ಹೀಗೆಯೇ ಬಂದು ಬಿಡುತ್ತಾರೆ ಕೆಲವರು
ಶೀಲಾ ಭಂಡಾರ್ಕರ್
ಹೀಗೆಯೇ ಬಂದು ಬಿಡುತ್ತಾರೆ ಕೆಲವರು
ಮೌನವಾಗಿದ್ದ, ಶೂನ್ಯವಾಗಿದ್ದ,
ಏಕಾಂಗಿ ಬದುಕಿನೊಳಗೆ,
ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು
ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು
ರಸ್ತೆಯಲ್ಲಿ ನಡೆಯುವವರನ್ನು
ತೋಯಿಸಿದ ಹಾಗೆ.
ಛತ್ರಿಯನ್ನು ಮನೆಯಿಂದ
ತರುವುದರೊಳಗೆ
ತಂದರೂ ಬಿಚ್ಚುವುದರೊಳಗೆ
ಅಥವಾ ಹಾಗೇ ಸುಮ್ಮನೆ
ತೋಯುವುದು ಕೂಡ
ಅಪ್ಯಾಯವೆನಿಸುವ ಹಾಗೆ
ಭೋರೆಂದು ಸುರಿಸುರಿದು
ಬಟ್ಟೆಗಳ ಮೇಲೆ,
ಮುಚ್ಚದ ಅಂಗಾಂಗಗಳ ಮೇಲೆ,
ಕಣ್ಣುಗಳೊಳಗೆ, ಕಿವಿಗಳಲ್ಲಿ,
ಮುಟ್ಟಲಾಗದ ದೇಹದ
ಸಂಧಿಗೊಂದಿಗಳಲ್ಲಿ,
ದಾರಿ ಹುಡುಕುತ್ತಾ, ನುಸುಳಿದಂತೆ
ಬಂದು ಬಿಡುತ್ತಾರೆ ಕೆಲವರು
ಮೌನವಾಗಿದ್ದ ಏಕಾಂಗಿ ಬದುಕಿನೊಳಗೆ.
ಖುಷಿಯೆನಿಸುತ್ತದೆ
ರಸ್ತೆಯಲ್ಲಿ ನಡೆಯುತ್ತಿರುವಾಗ
ಅಚಾನಕ್ಕಾಗಿ ಹೀಗೆ ಒದ್ದೆಯಾಗುವುದು
ಏನೋ ಒಂದು ರೀತಿಯ
ಖುಷಿ ಕೊಡುತ್ತದೆ.
ಮಳೆ ಸಂಪೂರ್ಣ ನಿಂತ ಮೇಲೆ
ಇನ್ನೂ ನಡೆಯುತ್ತಲೇ ಇರುವಾಗಲೇ
ಮೋಡಗಳೆಡೆಯಿಂದ ಇಣುಕುವ
ಬಿಸಿಲಿಗೆ ಬಟ್ಟೆ ಮತ್ತು ನಾನು
ನನ್ನ ಮೈಮೇಲಿನ ಹನಿಗಳು
ಒಣಗುತಿದ್ದೇವೆ.
ಇನ್ನು ಮನೆವರೆಗಿನ ದಾರಿ
ಮಳೆ ಬರದೆ ಬಿಸಿಲು ಸುರಿದರೆ ಸಾಕು.
ಮಳೆಗೆ ತೋಯ್ದ ಎಲ್ಲವೂ ಒಣಗಿದರೆ
ಖುಷಿ ಇದೆ..ಹೀಗೆ ಒದ್ದೆಯಾಗುವುದರಲ್ಲೂ.
ಹೀಗೆಯೇ ಬಂದು ಬಿಡುತ್ತಾರೆ ಕೆಲವರು
ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು
ರಸ್ತೆಯಲ್ಲಿ ನಡೆಯುವವರನ್ನು
ತೋಯಿಸುವ ಹಾಗೆ.
********
ನಿಜ ನಿಮ್ಮ ಮಾತುಗಳು, ತುಂಬಾ ಚಂದದ ಕವನ
ಚೆಂದ