ಕಾವ್ಯಯಾನ

ಅಸ್ತಿತ್ವ

ಮೇಗರವಳ್ಳಿ ರಮೇಶ್

ನಾನೊಬ್ಬ ಸಾಧಾರಣ ಮನುಷ್ಯ!
ಬರೀ ಮನುಷ್ಯನಲ್ಲ
ತನ್ನನ್ನು ಜನ ಗುರುತಿಸ ಬೇಕೆಂಬ ಹಂಬಲದ
ಒಬ್ಬ ಕವಿಯೂ ಇದ್ದಾನೆ ನನ್ನೊಳಗೆ!


ಹಾಗೆ ನೋಡಿದರೆ ನಾನೂ ಬರೆದಿದ್ದೇನೆ
ಹಲವಾರು ವರ್ಷಗಳಿಂದ ನೂರಾರು ಕವಿತೆಗಳನ್ನ.
ಪತ್ರಿಕೆಗಳಲ್ಲೂ ಬೆಳಕು ಕಂಡಿವೆ ಹಲವಾರು ಕವಿತೆಗಳು.
ನನ್ನದೊಂದು ಕವಿತಾ ಸಂಕಲನವೂ ಹೊರಬಂದಿದೆ!
ಆದರೂ ನಾನು ಗುರುತಿಸಲ್ಪಡುವುದಿಲ್ಲ!
ಎದುರು ಬಂದವರು ಸುಮ್ಮನೇ ನಕ್ಕು ಮುಂದೆ ಸಾಗಿ ಬಿಡುತ್ತಾರೆ
ನಾನು ಏನೂ ಅಲ್ಲವೆಂಬಂತೆ!
ಸಾಹಿತ್ಯ ದಿಗ್ಗಜರ ಕಣ್ಣಲ್ಲಂತೂ
ನಾನೊಬ್ಬ ನಗಣ್ಯ ಕವಿ!


ಮೊನ್ನೆ ಮೇಗರವಳ್ಳಿಗೆ ಹೋದವನು
ಬೆಳಗಿನ ವಾಕಿಂಗ್ ಮಾಡುತ್ತಾ ಸಾಗಿದ್ದೆ
ನಿಃಶಬ್ದ, ಪ್ರಶಾಂತ ಪರಿಸರದ ನಡುವೆ ಸಾಗುವ ಹಾದಿ ಗುಂಟ!
ಥಟ್ಟನೇ ಕಾಣಿಸಿತಾಗ ರಸ್ತೆಯ ಮಧ್ಯ ಬಿದ್ದಿದ್ದ
ಒಂದು ನವಿಲು ಗರಿ. ಮೇಲೆತ್ತಿಕೊಂಡೆ.
ಚಿತ್ತಾರದ ನುಣುಪು ರೇಶ್ಮೆ ಯಂಥ ಅದನ್ನು ಕೆನ್ನೆಗೆ ಸವರಿಕೊಂಡೆ.
ಆ ಗರಿಯ ಯಜಮಾನ ನವಿಲು ಇಲ್ಲೇ ಎಲ್ಲೋ ಇರಬೇಕೆಂದೆನಿಸಿ
ಗರಿ ಬಿಚ್ಚಿ ಕುಣಿವ ಅದರ ವೈಭವವನ್ನು ಕಣ್ತುಂಬಿ ಕೊಳ್ಳುವ ಹಂಬಲದಲ್ಲಿ
ಸುತ್ತಲೂ ಕಣ್ಣು ಹಾಯಿಸಿದೆ.
ಅದೋ, ತುಸು ದೂರದಲ್ಲಿ ಕೇಕೆ ಹಾಕುತ್ತಾ
ಗರಿ ಬಿಚ್ಚಿ ನರ್ತಿಸುತ್ತಿತ್ತು ನವಿಲು ತಾನೇ ತಾನಾಗಿ!
ನೋಡುತ್ತಾ ಮೈಮರೆತೆ.


ರಸ್ತೆಯ ನಡುವೆ ಬಿದ್ದಿದ್ದ ಆ ಒಂದು ನವಿಲು ಗರಿ
ಅದರ ಅಸ್ತಿತ್ವವನ್ನು ಸಾರಿ
ಅದನ್ನು ಕಾಣಬೇಕೆಂಬ ಹಂಬಲವನ್ನು ನನ್ನೊಳಗೆ ಮೂಡಿಸಿತಲ್ಲ,
ಎಂಥ ಅಚ್ಚರಿ!

ಇನ್ನು ಮೇಲೆ ಬರೆದರೆ
ಆ ನವಿಲು ಗರಿಯಂಥ ಕವಿತೆಗಳನ್ನೇ
ಬರೆಯ ಬೇಕು ಅಂದು ಕೊಂಡೆ!

********

One thought on “ಕಾವ್ಯಯಾನ

  1. Cuckoo bird sings and rarely seen. Your poems as Wordsworth says emotions recolleced in tranquility. Expecting much more golden lines from you. Live happily

Leave a Reply

Back To Top