ಸ್ನೇಹ ಸಂಗಾತಿ
‘ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ’
ವಿಶೇಷ ಲೇಖನ
ಡಾ.ಸುಮತಿ ಪಿ
ಮನುಷ್ಯ ಸಂಘಜೀವಿ.ಒಬ್ಬಂಟಿಯಾಗಿ ವಾಸಿಸಲು ಸಾಧ್ಯವಿಲ್ಲ.ತನ್ನ ಅವಶ್ಯಕತೆಗಳನ್ನು ಪೂರೈಸಿ ಕೊಳ್ಳುವುದಕ್ಕಾಗಿ ಇತರರನ್ನು ಅವಲಂಬಿಸಿ ಇರಲೇಬೇಕು. ಪರಸ್ಪರರಲ್ಲಿ ಸಹಕಾರ,ಸಹಾಯ ಮಾಡುತ್ತ ಗೆಳೆತನ ಬೆಳೆಯುತ್ತದೆ.
ಮನುಷ್ಯನ ಜೀವನವು ಪ್ರಗತಿಯ ಪಥದಲ್ಲಿ ಸಾಗುವಾಗ ಒಂಟಿತನ ಕಾಡದೆ,ಲವಲವಿಕೆಯಿಂದ ಇದ್ದು, ತನ್ನ ಜೀವನದ ಕನಸನ್ನು ನನಸು ಮಾಡುವಲ್ಲಿ ಸಿಗುವಂತಹ ಉತ್ತಮ ಸ್ನೇಹ ಮನುಷ್ಯನ ಬದುಕಿನಲ್ಲಿಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಾವು ಪಡೆಯುವ ಸ್ನೇಹಿತನ ವ್ಯಕ್ತಿತ್ವದಂತೆ ನಮ್ಮ ಜೀವನ ರೂಪುಗೊಳ್ಳುತ್ತದೆ. ಹಾಗಾಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ ಬಹಳಷ್ಟು ಇದೆ .
ಮನುಷ್ಯ ಭಾವನಾಜೀವಿ ತನ್ನ ಜೀವನ ಕಾಲದಲ್ಲಿ ಅನೇಕ ಅಡೆತಡೆಗಳನ್ನು, ದುಃಖ ದುಮ್ಮಾನಗಳನ್ನು,ಕಷ್ಟ ಕೋಟಲೆಗಳನ್ನು ಎದುರಿಸುವಂತಹ ಸಂದರ್ಭದಲ್ಲಿ ಒಂಟಿಯಾಗಿದ್ದರೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುವಂತಹ ಸಂದರ್ಭಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ತನ್ನವರು ಯಾರೂ ಇಲ್ಲ ಎನ್ನುವಂತ ಕ್ಷಣದಲ್ಲಿ ಗೆಳೆಯನೊಬ್ಬನಿದ್ದರೆ ನಡು ನೀರಿನಲ್ಲಿದ್ದವರನ್ನು ಕೈಹಿಡಿದು ದಡವನ್ನು ತಲುಪಿಸಿದ ಹಾಗೆ ಗೆಳೆಯನ ಸಾಂತ್ವಾನದ ಮಾತು ಆತ್ಮವಿಶ್ವಾಸವನ್ನು, ಜೀವನದಲ್ಲಿ ಭರವಸೆಯನ್ನು ಮೂಡಿಸುವುದಲ್ಲದೆ,ಭವಿಷ್ಯದ ಕನಸನ್ನು ಈಡೇರಿಸಿಕೊಳ್ಳಲು ಸಹಾಯವಾಗುತ್ತದೆ.
ಮನಸ್ಸೆಂಬುದು ಹರಿಯುವ ನೀರಿದ್ದಂತೆ.ಅಲ್ಲಿ ಭಾವನೆಗಳು ಹರಿದಾಡುತ್ತವೆ,ಪ್ರೀತಿ ತುಂಬಿರುತ್ತೆ. ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರುತ್ತವೆ. ಅಂಥ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಗೆಳೆಯ ಅಥವಾ ಗೆಳತಿ ಬೇಕೆನಿಸುತ್ತದೆ.ಗೆಳೆಯನ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಕಷ್ಟದಲ್ಲಿದ್ದಾಗ ಸಹಾಯ ಮಾಡಿ. ಸೋತಾಗ ಬೆನ್ನು ತಟ್ಟಿ ಹುರಿದುಂಬಿಸುವವನೇ ನಿಜವಾದ ಸ್ನೇಹಿತ.
ಭಾವನ ಜೀವಿಯಾದ ಮನುಷ್ಯ ತನ್ನ ದುಃಖವನ್ನು,ಮನಸ್ಸಿನ ತಲ್ಲಣವನ್ನು ಹೇಳಿಕೊಳ್ಳಲು ಯಾರೂ ಸಿಗದೇ ಇದ್ದರೆ ಮನಸ್ಸಿನಲ್ಲಿಯೇ ಕೊರಗಿ ಒತ್ತಡದಿಂದ ಮಾನಸಿಕ ರೋಗಿಯಾಗಿ ತನ್ನ ಜೀವನದ ಅಂತ್ಯವನ್ನು ಕಾಣಬಹುದು.ಇಂತಹ ಸಂದರ್ಭದಲ್ಲಿ ಅವನಿಗೆ ಒಬ್ಬ ಒಳ್ಳೆಯ ಸ್ನೇಹಿತನಿದ್ದರೆ ,ಅವನ ಮನಸ್ಸಿನ ತಲ್ಲಣವನ್ನು ಅರಿತುಕೊಂಡು,ಅದರಿಂದ ಹೊರಗೆ ಬರುವುದಕ್ಕೆ ಹಾಗೂ ಒತ್ತಡದಿಂದ ಮುಕ್ತವಾಗುವುದಕ್ಕೆ ನೆರವು ನೀಡುತ್ತಾನೆ. ಆದುದರಿಂದ ಅಣ್ಣ ತಮ್ಮಂದಿರು ,ತಂದೆ -ತಾಯಿ, ಅಕ್ಕ-ತಂಗಿ,ಬಂದು ಬಾಂಧವರು ಯಾರೂ ಇಲ್ಲದಿದ್ದರೂ ಒಬ್ಬ ಸ್ನೇಹಿತನಿದ್ದರೆ ಅವನು ಖಂಡಿತ ಸಂತೃಪ್ತ ಜೀವನವನ್ನು ನಡೆಸಲು ಸಾಧ್ಯವಿರುತ್ತದೆ.ಸ್ನೇಹಿತನೆಂದರೆ ಅಂತರಾತ್ಮವನ್ನು ಅರಿತ ತನ್ನದೇ ಜೀವದ ಉಸಿರಿನಂತೆ ಇರುತ್ತಾನೆ. “ದೇಹ ಎರಡಾದರೂ ಮನಸ್ಸು ಒಂದೇ”ಎನ್ನುವಂತಿರುವ ವ್ಯಕ್ತಿಯೇ ನಿಜವಾದ ಸ್ನೇಹಿತನಾಗುತ್ತಾನೆ. ಅಂತಹ ನಿಜವಾದ ಸ್ನೇಹಿತರ ನಡುವೆ ಬದುಕು ನಡೆಸುವಂತಹ ವ್ಯಕ್ತಿಗಳು ತಮ್ಮ ಬದುಕಿನ ನಡೆಯಲ್ಲಿ ಯಾವುದೇ ಸವಾಲುಗಳು ಎದುರಾದರೂ ಸಹ ಸ್ನೇಹಿತರ ಸಹಾಯದಿಂದ ಅವುಗಳನ್ನು ಎದುರಿಸಲು ಧೈರ್ಯದಿಂದ ಮುನ್ನುಗುತ್ತಾರೆ.ಹಾಗಾಗಿ ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಸಹ ಸ್ನೇಹಿತರ ಪಾಲು ಬಹಳಷ್ಟು ದೊಡ್ಡದಿರುತ್ತದೆ.ನಿಜವಾದ ಸ್ನೇಹಿತ ತನ್ನ ಗೆಳೆಯ ತಪ್ಪು ಮಾಡಿದರೆ ಅದನ್ನು ಅವನಿಗೆ ತಿಳಿಸಿಕೊಟ್ಟು “ನೀನು ಹಿಡಿದಿರುವ ದಾರಿ ಸರಿ ಇಲ್ಲ.ಸರಿಯಾದ ದಾರಿಯಲ್ಲಿ ನಡೆ”. ಎನ್ನುವಂತ ಎಚ್ಚರಿಕೆಯನ್ನು ಕೊಡುತ್ತಾನೆ. ಇಂತಹ ಉತ್ತಮ ಸ್ನೇಹಿತರು ನಮಗಿದ್ದರೆ ನಾವು ಖಂಡಿತ ನಮ್ಮ ಜೀವನದ ಹಾದಿಯಲ್ಲಿ ದಾರಿ ತಪ್ಪಲು ಸಾಧ್ಯವೇ ಇಲ್ಲ.
ಇಂದಿನ ಕಾಲಘಟ್ಟದಲ್ಲಿ ನಾವು ನೋಡಿದ ಹಾಗೆ,ಅನುಭವಿಸಿದ ಹಾಗೆ ನಮ್ಮ ಮನಸ್ಸಿನ ಒತ್ತಡಗಳನ್ನು ನಮ್ಮ ಮನೆಯ ಸದಸ್ಯರೊಂದಿಗೆ ಹೇಳಿಕೊಳ್ಳದೆ ಇದ್ದರೂ ಗೆಳೆಯನಲ್ಲಿ ಮನಸ್ಸು ಬಿಚ್ಚಿ ಹೇಳುತ್ತೇವೆ .ಅಂತಹ ಸಂದರ್ಭದಲ್ಲಿ ಗೆಳೆಯನಾದವನು ಸಹಾಯ ಮಾಡಬೇಕೆ ವಿನಹ ಅದರ ಸದುಪಯೋಗಪಡಿಸಿಕೊಂಡು ತನ್ನ ಸ್ವಾರ್ಥಕ್ಕಾಗಿ ಬಳಸಿದರೆ ಅವನು ನಿಜವಾದ ಸ್ನೇಹಿತನು ಆಗಲಾರ. ಹಾಗಾಗಿ ಒಬ್ಬ ವ್ಯಕ್ತಿಯ ಪ್ರಗತಿಯಲ್ಲಿ ಅವನ ನಿಜವಾದ ಸ್ನೇಹಿತನ ಪಾತ್ರ ಬಹಳಷ್ಟು ಇರುತ್ತದೆ.ನಿಜವಾದ ಗೆಳೆತನ ಎನ್ನುವಾಗ ಕೃಷ್ಣ ಕುಚೇಲರ ನೆನಪು ನಮಗಾಗುತ್ತದೆ
ಕೆಲವರು ಗೆಳೆತನ,ಸ್ನೇಹ ಅಂತ ನಾಟಕ ಮಾಡ್ತಾರೆ.ಸ್ನೇಹದ ಹೆಸರಿನಲ್ಲಿ ಸಹಾಯ ಪಡೆದು ಆಮೇಲೆ ಎದೆಗೆ ಚೂರಿ ಹಾಕಿ ಹೋಗುತ್ತಾರೆ.ಅಂಥವರ ಮಧ್ಯೆ ಮಾದರಿಯಾಗಿ ನಿಲ್ಲುವುದು ಕೃಷ್ಣ-ಕುಚೇಲ ಹಾಗೂ ಕರ್ಣ-ದುರ್ಯೋಧನರ ಗೆಳೆತನ.
ಆದರೆ ಇಂದಿನ ಸಮಾಜದಲ್ಲಿ ಗೆಳೆಣನಕ್ಕೆಯಾವುದೇ ನಿಯತ್ತು, ಗೌರವ, ಪ್ರೀತಿ ಇಲ್ಲ. ಎಲ್ಲವೂ ಆಡಂಬರಕ್ಕೆ ಮಾತ್ರ ಇದ್ದಂತೆ ಭಾಸವಾಗುತ್ತದೆ.ದುಡ್ಡು ಇದ್ದವರ ಬಳಿ ಮಾತ್ರ ಗೆಳೆಯರು ಇರುತ್ತಾರೆ. ಇಂದಿನ ಸ್ನೇಹಿತರು ಅಧಿಕಾರ ಬಂದ ಕೂಡಲೇ ಜೊತೆಯಾಗಿ ಇದ್ದವರು ಬೇರೆಯಾಗುತ್ತಾರೆ.ತಮ್ಮ ಸ್ವಾರ್ಥ ಹಾಗೂ ಹಿತಾಸಕ್ತಿಗಳಿಗೆ ಮಹತ್ವ ಕೊಡುತ್ತಾರೆಯೇ ಹೊರತು ಸ್ನೇಹಕ್ಕಲ್ಲ.ಈ ಕಾರಣದಿಂದಲೇ ಎಷ್ಟೋ ವರ್ಷಗಳಿಂದ ಗೆಳೆತನದಲ್ಲಿದ್ದವರು,ಒಂದೇ ಬಟ್ಟಲಲ್ಲಿ ಊಟ ಮಾಡುತ್ತಿದ್ದವರು ಬೇರೆ ಬೇರೆ ಆಗುತ್ತಾರೆ.
ಬಹುಕಾಲದಿಂದ ಗೆಳೆಯ ರಾಗಿದ್ದವರು ಬೇರೆ ಬೇರೆ ಆದಾಗ ಅವರು ಎದುರಿಸುವ ಬದುಕು ಅದು ನರಕಸದೃಶವಾಗಿರುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಇಬ್ಬರಿಗೂ ತಮ್ಮ ಅಹಂ ಬಿಡಲು ಸಾಧ್ಯವಾಗುವುದಿಲ್ಲ. ಪರಸ್ಪರರ ವೈಯಕ್ತಿಕ ವಿಚಾರಗಳು, ಮಾಡಿದ ತಪ್ಪುಗಳು ಎಲ್ಲವೂ ಪರಸ್ಪರರಿಗೆ ಗೊತ್ತಿರುವುದರಿಂದ ಅದನ್ನೇ ಬಳಸಿಕೊಂಡು ಪರಸ್ಪರ ಮೇಲಾಟಕ್ಕೆ ಕಾದಾಡುತ್ತಾರೆ. ಆಗ ಅಂತಹ ಕಾದಾಟದಲ್ಲಿ ಹೋರಾಡಲಾಗದವನು ಖಂಡಿತ ಜೀವನದಲ್ಲಿ ಸೋಲುತ್ತಾನೆ. “ಗೆಳೆಯನಾಗಿದ್ದವನು ವೈರಿಯಾದಾಗ ಅವನ ನಾಶ ಖಂಡಿತ” ಎಂಬುದನ್ನು ನಮ್ಮ ಸಮಾಜದಲ್ಲಿ ಈಗೀಗ ನಡೆಯುವಂತಹ ಕೆಲವೊಂದು ಘಟನೆಗಳನ್ನು ನೋಡಿದಾಗ ತಿಳಿದು ಬರುತ್ತದೆ.ಆದುದರಿಂದ ಗೆಳೆಯರನ್ನು ಮಾಡಿಕೊಳ್ಳುವಾಗ ಬಹಳಷ್ಟು ಚಿಂತನ ಮಂಥನ ಮಾಡಬೇಕಾಗುತ್ತದೆ.ಇಂದಿನ ಪರಿಸ್ಥಿತಿ ನೋಡುವಾಗ ಗೆಳೆಯರಾಗಿದ್ದವರಲ್ಲಿಯೂ ಸಹ ತನ್ನ ಮಾನಸಿಕ ತೊಳಲಾಟವನ್ನು ಬಿಚ್ಚಿಡಲಾಗದ ಪರಿಸ್ಥಿತಿ ಇದೆ ಎಂಬುದನ್ನು ನಂಬಲೇಬೇಕು. ಅಂದರೆ ಇವತ್ತಿನ ಗೆಳೆತನವನ್ನು ನಾವು ಕೃಷ್ಣ ಕುಚೆಲರ ಗೆಳೆತನಕ್ಕೆ ಹೋಲಿಸಲು ಖಂಡಿತ ಸಾಧ್ಯವಿಲ್ಲ. ಅಂದರೆ ಎಲ್ಲ ಗೆಳೆಯರು, ಯಾವಾಗಲೂ ಇದೇ ರೀತಿ ಇರುತ್ತಾರೆ ಎಂದರ್ಥವಲ್ಲ. ಎಲ್ಲೋ ಒಂದೊ ಎರಡೊ ನಿಜವಾದ ಗೆಳೆತನದ ನಿದರ್ಶನ ನಮಗೆ ಕಾಣಬಹುದು.ಇಂತಹ ನಿಜವಾದ ಗೆಳೆತನ ಇದ್ದರೆ ಮನುಷ್ಯನ ಜೀವನದಲ್ಲಿ ಸ್ವರ್ಗ ಸುಖವನ್ನು ಪಡೆಯಬಹುದು. ಆದುದರಿಂದ ಗೆಳೆತನವನ್ನು ಮಾಡುವಾಗ ಬಹಳ ಎಚ್ಚರಿಕೆಯಲ್ಲಿ ಮಾಡಬೇಕಾಗುತ್ತದೆ. ಬೂದಿ ಮುಚ್ಚಿದ ಕೆಂಡದಂತಿರುವ ಮನುಷ್ಯನ ನಿಜ ಸ್ವಭಾವವನ್ನು ಅರಿತೇ ಗೆಳೆತನ ಮಾಡಬೇಕಾಗುತ್ತದೆ.
ಪರಸ್ಪರ ನಂಬಿಕೆ, ವಿಶ್ವಾಸ ಇಟ್ಟುಕೊಳ್ಳುವ,ನಂಬಿಕೆಗೆ ದ್ರೋಹ ಮಾಡದಂತಹ ಗೆಳೆಯರಿದ್ದರೆ ಅವರು ಮನುಷ್ಯನ ಬದುಕಿನ ಆಸ್ತಿ ಎಂದೇ ಹೇಳಬಹುದು.ರಕ್ತ ಹಂಚಿ ಹುಟ್ಟದಿದ್ದರೂ, ಆಸ್ತಿ ಹಂಚಿ ಬೆಳೆಯದಿದ್ದರೂ, ವಿಶ್ವಾಸ ನಂಬಿಕೆಯಲ್ಲಿ ಕಷ್ಟ ಸುಖ ಹಂಚಿಕೊಂಡು ಬೆಳೆಯುವುದೇ ಗೆಳೆತನ.ಸಾವಿರ ಸ್ನೇಹಿತರನ್ನು ಸಂಪಾದಿಸುವುದು ಸ್ನೇಹದ ಶ್ರೀಮಂತಿಕೆಯಲ್ಲ .ನಂಬಿಕೆ ವಿಶ್ವಾಸವಿಟ್ಟು ಸಂಪಾದಿಸಿದ ಸ್ನೇಹವನ್ನು ಕೊನೆಯ ತನಕ ಉಳಿಸಿಕೊಳ್ಳುವುದೇ ನಿಜವಾದ ಸ್ನೇಹ. ಈ ರೀತಿಯ ಸ್ನೇಹಿತರು ನಮಗಿದ್ದರೆ ನಾವು ಜೀವನದಲ್ಲಿ ಎಂದೂ ಸೋಲನ್ನು ಕಾಣಲಾರೆವು
“ಎಷ್ಟು ವರ್ಷಗಳಿಂದ ನಾವು ಗೆಳೆಯರಾಗಿದ್ದೇವೆ ಎಂಬುದಕ್ಕಿಂತ ನಾವು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ “ಎಂಬುದು ಗೆಳೆತನದಲ್ಲಿ ಮುಖ್ಯವಾಗುತ್ತದೆ. ಗೆಳೆತನ ನಮ್ಮ ಮನಸ್ಸಿನ ನೋವಿಗೆ ಸಾಂತ್ವಾನವನ್ನು ಹೇಳುವಂತಿರಬೇಕು ಆದರೆ ಗೆಳೆಯನಿಂದ ಮಾನಸಿಕ ನೋವಾದರೆ ಅದು ಎಂದೂ ಗುಣಪಡಿಸಲಾಗದ ನೋವಾಗಿ ನಮ್ಮನ್ನು ಚುಚ್ಚುತ್ತಿರುತ್ತದೆ. ಅಂತಹ ಪವಿತ್ರವಾದ ಒಂದು ಸಂಬಂಧ ಗೆಳೆತನ. ಗೆಳೆತನಕ್ಕಿರುವಂತಹ ಪಾವಿತ್ರತೆಯನ್ನು ನಾವು ಉಳಿಸಿಕೊಂಡರೆ ನಮ್ಮ ಜೀವನದಲ್ಲಿ ಗೆಳೆತನವು ಒಂದು ವರವೆಂದೇ ಹೇಳಬಹುದು.
ನಮ್ಮ ಜೀವನದಲ್ಲಿ ಸಾಕಷ್ಟು ಜನರನ್ನು ನಾವು ಭೇಟಿಯಾಗುತ್ತೇವೆ ಕೆಲವರು ನಮ್ಮ ಜೀವನದಲ್ಲಿ ಪ್ರವೇಶಿಸುತ್ತಾರೆ ಹಾಗೆ ಹೊರಟು ಹೋಗುತ್ತಾರೆ ಆದರೆ ಕೆಲವರು ಮಾತ್ರ ಶಾಶ್ವತವಾಗಿ ಉಳಿದುಬಿಡುತ್ತಾರೆ.ಅವರೇ ನಿಜವಾದ ಗೆಳೆಯರು. ಅಂಥವರಲ್ಲಿ ನಮ್ಮ ಆಂತರ್ಯವನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇರುತ್ತದೆ. ಕೈಹಿಡಿಯುವ ಆಂತರ್ಯವಿರುತ್ತದೆ. ಇಂತಹ ಗೆಳೆತನ ನಮ್ಮದಾಗಬೇಕು ಅದು ಎಂದೆಂದೂ ಶಾಶ್ವತವಾಗಿ ನೆಲೆಗೊಂಡು ಮುಂದಿನ ಪೀಳಿಗೆಗೂ ಮಾದರಿಯಾಗಬೇಕು.
ನನ್ನ ಜೀವದ ಗೆಳತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸಲು ಇಷ್ಟಪಡುತ್ತೇನೆ.
ನನ್ನ ಆಪ್ತ ಗೆಳತಿ ಉಷಾ .ನಾವು ಒಂದನೇ ತರಗತಿಯಿಂದ ಪದವಿ ತರಗತಿಯವರೆಗೂ ಒಟ್ಟೊಟ್ಟಿಗೆ ಓದಿದವರು.ಅವಳು ಕಲಿಕೆಯಲ್ಲಿ ಸ್ವಲ್ಪ ಹಿಂದೆ. ಆದರೆ ನನಗೆ ಅವಳೆಂದರೆ ತುಂಬಾ ಇಷ್ಟ.ಕಾರಣ ಇಷ್ಟೆ, ಅವಳ ಸ್ವಭಾವ ಹಾಗೂ ನನ್ನ ಸ್ವಭಾವ ಒಂದೇ ರೀತಿಯದ್ದು. ಪ್ರತಿಯೊಂದರಲ್ಲೂ ನಾನೂ ಅವಳೂ ಹೊಂದಿಕೊಂಡು ನಡೆಯುತ್ತಿದ್ದೇವು.ಅವಳ ಮನದ ಭಾವನೆಗಳನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದಳು.ನನ್ನ ಮನದ ಒತ್ತಡ, ದುಃಖವನ್ನು ನಾನು ಅವಳಲ್ಲಿ ಹೇಳಿಕೊಂಡಾಗ ನನಗೆ ಮನಸು ಹಗುರವಾಗುತ್ತಿತ್ತು.ಗೆಳೆತನ ಅಂದರೆ ಇದೆ ಅಲ್ಲವೇ? ಪರಸ್ಪರ ಅರಿತು ನಡೆಯುವುದರಿಂದಲೇ ಅವಳು ನನಗೆ ಇಷ್ಟವಾದವಳು.ಮತ್ತೆ ಮದುವೆಯಾದ ಮೇಲೆ ಬೇರೆ ಆಗಿ ಬೇರೆ ಬೇರೆ ಊರುಗಳಿಗೆ ಜೀವನ ಪಯಣ ಬೆಳೆಸಿ,ದೂರದಲ್ಲಿದ್ದರೂ,ಈಗಲೂ ಪೋನ್ ಮೂಲಕ ಸಂಪರ್ಕದಲ್ಲಿದ್ದು, ಆಗಾಗ ಮಾತನಾಡುತ್ತ,ಅಂದಿನ ದಿನಗಳನ್ನು ಮೆಲುಕು ಹಾಕುತ್ತಿರುತ್ತೇವೆ.ಸಂಪರ್ಕ ಇಲ್ಲದಾಗಲೂ ನೆನಪುಗಳು ಉಳಿಯುತ್ತವಲ್ಲ! ಇದೇ ಗೆಳೆತನ, ನಿಜವಾದ ಸ್ನೇಹ.ನಮ್ಮ ಸ್ನೇಹ ನಿತ್ಯ ನಿರಂತರ.
ಡಾ.ಸುಮತಿ ಪಿ