ಕವಿತೆ ಕಾರ್ನರ್

ಕಣ್ನೀರಾಗುತ್ತೇನೆ!

ಕಗ್ಗತ್ತಲ ಇರುಳೊಳಗೆ

ಬೀದಿ ದೀಪಗಳ ನೆರಳುಗಳಾಟದೊಳಗೆ

ಮುಸುಕೊದ್ದು ಮಲಗಿದ ನಿನ್ನ

ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ

ಹಗಲು ಕಂಡ ಬೀದಿಯ ಹುಡುಕಿ

ಇರುಳು ಅಲೆಯುತ್ತೇನೆ

ಎತ್ತರದ ನಿನ್ನ ಮನೆಯ

ಮಹಡಿಯಮೇಲೆ ಕವಿದ

ಕಪ್ಪು ಮೋಡಗಳಾಚೆ ಇಣುಕುತ್ತಿರುವ

ಚಂದ್ರನ ನಿದ್ದೆಗಣ್ಣಿನ

ನಗುವಿಗೆ ಹೋಲಿಸಿ ನಿನ್ನ

ಮಂದಹಾಸವ ನಾಚುತ್ತೇನೆ!

ಮೂಡಿದ ಸೂರ್ಯನ

ಎಳೆ ಕಿರಣಗಳು ನಿನ್ನಂಗಳದಲ್ಲಿ

ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ

ಮೈಮುರಿಯುತ್ತ ಹೊರಬಂದ

ನಿನ್ನ ಮುದುಡಿದ ಸೀರೆಯ

ನಿರಿಗೆಗಳಲ್ಲಿ ಅಡಗಿರಬಹದಾದ

ಹಿಂದಿನ ರಾತ್ರಿಯ

ಕನಸುಗಳಲ್ಲಿ

ನನ್ನ  ಹುಡುಕುತ್ತೇನೆ!

ಕಾಣದ ಕನಸುಗಳ ನೆನೆದು

ಕಣ್ನೀರಾಗುತ್ತೇನೆ

************

ಕು.ಸ.ಮಧುಸೂದನ

4 thoughts on “ಕವಿತೆ ಕಾರ್ನರ್

  1. ಇರಳು ಅಳಿಯಲಿ ನಲ್ಲೆಯ ಬೆಳಗಿನ ಹೊಳಪು ಕವಿಗೆ ದಕ್ಕಲಿ…

  2. ಕವಿತೆ ಸೊಗಸಿದೆ.ಇರುಳು ಅಳಿಯಲಿ ನಲ್ಲೆಯ ಬೆಳಗಿನ ಹೊಳಪು ಕವಿಗೆ ದಕ್ಕಲಿ

  3. ಮುದುಡಿದ ಸೀರೆಯ ನಿರಿಗೆಯಲಿ ಹುಡುಕುವ ಪರಿ ಇಷ್ಟವಾಯಿತು, ಅಭಿನಂದನೆಗಳು.

  4. ಕವಿತೆಯ ಹೆಣಿಗೆ .
    ತುಂಬಾ ಮಜಬೂತಾಗಿದೆ.
    ಇಷ್ಟವಾಯಿತು.

Leave a Reply

Back To Top