ಬದುಕು ಹೇಳಿಕೊಟ್ಟದ್ದು…
ಮೂಲ ಮಲಯಾಲಂ:ಉಸ್ಮಾನ್ ಪಾಡರಡುಕ್ಕ
ಕನ್ನಡಕ್ಕೆ: ಚೇತನಾ ಕುಂಬ್ಳೆ
ತತ್ವಶಾಸ್ತ್ರದಿಂದ ಒಂದು ಗೋಪುರವನ್ನೇ ನಿರ್ಮಿಸಬಹುದಾದರೂ
ಅದಕ್ಕೆ ಜೀವ ತುಂಬಲು ಸಾಧ್ಯವೇ
ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ
ಸತ್ಕಾರ್ಯಗಳಿಂದ ಒಂದು ಹೂದೋಟವನ್ನೇ ಮಾಡಿ ಬೆಳೆಸಬಹುದಾದರೂ
ದುಷ್ಕೃತ್ಯಗಳು ತಾನೇ ಇಲ್ಲದಾಗುತ್ತದೆಯೇ
ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ
ಎಲ್ಲರಿಗೂ ಪ್ರೀತಿ ಪಾತ್ರನಾಗಿ
ಹೃದಯದಲ್ಲಿ ಸ್ಥಾನ ಪಡೆದರೂ
ಎಲ್ಲರಿಗಿಂತಲೂ ಹೆಚ್ಚು ಪ್ರೀತಿಪಾತ್ರನೋಗಲು ಸಾಧ್ಯವೇ
ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ
ತ್ಯಾಗಿಯಾಗಿ ಕರ್ಮಯೋಗಿಯಾಗಿ
ತನ್ನ ಸಂಘಟನೆಗಾಗಿ ರಕ್ತಸಾಕ್ಷಿಯಾಗಬಹುದಾದರೂ
ಚೈತನ್ಯವನ್ನು ಜಡವಾಗಿಸಬಹುದೇ
ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ
ಅತಿಯಾದ ಆನಂದದಿಂದ ಮೈಮರೆತು ಕುಣಿದರೂ
ದುಃಖ ತುಂಬಿದ ಹಾದಿಯನ್ನು ಕ್ರಮಿಸುವುದು ಸುಲಭವೇ
ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ
ನಿಂದನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದರೂ
ಮಾನ್ಯನಾಗಿ ಬಾಳುವುದು ಅಷ್ಟೊಂದು ಸರಳವೇ
ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ
**********