ಕಾವ್ಯಯಾನ

ಸರಸ

ಬಾಲಕೃಷ್ಣ ದೇವನಮನೆ

ಹುಣ್ಣಿಮೆಯ ಶೃಂಗಾರದಾಟಕೆ
ಉದ್ರೇಕಗೊಂಡು ಮೊರೆಯುತ್ತಿದೆ ಕಡಲು
ದಂಡೆಯಲ್ಲಿ…
ಎದೆಯಿಂದ ನಾಭಿಯಲಿ ಸುಳಿದು
ತೊಡೆಸಂಧಿಯಲಿ ಕುದಿಯುತ್ತಿದೆ ಉಸಿರು…

ಮೌನವನು ಹೊದ್ದ ತಿಂಗಳು
ಮುಚ್ಚಿದ ರೆಪ್ಪೆ;  ಕಚ್ಚಿದ ತುಟಿ,
ಕಿವಿಯ ಪದರದಲಿ ಮುಲುಕಾಟದಾಲಾಪ,
ಕುಳಿರ್ಗಾಳಿ ಸೋಕಿದ ಬೆರಳು
ಮೈಮುರಿದ ತೋಳು
ಉಸಿರಿನೇರಿಳಿತ
ಕಿಬ್ಬೊಟ್ಟೆಯಲಿ ಬಿಗಿತ;
ನಡುವಿಂದ ಕಾಲ್ಸೆಳೆತ.

ಚದುರಿದ ಮರಳು
ಹಾಸಿಗೆ, ಕೆದರಿದ ಮುಂಗುರುಳು
ಗೀರಿದ ಬೆನ್ನು
ಉಕ್ಕಿದ ಬೆವರು ಹರಿದು
ಒಡಲೊಳಗೆ ಜೀವಜಲ ಪುಟಿದು
ಗರ್ಭಗಡಲಲ್ಲಿ ಪುಳಕ..!

ಮೊರೆತ ತಗ್ಗಿದ ಕಡಲು ಶಾಂತ
ಪ್ರಶಾಂತ ಮುಗುಳು ಧನ್ಯ!!

*******

3 thoughts on “ಕಾವ್ಯಯಾನ

  1. ಹುಣ್ಣಿಮೆಯ ತಿಂಗಳು ಹಾಗು ಉನ್ಮತ್ತ ಕಡಲ ಪ್ರೇಮದ ಶೃಂಗಾರದಾಟ ಸಶಕ್ತವಾಗಿ ಮೂಡಿಬಂದಿದೆ. ಈ ರೂಪಕಗಳು ಜೀವನೋನ್ಮುಖಿಯಾಗಿವೆ

  2. ಕವಿತೆಯ ಭಾಷೆ ತುಂಬಾ ಚೆನ್ನಾಗಿ ಬಳಸಿಕೊಂಡು ಸಾರ್ಥಕತೆ ಪಡೆದಿದೆ..ಸೂಪರ್

Leave a Reply

Back To Top