ಕಾವ್ಯಯಾನ

ಒಡೆದ ಕನ್ನಡಿ

ವಿಭಾ ಪುರೋಹಿತ

ಒಡೆದ ಕನ್ನಡಿ ಬಿಂಬದಲಿ
ಬದುಕು ಹುಡುಕುವ ಹುಚ್ಚು
ಎಂದೋ ಬಸವಳಿಯಬೇಕಿತ್ತು
ನಿಂತನೀರಿಗೆ ಬಿದ್ದ ತುಂತುರು ಹನಿಗಳ ಪ್ರೇಮ ಮತ್ತೆ ನಗಿಸಿತ್ತು.

ಎಷ್ಟು ತುಂಡಾದರೂ ಇಡಿಯಾಗಿ
ಬೆಳೆವ ಮಣ್ಣು ಹುಳುವಿನ
ಹಟವು ಬೆರಗು ಕಂಡಿತ್ತು
ಕಣಕಣದ ಉಸಿರು ಜೀವಂತವಾಗಿ ಬೆಳೆದು ಪ್ರೀತಿ ಹಬ್ಬಿತ್ತು.

ಬುಡಕಡಿದ ಮರಗಳಿಗೆ
ಚಿಗುರುಣಿಸುವ ಪ್ರಕೃತಿ ವಾತ್ಸಲ್ಯ ವು
ದಂಗುಬಡಿಸಿತ್ತು, ನರನಾಡಿಗಳ
ನೆಲದ ಮೋಹ ಆಳಕ್ಕಿಳಿದ ಛಲವು ತುಂಬಾ ಕಾಡಿತ್ತು.

ಕಡಲಲೆಗಳಾ ಸದ್ದಿನಲ್ಲಿ
ವಾಸ್ತವದ ಕೊನೆಯಿರದ ಸಂಕೋಲೆಯಲಿ
ಗೆದ್ದು ಬದುಕಿದೆ, ಸ್ವಾಭಿಮಾನದ ಜಿದ್ದಿನಲಿ
ಮೈಮನಸು ಬುದ್ಧಿಯಲಿ ಆತ್ಮವಿಶ್ವಾಸದ ಹೊಸತೆನೆ ಅರಳಿತ್ತು

*******

12 thoughts on “ಕಾವ್ಯಯಾನ

  1. ಬದುಕೆಂಬ ಕನ್ನಡಿ ಒಡೆದಾಗ ಇನ್ನು ಜೀವನವೇ ಸಾಕು ಎಂದು ಕೈ ಚೆಲ್ಲಿ ಸೋಲೋಪ್ಪಿಕೊಂಡವರೇ ಜಾಸ್ತಿ.ಆದರೆ ಇಲ್ಲಿ ಲೇಖಕಿ ಬದುಕಿನ ಬಿಂಬಾದ ನಿಸರ್ಗದೊಡಗೂಡಿ ತುಂತುರ ಹನಿಗಳ ಪ್ರೇಮವಾಗಿ, ಮಣ್ಣು ಹುಳುವಿನ ಹಟವಾಗಿ,ಪ್ರಕ್ರತಿಯ ವಾತ್ಸಲ್ಯವಾಗಿ, ಕಡಲ ಅಲೆಗಳಂತೆ ಸೋಲೊಪ್ಪಿಕೊಳ್ಳದೇ ಬದುಕನ್ನು ಅಥವಾ ತಾನೇ ಬದುಕಿಗೆ ಮತ್ತೇ ಹೊಂದಿಸಿಕೊಳ್ಳುವ ಜಿದ್ದಿನಿಂದ ಆತ್ಮವಿಶ್ವಾಸದ ಹೊಸ ತೆನೆಯಲ್ಲಿ ಅರಳಿದ್ದಾರೆ. ಕವಿತೆ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು.
    ಪ್ರದೀಪ ಹಿಟ್ಟಿನಹಳ್ಳಿ.

Leave a Reply

Back To Top