ಕೀಲಿ ಕೈ ತರಲು
ಧರಣೇಂದ್ರ ದಡ್ಡಿ
ಯಾವ ದೇವರು ಕಣ್ಣು ತೆರೆಯಲೇ ಇಲ್ಲ
ಯಾವ ದೇವರು ತಾನೇ ಕಣ್ಣು ತೆರೆದಾನು?
ಕಲ್ಲಿನಲಿ ಯಾವುದೋ ಶಿಲ್ಪಿ ಕೆತ್ತಿದ ಮೂರ್ತಿ
ಇಲ್ಲಿ ಮನಸ್ಸುಗಳೆಲ್ಲ
ಕೋಟೆ ಬಾಗಿಲಿನ ಹಾಗೇಯೆ ಮುಚ್ಚಿಕೊಂಡಿವೆ
ಮುಚ್ಚಿದ ಬಾಗಿಲಿಗೆ ಚಿಲಕ ಹಾಕಿದೆ
ಜೊತೆಗೆ ದೊಡ್ಡದೊಂದು ಬೀಗವು ಕೂಡ
ಹಾಕಿದ ಬೀಗದ ಕೀಲಿ ಕೈ ಸಮುದ್ರಕ್ಕೆ ಎಸೆದಿರುವಾಗ
ನಾನೇ ಮೂರ್ಖ! ಈ ಕಲ್ಲು ದೇವರುಗಳೆಲ್ಲ
ಕಣ್ಣು ತೆರೆಯುವುವು ಎಂದು ಕಾಯುತ್ತಿದ್ದೇನೆ
ಇರಲಿ,
ಆದರೂ ಒಂದು ಮಾತು ನೆನಪಿರಲಿ
ದೇವರು ಕಣ್ಣು ತೆರೆಯದಿದ್ದರೂ ಬಿಡಲಿ
ನಾನು ಕರ್ಮ ಧರ್ಮದ ಪಾಲಕ
ಮುತ್ತುಗಳ ಹುಡುಕಲು ಜನ ಸಮದ್ರಕ್ಕೆ ನೆಗೆಯುವರು
ನಾನು ನೆಗೆಯುವೆನು ನಿನ್ನ ಮನಸ್ಸಿನಕೋಟೆ ಬಾಗಿಲಿನ ಕೀಲಿ ಕೈ ತರಲು
********