದ್ದಾಗ ಒಂದೊಂದು ಹಬ್ಬ ಬಂದ್ರಂತೂ ಹಿರಿ ಹಿರಿ ಹಿಗ್ಗತ್ತಿದ್ವಿ. ಯಾಕೇಳು, ಶಾಲಿಗ ರಜ ಕೊಡುತ್ತಿದ್ರು, ಎಲ್ಲಿಲ್ಲದ ಖುಷಿಯಾಗ ಇರತ್ತಿದ್ದೇವಲ್ಲ? ಎಲ್ಲಾ ಗೆಳತ್ಯಾರು, ಅಣ್ಣತಂಮ್ಳು ಅಕ್ಕತಂಗ್ಯಾರು, ಎಲ್ಲಾರು ಕೂಡಿಕ್ಕೊಂಡು ಎಲ್ಲಾರ ಮನ್ಯಾಗಿನ ಸಿಹಿ ಊಟ ಮಾಡ್ಕೊಂಡು, ಒಂದೊಂದ ಆಟ ಚಾಲೂ ಮಾಡ್ತಿದ್ವಿ. ಆಟ ಆಡಕತ್ತಿದ್ರಾ ಕತ್ತಲಾದ್ರೂ ಮುಗಿತಿರಲಿಲ್ಲ. ಹೌದಲ್ಲೇನ..
ಆದ್ರಕತ್ತಲಿನ್ಯಾಗ ಆಡೋ ಆಟ ನಾ ಬ್ಯಾರೇ ಇತ್ತಲ್ಲ… ಹುಳ ಹುಪ್ಪಡಿ ಹೆದರಿಕೆನೂ ನಮಗಿರಲಿಲ್ಲ. ಅದಾ ” ಬೆಳದಿಂಗಳ ಗುಂಪಿನಾಟ”.ಮಣ್ಣಾಗ ಬಳಿಚೂರು ಕತ್ತಲ ಸಂಧ್ಯಾಗ ಮುಚ್ಚಿಟ್ಟು ಹುಡುಕಾಗ ಎಂಥಾ ಹುರುಪಿನ್ಯಾಗ ಇರತ್ತಿದ್ವಿ ಅಲ್ಲೇನಾ ಗೆಳತಿ..
ಶೂಟಿಗೆ ಬಿಟ್ಟು ಮತ್ತ ಶಾಲಿ ಶುರುವಾಗೋದ್ರಾಗ ಬರೋ ರೈತರ ಹಬ್ಬದಾಗ “ಮಣ್ಣೆತ್ತಿನ ಅತವಾಸ್ಯೆ” ಒಂದಲ್ಲೇನ…
ಮುಂಜಾನೆ ಲಗೂನ ಎದ್ದು,ನಮ್ಮೂರ ಹಳ್ಳದ ದಂಡ್ಯಾಗಿನ ಎರೆಮಣ್ಣ ಕೂಡ್ಕೊಂಡ್ ಹೊತ್ಕಂಡ ಬರ್ತಿದ್ವಲ್ಲಾ? ಆ ಹಸಿಮಣ್ಣ ತಂದು, ನಾವಾ ಕೂತ್ಕೊಂಡ್ ಸಣ್ಣ,ಸಣ್ಣ,ಮಣ್ಣಿನ ಪುಟ್ಟಿ,ತಾಟು,ಗಿಲಾಸ್,ಟಿ.ವಿ, ಫೋನ್,ಎತ್ತಿನ ಬಂಡಿ(ಚಕ್ಕಡಿ) ಮಾಡ್ತದ್ದೇವು.
ನಿನಗ ನೆನಪೈತಾ? ಗೆಳತಿ,ಹಂಗಾ ಮಣ್ಣೆತ್ತನ್ನ ನಾವು
ಮಾಡಾಗ, ತಮ್ಮ ಮಂಜು ಬಂದು ಎತ್ತಿನ ಕೋಡು, ಬಾಲ, ಅದರ ಕಾಲುಗಳನ್ನಮುರಿದು ಹಾಕಾದು ಮಾಡಿ ಓಡಿ ಹೋಗ್ತಿದ್ದ,ಹಿಡಿದು ಬಡಿಯ್ಯಾಕ ಯಾರ ಕೈಗೂ ಸಿಗತ್ತಿರ್ಲಿಲ್ಲ.ಮತ್ತ ಹೊಳ್ಳಿ ಕೂತ್ಕೊಂಡು ಚಂದ ಮಾಡ್ತಿದ್ವಿ ಅಲ್ಲೇನಾ…
ನಮ್ಮ ರಾಮಣ್ಣ ಕಾಕನೂ ಬಂದು ಸೊಟ್ಟಪಟ್ಟ ಮಾಡಿದ ಎತ್ತುಗಳ ನೋಡಿ, ಒಳಗ ನಕ್ಕೊಂತ, ಭಾಳ ಚಂದ ಮಾಡೀರಿಬೇ ಗೀತಮ್ಮ ಅಂದು,ದೊಡ್ಡದೊಡ್ಡವು ಎತ್ತಿನ ಕೋಡು,ಬಾಲ,ಹೊಟ್ಟೆ, ಕಾಲುಗಳನ್ನ ಮಾಡಿ ನೋಡ್ರೀಗ ಇವು ಸೀಮೀ ಎತ್ತು ಅದಾವ ನೋಡ್ರವ್ವ ಅಂತೇಳಿ ನಗುತ್ತಿದ್ದ.
ಈ ಎತ್ತು ಹಸಿ ಆರದ್ರಾಗ ಇವುಗಳ ಕೋಡು, ಕಣ್ಣ,ಕಿವಿ,ಕತ್ತಿಗ್ಯಾಗ,ಕಾಲ್ಗೆ,ಜ್ವಾಳ ಹಚ್ಚಿ ಚಂದ ಮಾಡ್ರೀ ಅಂದು ಹೋಗ್ತಿದ್ದ..
ನಾವೇಲ್ಲಾ ಮನ್ಯಾಕ ಓಡಿಹೋಗಿ ಒಂದು ತಾಟಿನ ತುಂಬ ಜ್ವಾಳ,ಸಜ್ಜೀ,ತಗೊಂಡ್ ಬಂದ್ ಎತ್ತಿಗೆ ಹಚ್ಚಿ ಸಿಂಗಾರ ಮಾಡ್ತಿದ್ವಿ.ಇದೇಲ್ಲಾ ಮಾಡಿ ಒಂದನ್ನ ಮಾತ್ರ ಮರೀತಿದ್ವಿ ಅಲ್ಲಾ? ಗೊತ್ತಾತ…ಅದಾ ಗೆಳತಿ , ಎತ್ತಿಗೆ ಮೇವು ಹಾಕೋ ‘ಗ್ವಾದಲಿ’ ನೆನಪಾತಿಲ್ಲೋ…
ಇವು ಮುಗಿಸೋದ್ರಾಗ ಹತ್ತ-ಹನ್ನಂದ ಗಂಟೆ ಆಗಿರ್ತಿತ್ತು, ಜಗಲಿ ಮ್ಯಾಲೆ ಜೋಡೆತ್ತು ಕುಂದರಿಸಿ, ಅಮ್ಮ ಮಾಡಿದ ಹುಗ್ಗಿ,ನೈವೇಧ್ಯ ಮಾಡಿ,ಕಾಯಿ ಕರ್ರ್ಪೂರ ಮಾಡ್ತಿದ್ವಲ್ಲ. ಎಂಥಾ ಸೆಡಗರವ್ವ ಆಗ ನಮ್ದು..ಎಲ್ಲ ದುಂಡಕ್ಕ ಕಟ್ಟೀಮ್ಯಾಲ ಕುಂತ, ಹುಗ್ಗಿ ಉಂಡು, ಅನ್ನ ಸಾರು ಒಲ್ಲೆ ಅಂತ ಓಡಿಹೋಗ್ತಿದ್ವಿ… ಅದು ಯಾಕಂತ ನೆನಪೈತೇನು? ಗೆಳತಿ..ದೋಸ್ತರೆಲ್ಲಾ ಹಿಂಡ್ ಕಟ್ಟಿಗೆಂಡ್, ತಲಿಮ್ಯಾಗೊಂದು ಮಣಿ ಇಟ್ಕೊಂಡ್, ಅದರಮ್ಯಾಲ ಹದಿನೈದ್ರಿಂದ ಇಪ್ಪತ್ತು ಎತ್ತು ಒಬ್ಬಾತ ಹೊತ್ಕೊಂಡು,ಒಬ್ಬಾತ ಜ್ವಾಳ ನೀಡ್ಸ್ಕಂಡ್ ಹೋಗೋ ಚೀಲ ತರತ್ತಿದ್ದ. ಎಲ್ಲಾರೂ ಕೂಡ್ಕೊಂಡು ಒಂದಾ ಧನಿಯಾಗ “ಎಂಟು ಎತ್ತಿನ್ಯಾಗ ಒಂದು ಕುಂಟು ಎತ್ತು ಬಂದೈತಿ,,,ನೀಡ್ರೀ” ಇಲ್ಲಾಂದ್ರ ಒಂದ್ ಎತ್ತು ಕೊಡ್ರೀ ಅನ್ತಿದ್ರು..
ಆಗ ನಾವೇನು ಮಾಡ್ತೀದ್ವಿ ಹೇಳ ಗೆಳತಿ..ಮುಂಜಾನಿಂದ ಕುಂತು ರಡಿ ಮಾಡಿದ ಒಂದು ಎತ್ತು ಕೊಡ್ತಿದ್ವಿ.ಮತ್ತ ಜ್ವಾಳ ನೀಡಿ ಮನಿ ಮನಿಗ್ಯಾ ಅವರ ಹಿಂದನಾ ಹೋಗ್ತಿದ್ವಿ. ಅಡ್ಯಾಡಿ ಸಾದಾಕ ಮ್ಯಾಲ ಕೊಮ್ಮಟರ ಶೆಟ್ರ ಅಂಗಡಿಗೆ ಹೋಗಿ ಜ್ವಾಳ ಹಾಕಿ, ಬರೋ ರೊಕ್ಕದಾಗ ಖಾರದ ಚುರುಮರಿ ತಂದು ರಾಘವೇಂದ್ರ ಅಜ್ಜಾರ ಮಠದ ಕಟ್ಟಿಮ್ಯಾಲ ದುಂಡು ಕುಂತ ತಿನ್ನದ್ರಾಗ ಏನಾಗ್ತಿತ್ತ ಹೇಳ ಗೆಳತಿ? ವರುಷದಂಗ ಅವತ್ತೂ ಜೀಟಿ ಜೀಟಿ ಮಳಿ ಚಾಲೂ ಆಗಿ ಎಲ್ಲಾರೂ ಎರಡೂ ಕೈಯಾಗ ಚುರುಮರಿ ಹಿಡ್ಕೊಂಡು ಎದ್ದೇನೋ,ಬದ್ದಿನೋ ಅಂತ ಮನಿಗೆ ಓಡಿ ಹೋಗ್ತಿದ್ವಿ ಅಲ್ಲೇನಾ..?
ಆದಿನ ಎಷ್ಟ್ ಚಂದ ಇದ್ವಲ್ಲೇನಾ, ಎಷ್ಟು ಖುಷಿ ತರ್ತಿದ್ವು, ಕೋಟಿ ಕೊಟ್ರೂ ಸಿಗಲಾರದ್ದು ಖುಷಿ ಬಿಡು ಆವಾಗಿಂದು. ಪ್ರತೀ ವರ್ಷದ ಮಣ್ಣೇತ್ತಿನ ಅಮವಾಸ್ಯೆ ಗೆ ಆ ಸಣ್ಣಾರಿದ್ದಾಗಿನ ನೆನಪು ಬಂದು ಹೋಗ್ತಾವ ಗೆಳತಿ. ನಿಂಗೂ ಮರೆಯಾಕ ಆಗ್ತೈತ್ತೇನ ಗೆಳತಿ…
ಗೀತಾ ಹಂಚಿ
ಗೀತಾ ಅಂಚಿ.
ನಟಿ.ನಿರ್ದೇಶಕಿ
ನಟಿ.ನಿ ಕಿ.
ಸಾಹಿತಿಗಳು.
ಕೊಪ್ಪಳ.