ಕಥಾಯಾನ

  ಸರಸ್ವತಿ

Covid-19: Long lines at Delhi liquor stores even after government ...

ಜಿ. ಹರೀಶ್ ಬೇದ್ರೆ

ಸರಸ್ವತಿ ಮುಂಜಾನೆ ಬೇಗನೇ ಎದ್ದು ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಿಕೊಟ್ಟು  ಅಂಗಡಿಯ ಬಳಿ ಬರುವ ಹೊತ್ತಿಗೆ ಎಂಟು ಗಂಟೆಯಾಗಿತ್ತು. ಆಗಲೇ  ಸಾಮಾಜಿಕ ಅಂತರ ಬಳಸಿ ನಿಂತಿದ್ದ ಕ್ಯೂ ಹೆಚ್ಚುಕಮ್ಮಿ ಅರ್ಧ ಕಿ.ಮೀ.ಗಿಂತ ಉದ್ದವಿತ್ತು. ಅಂಗಡಿ ತೆರೆಯಲು ಇನ್ನೂ ಒಂದು ಗಂಟೆ ಬಾಕಿ ಇತ್ತು. ಅಯ್ಯೋ ಏನಪ್ಪಾ ಮಾಡುವುದು ಎಂದು ಗೊಣಗುತ್ತಲೇ ಸರತಿಯಲ್ಲಿ ನಿಂತಳು. ಕ್ಷಣಕ್ಷಣಕ್ಕೂ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು.

ಜನರನ್ನು ನಿಯಂತ್ರಿಸಲು ಒಂದಿಬ್ಬರು ಪೋಲಿಸರು ಬಂದರು. ಅವರು ಹಿಂದೆ ಮುಂದೆ ಓಡಾಡುವಾಗ ಸರಸ್ವತಿಯನ್ನು ನೋಡಿ,  ಆಶ್ಚರ್ಯವನ್ನು ತಡೆದುಕೊಳ್ಳಲಾರದೆ ನಿಮಗೂ ಬೇಕಾ ಎಂದು ಕೇಳಿದರು. ಇವಳು ಬೇಕು ಎನ್ನುವಂತೆ ತಲೆ ಆಡಿಸಿದಳು. ಸರಿ ಸರಿ ಮೊದಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ ಎಂದು, ಇವರಿಗೆ ಯಾವಾಗ ಏನು ಸಿಗುತ್ತೆ ಗೊತ್ತು, ಹೊರಗಡೆ ಹೇಗೆ ಬರಬೇಕು ಗೊತ್ತಿಲ್ಲ ಮುಂತಾಗಿ ಹೇಳುತ್ತಾ ಮುಂದೆ ಸಾಗಿದರು.  ಪೋಲಿಸರಷ್ಟೇ ಅಲ್ಲದೆ ಆ ದಾರಿಯಲ್ಲಿ ಹೋಗಿ ಬರುವವರು ಸರಸ್ವತಿಯನ್ನು ವಿಚಿತ್ರವಾಗಿ ನೋಡುತ್ತಾ, ಅವಳು ಬಗ್ಗೆಯೇ ಹಗುರವಾಗಿ ಮಾತನಾಡುತ್ತಾ ಸಾಗುತ್ತಿದ್ದರು. ಇದನ್ನು ಗಮನಿಸಿದರೂ ಸರಸ್ವತಿ ಕ್ಯೂನಲ್ಲಿ ಅಂಗಡಿ ತೆರೆಯುವುದನ್ನೇ ಕಾಯುತ್ತಾ ನಿಂತಳು.

ಒಂಬತ್ತು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಅಂಗಡಿ ಬಾಗಿಲು ತೆರೆಯಿತು. ಅಲ್ಲಿಯವರೆಗೆ ಸಂಯಮದಿಂದ ನಿಂತಿದ್ದ ಜನ ಸಾಮಾಜಿಕ ಅಂತರ ಮರೆತು ನುಗ್ಗಿದರು.  ಅವರಂತೆ ನುಗ್ಗಲು ಸಾಧ್ಯವಾಗದೆ, ಏನು ಮಾಡಬೇಕೆಂದು ತಿಳಿಯದೆ ಅಂಗಡಿ ಹತ್ತಿರದಲ್ಲೇ ಕಾಯುತ್ತಾ ನಿಂತಳು. ಜನರ ನುಗ್ಗಾಟ ಪೋಲಿಸರ ಹಿಡಿತಕ್ಕೂ ಬರಲಿಲ್ಲ.  ಇವಳು ಅಲ್ಲೇ ಹಾಗೆ ಕಾಯುತ್ತಲೇ ಇದ್ದಳು.

ಇದನ್ನು ಗಮನಿಸಿದ ಪೋಲಿಸರು, ನೀವು ಇಲ್ಲಿ ನಿಂತಿದ್ದರೆ ನಿಂತೇ ಇರುತ್ತೀರಿ, ಏನು ಬೇಕು ಹೇಳಿ ಹಣಕೊಡಿ ತಂದುಕೊಡುತ್ತೇವೆ ಎಂದರು.  ಸರಸ್ವತಿ ಹೇಳಿ ಹಣ ಕೊಟ್ಟಳು. ಪೋಲಿಸಿನವರು ತಂದುಕೊಟ್ಟಿದ್ದನ್ನು ಹಿಡಿದು ಮನೆಗೆ ಬಂದವಳೇ , ಮನೆಯಲ್ಲೇ ಆಸೆಯಿಂದ ದಾರಿ ಕಾಯುತ್ತಿದ್ದ ಗಂಡನ ಮುಂದೆ ಇಟ್ಟಳು. ಒಂದುವರೆ ತಿಂಗಳಿಂದ ಒಂದು ಹನಿಯೂ ಸಿಗದೆ ಸತ್ತೇ ಹೋಗುವವನಂತೆ ಆಗಿದ್ದ ಅವನ ಮುಖದಲ್ಲಿ ಜೀವಕಳೆ ಮೂಡಿತು. ಇದನ್ನು ಕಂಡ ಸರಸ್ವತಿಗೆ, ಕ್ಯೂನಲ್ಲಿ ನಿಂತಾಗ ಇವಳನ್ನು ಅಸಹ್ಯವಾಗಿ ನೋಡಿ, ಮಾತನಾಡಿದ ಜನರ ಎಲ್ಲಾ ವಿಚಾರಗಳು ಮರೆತು ಹೋಯಿತು.

**********

Leave a Reply

Back To Top