ಒಂದು ವಿಶೇಷ ದಿನ
ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ
ಕನ್ನಡಕ್ಕೆ ಚೇತನಾ ಕುಂಬ್ಳೆ
ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.
ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು ರಸತಂತ್ರ ಶಾಲೆ, ಎಲ್ಲೆಡೆಯೂ ವಿಷವನ್ನು ಬಿತ್ತರಿಸುವ ಒಂದು ಕಾರ್ಖಾನೆಯಿದೆ.
ಆಕೆಗೆ ಆತನಿಗಿಂತ ದೊಡ್ಡದಾದ ಸ್ನೇಹಿತರ ಬಳಗವೊಂದಿತ್ತು. ಅಲ್ಲಿ ಕವಿಗಳು, ಸಿನಿಮಾ ಹಾಡನ್ನು ಬರೆಯುವವರು,ಪಾಪದ ನಿರ್ಮಾಪಕರು, ನಟರು, ಚಿತ್ರಕಾರರು, ಎಂ.ಪಿ. ಡೆಪ್ಯೂಟಿ ಮಂತ್ರಿಗಳು, ಸೆಕ್ರೆಟರಿ, ಮಂತ್ರಿಗಳು ಹೀಗೆ ಎಲ್ಲ ವರ್ಗದವರೂ ಆಕೆಗೆ ಪರಿಚಿತರಾಗಿದ್ದರು.
ಆದರೂ ಚಂದ್ರಿಕಳಿಗೆ ಚಂದ್ರನ ಮೇಲೆ ಪ್ರೀತಿ. ಹಾಗೆ ಚಂದ್ರ ಅಕೆಯ ಮನೆಗೆ ಬಂದದ್ದು. ಕಾರಿನಿಂದಿಳಿದ ಚಂದ್ರ ಚಂದ್ರಿಕಳನ್ನು ನೋಡಿ ನಕ್ಕ. ಚಂದ್ರಿಕ ಆತನನ್ನು ಮನೆಯೊಳಗೆ ಆಹ್ವಾನಿಸಿದಳು. ಚಂದ್ರ ಮನೆಗೆ ಬಂದ ಸಂತೋಷಷದಲ್ಲಿ ಕ್ಷಣ ಹೊತ್ತು ಏನು ಹೇಳಬೇಕೆಂದೋ ಏನು ಮಾಡಬೇಕೆಂದೋ ಅವಳಿಗೆ ತೋಚದಾಯಿತು. ಆಕೆಯ ಬಹುದಿನಗಳ ಆಸೆಯೊಂದು ಈಡೇರಿದ ದಿನವಲ್ಲವೇ ಇಂದು.
ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಚಂದ್ರಿಕಳ ಆರಾಧನಾ ಮೂರ್ತಿಯಾಗಿದ್ದ ಚಂದ್ರ. ಅಕೆಗೆ ಇತರ ಅನೇಕ ಸ್ನೆಹಿತರಿದ್ದರೂ, ವೈಟ್ ಲಿಫ್ಟರಾಗಿ ಮಾತ್ರ ಪ್ರಸಿದ್ಧನಾಗಿದ್ದ ಚಂದ್ರನನ್ನು ಆರಾಧಿಸುತ್ತಿದ್ದಳು. ಚಂದ್ರನು ಅವಳೆದುರಿಗೆ ಬಂದಾಗಲೆಲ್ಲ ಆಕೆಗೆ ಗ್ರಹಣ ಬಡಿದಂತಾಗುತ್ತಿತ್ತು. ಮೂರು ವರ್ಷದೊಳಗೆ ಕಾಲೇಜಿನಾವರಣದ ವಿವಿಧ ಭಾಗಗಳಲ್ಲಿ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಆದರೆ ಚಂದ್ರಿಕ ಚಂದ್ರನನ್ನು ನೋಡುತ್ತಿದ್ದಳಲ್ಲದೆ ಚಂದ್ರನು ಆಕೆಯನ್ನು ನೋಡುತ್ತಲೂ ಇರಲಿಲ್ಲ , ಗಮನಿಸುತ್ತಲೂ ಇರಲಿಲ್ಲ.
ಹಲವು ಹುಡುಗರು ಚಂದ್ರಿಕಳಿಗೆ ಪ್ರೇಮ ಪತ್ರ ಬರೆಯುತ್ತಿದ್ದ ಕಾಲ ಅದು. ಆದರೆ, ಚಂದ್ರಿಕ ಚಂದ್ರನ ಪ್ರೇಮ ಪತ್ರಕ್ಕಾಗಿ ಕಾಯುತ್ತಿದ್ದಳು. ಹಾಗೆ ಅವಳು ಚಂದ್ರನಿಗೆ ಅದೆಷ್ಟೋ ಪ್ರೇಮಪತ್ರಗಳನ್ನು ಬರೆದು ಕಳಿಸಿ ಉತ್ತರಕ್ಕಾಗಿ ಕಾದುಕುಳಿತರೂ ಅವನಿಂದ ಒಂದಕ್ಕೂ ಮರುಪತ್ರ ಬರಲೇ ಇಲ್ಲ.
ಕಾಲೇಜು ಜೀವನ ಮುಗಿಸಿ ಅವರಿಬ್ಬರೂ ತಮ್ಮದೇ ದಾರಿಯಲ್ಲಿ ಹೆಜ್ಜೆಹಾಕಿದರು. ಚಂದ್ರಿಕ ತನ್ನ ಕುಲಕಸುಬಿಗೆ ಸೇರಿದರೆ, ಚಂದ್ರ ತಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿರುವ ಕಂಪೆನಿಯಲ್ಲಿ ಸೇರಿಕೊಂಡನು.
ಚಂದ್ರನು ಕಂಪೆನಿಯ ಮ್ಯಾನೇಜಿಂಗ್ ಪಾರ್ಟ್ನರಾದಾಗ ಕ್ರಮೇಣ ಶ್ರೀಮಂತರಾದರು. ಬೇಕಾದಷ್ಟು ಆಸ್ತಿ ಪಾಸ್ತಿಗಳು ಕೈಸೇರಿದವು. ಚಂದ್ರಿಕ ಮನೆಗೆ ಬಂದಾಗ ಬಂಧುಬಳಗದವರ ಘನತೆ ಹೆಚ್ಚಿತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಚಂದ್ರಿಕಳಿಗೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರಲು ಸಾಮರ್ಥಳಾಗಿದ್ದಳು. ಆದ್ದರಿಂದಲೇ ಆಕೆಯ ಅಮ್ಮ ಎಲ್ಲಾ ಜವಾಬ್ದಾರಿಗಳನ್ನೂ ಚಂದ್ರಿಕಳ ಹೆಗಲ ಮೇಲೆ ಹೊರಿಸಿ ತಾವು ನಿಶ್ಚಿಂತೆಯಿಂದ ವಿಶ್ರಾಂತಿ ಜೀವನಕ್ಕೆ ಕಾಲಿರಿಸಿದರು.
ಆಂಗ್ಲ ಭಾಷೆಯ ಪತ್ರಿಕೆಗಳನ್ನು ಓದುವ ಚಂದ್ರಿಕ ಪ್ರತಿದಿನ ಮೊದಲು ಸ್ಪೋರ್ಟ್ಸ್ ಕಾಲಂ ನೋಡುವಳು. ಕಾರಣ, ವೈಟ್ ಲಿಫ್ಟಿಂಗಲ್ಲಿ ಚಂದ್ರನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲ ಅದಾಗಿತ್ತು.
ಹೀಗಿರುವಾಗ ಒಂದುದಿನ ಚಂದ್ರನ ಕಾರು ಅಪಘಾತಕ್ಕೊಳಗಾಯಿತು. ಚಂದ್ರನು ಅಪ್ರಜ್ಞಾವಸ್ಥೆಯಲ್ಲಿ ತುಂಬ ದಿನ ಆಸ್ಪತ್ರೆಯಲ್ಲಿದ್ದ. ಪಕ್ಕದ ಕೋಣೆಯಲ್ಲೇ ಚಂದ್ರಿಕಳೂ ಅಪ್ರಜ್ಞಾವಸ್ಥೆಯಲ್ಲಿದ್ದಳು. ಪ್ರಜ್ಞೆ ಬಂದಾಗಷ್ಟೇ ಅವರಿಗೆ ತಿಳಿದದ್ದು ತಮ್ಮದೇ ಕಾರುಗಳು ಪರಸ್ಪರ ಢಿಕ್ಕಿ ಹೊಡೆದದ್ದೆಂದು.
ಮೊದಲು ಆಸ್ಪತ್ರೆ ಬಿಟ್ಟದ್ದು ಚಂದ್ರ. ಆತ ಚಂದ್ರಿಕಳನ್ನು ನೋಡಲು ಬಂದ. ಚಂದ್ರಿಕ ಗುಣಮುಖಳಾಗಿದ್ದರೂ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು. ಚಂದ್ರ ಅವತ್ತು ಮೊದಲ ಬಾರಿ ಚಂದ್ರಿಕಳನ್ನು ನೋಡಿದ. ಪರಸ್ಪರ ಕ್ಷೇಮಾನ್ವೇಷಣೆಯ ನಂತರ ಚಂದ್ರ ಕೇಳಿದ”ನಿಮಗಾಗಿ ನಾನೇನಾದರೂ ಮಾಡಬೇಕೇ?” ಚಂದ್ರಿಕಳು ಆತನನ್ನು ಮನೆಗೆ ಆಹ್ವಾನಿಸಲು ಆತ ಒಪ್ಪಿಕೊಂಡ.
ಹಾಗೆ ಚಂದ್ರನು ಚಂದ್ರಿಕಳ ಮನೆಗೆ ತಲುಪಿದ್ದು. ಎಲ್ಲವೂ ಒಂದು ಕಾರು ಅಪಘಾತ ತಂದಿಟ್ಟ ಭಾಗ್ಯ.
ಕುಡಿಯಲು ಪಾನೀಯ , ಕಲ್ಲುಸಕ್ಕರೆ ಸೇರಿಸಿದ ಹಾಲು, ಬದಾಮ್, ಮೊಸರು, ಬೇಯಿಸಿದ ಗೋಧಿಕಾಳು, ಕಾಯಿಸಿದ ಜೋಳ, ಸೂಪು, ದೊಡ್ಡ ತಟ್ಪೆಯಲ್ಲಿ ನೂಡಲ್ಸ್, ಎಲ್ಲವೂ ಊಟದ ಮೇಜನ್ನು ಅಲಂಕರಿಸಿದ್ದವು.
ಅಲ್ಲಿ ಗಾಢವಾದ ಮೌನವೊಂದಾವರಿಸಿತ್ತು. ತಲೆ ವಸ್ತ್ರಧರಿಸಿದ ಕೆಲಸದಾಳು ಒಂದು ಮೂಲೆಯಲ್ಲಿ ಅಪರಾಧಿಯಂತೆ ನಿಂತಿದ್ದನು.
ಅವರಿಬ್ಬರೂ ಊಟಕ್ಕೆ ಬಂದು ಕುಳಿತರು. ಚಂದ್ರನು ಪಾನೀಯವನ್ನೂ ಚಂದ್ರಿಕ ಬೇಯಿಸಿದ ಗೋಧಿಕಾಳನ್ನೂ ತಿಂದು ಟಿಷ್ಯೂ ಪೇಪರಲ್ಲಿ ಕೈ ಒರೆಸುತ್ತಾ ಇಬ್ಬರೂ ಮಲಗುವ ಕೊಠಡಿಗೆ ಹೋದರು. ಇಬ್ಬರೂ ಮಂಚದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಮಾತನಾಡಲು ತೊಡಗಿದರು. ” ನಿನಗೇನು ಬೇಕು” ಚಂದ್ರನು ಕೇಳಲು “ಕೇಳಿದ್ದೆಲ್ಲ ಕೊಡುತ್ತೀಯಾ?” ಎಂದು ಆಕೆ ಮರುಪ್ರಶ್ನೆ ಎಸೆದಳು. ಆತ ಕೊಡುವೆನೆಂದು ಒಪ್ಪಿದಾಗ ಚಂದ್ರಿಕ “ನೀವು ವೈಟ್ ಲಿಫ್ಟರಲ್ಲವೆ ಆದ್ದರಿಂದ ನನ್ನನ್ನು ನೀವು ಎತ್ತಬೇಕು. ನಿಮ್ಮ ಕೈಗಳಲ್ಲಿ ಒಂದು ಪುಟ್ಟ ಹಕ್ಕಿಯಂತೆ ನಾನು ಕುಳಿತುಕೊಳ್ಳಬೇಕೆಂಬ ಆಸೆಯಿದೆ” ಎಂದಳು. ಅದಕ್ಕೆ ಚಂದ್ರನು, “ಆದರೆ, ಇಲ್ಲಿ ಸ್ಥಳ ಸಾಕಾಗುವುದಿಲ್ಲ. ನಾವು ಕಡಲ ತೀರಕ್ಕೆ ಹೋಗುವ , ಅಲ್ಲಿ ನಾನು ನಿನ್ನನ್ನು ಮೇಲಕ್ಕೆತ್ತುತ್ತೇನೆ ಅದಾಗಿರಬಹುದು ನನ್ನ ಕೊನೆಯ ವೈಟ್ ಲಿಫ್ಟಿಂಗ್.” ಎಂದೊಡನೆ ಚಂದ್ರಿಕ ಒಪ್ಪಿದಳು.
ಆಕೆ ಬೇಗ ಬಟ್ಪೆ ಬದಲಾಯಿಸಿದಳು. ಖದರಿನ ಬಟ್ಟೆ, ಪಾದರಕ್ಷೆ ಧರಿಸಿದಳು. ಅಮೇರಿಕದಿಂದ ಗೆಳೆಯ ಕೊಟ್ಟು ಕಳುಹಿಸಿದ ಒಂದು ನೀಳವಾದ ಸ್ಕಾರ್ಫ್ ಇತ್ತು. ಮರಣಿಸಿದ ಆತನ ನೆನಪಿಗಾಗಿ ಅವಳು ಯಾವಾಗಲೂ ಜಾಗ್ರತೆಯಿಂದ ಅದನ್ನು ತೆಗೆದಿರಿಸಿದ್ದಳು.
ಅವರಿಬ್ಬರೂ ಕಾರು ಹತ್ತಿ ಹೊರಟರು. ಕಡಲ ತೀರದಲ್ಲಿ ಜನ ಕಡಿಮೆಯಿದ್ದ ಸ್ಥಳಕ್ಕೆ ಕಾರು ವೇಗವಾಗಿ ಓಡುತ್ತಿತ್ತು. ಚಂದ್ರಿಕ “ಚಂದ್ರ ಒಂದು ಹಾಡು ಹಾಡುತ್ತೀಯಾ?” ಕೇಳಿದಳು.
ಚಂದ್ರನು ಹಾಡಲು ತೊಡಗಿದ.
I tried to sleep to kill the pain
When I wake it’s still the same
Cause am living in this world you left behind
I just like a broken piece of glass
You have swept me aside to pass
Leaving shetterd dreams in my heart to stay
I am just a fool to sit and cry
Washing years before I die
In this lonely world
This world you left behind
ಅವಳು ಹಾಡಿನ ಗುಂಗಿನಲ್ಲಿದ್ದಳು. ಓಡುತ್ತಿರುವ ಕಾರಿನಿಂದ ಅವಳ ಸ್ಕಾರ್ಫ್ ನ ತುದಿಯೊಂದು ಹೊರಗೆ ಗಾಳಿಗೆ ಹಾರುತ್ತಿತ್ತು. ಹಾರುತ್ತಾ ಹಾರುತ್ತಾ ಅದು ಹಿಂದಿನ ಚಕ್ರಕ್ಕೆ ಸಿಕ್ಕಿಕೊಂಡರೆ, ಮತ್ತೊಂದು ತುದಿ ಅವಳ ಕುತ್ತಿಗೆಯನ್ನು ಬಂಧಿಸಿತು. ಆಕಗೆ ಉಸಿರುಗಟ್ಟಿದಾಗಲೇ ಪರಿಸರ ಪ್ರಜ್ಞೆ ಬಂದದ್ದು. ಕೈಕಾಲುಗಳನ್ನು ಅಲುಗಾಡಿಸಲು ಅವಳಿಂದ ಸಾಧ್ಯವಾಗಲಿಲ್ಲ. “ಚಂದ್ರಾ… ರಕ್ಷಿಸು” ಎಂದರೂ ಆಕೆಯ ಕಂಠದಿಂದ ಸ್ವರ ಹೊರಬರಲೇ ಇಲ್ಲ. ಕ್ಷಣದೊಳಗೆ ಆಕೆಯ ಜೀವ ಸಂಗೀತ ಸಾಗರದಲ್ಲಿ ವಿಲೀನವಾಯಿತು. ಇದನ್ನೊಂದೂ ತಿಳಿಯದೆ ಆಗಲೂ ಚಂದ್ರ ಹಾಡುತ್ತಲೇ ಇದ್ದ.
I am just a fool to sit and cry
Washing years before I die
In this lonely world
This world you left behind ……