ಕಿರಿ ದೇವರಿಗೆ ಮರದ ಜಾಗಟೆ.
ಕೆ.ಎನ್.ಮಹಾಬಲ
ಹನ್ನೊಂದು ಗಂಟೆಗೆ ಬಾಸ್ ನ ಕೋಣೆ ಒಳಗೆ ಹೋಗಿ ಬಂದ ಅಟೆಂಡರ್ ಸಿದ್ದಲಿಂಗು “ಬಾಸ್ ಸಿಟ್ಟಾಗಿದ್ದಾರೆ.’ಏನಯ್ಯ ನನಗೆ ಹುಷಾರಿಲ್ಲ .ನೆಗಡಿ,ತಲೆಭಾರ ಸ್ವಲ್ಪ ಜ್ವರನೂ ಬಂದಂತಿದೆ.ನೀನು ನೋಡಿದ್ರೆ ಇಷ್ಟೊಂದು ಫೈಲ್ ತಂದು ಕುಕ್ಕುತ್ತಿದ್ದೀಯಾ’ಎಂದು ರೇಗಿದರು ಎನ್ನುತ್ತಾ
ಹೊರಗೆ ಬಂದ ಸಿದ್ದಲಿಂಗು “ಈ ಸಾಹೇಬರಿಗೆ ಹುಷಾರಿಲ್ಲ ಅಂತ ಯಾರಿಗಾದ್ರೂ ಕನಸು ಬಿದ್ದಿರತ್ತಾ?’ ಎಂದು ಗೊಣಗಿಕೊಂಡ.
ಆ ಬಾಸ್ ಗೆ ಹುಷಾರಿಲ್ವ? ಏನಂತೆ ?ಯಾವಾಗಿಂದ?ಡಿಪಾರ್ಟಮೆಂಟಿನಲ್ಲಿದ್ದ ಎಲ್ಲ ಉದ್ಯೋಗಿಗಳು ಒಟ್ಟಿಗೇ ಪ್ರತಿಕ್ರಿಯಿಸಿದರು.
“ಬೆಳಿಗ್ಗೆ ನಾನು ಅವರು ಬರೋ ಹೊತ್ತಲ್ಲಿ ಬೇರೆ ಡಿಪಾರ್ಟ್ ಮೆಂಟಿಗೆ ಹೋಗಿದ್ದೆ.ಅವರು ಬಂದ ಮೇಲೂ ಅವರ ಕ್ಯಾಬಿನ್ಗೆ ಒಂದುಸಾರಿನೂಹೋಗಿಲ್ಲ .ಅದಕ್ಕೇನನಗೆವಿಷಯ ಗೊತ್ತಾಗಿಲ್ಲ.”ಎಂದು ಹಲುಬಿದ ಸೀನ.ಕೆಲಸವಿರಲಿ ಬಿಡಲಿ ಬಾಸ್ ನ ಕೋಣೆಗೆ ದಿನಕ್ಕೆ ಕೊನೇಪಕ್ಷ ನಾಲ್ಕೈದು ಸಾರಿ ಲಾಳಿ ಹೊಡೆಯುತ್ತಿದ್ದ ಅವನಿಗಂತೂ ಇದು ಆಘಾತಕಾರಿ ಸುದ್ಧಿ.
ತಡಮಾಡಲೇ ಇಲ್ಲ .ದಢಾರನೆ ಬಾಸ್ ಕೋಣೆಗೆ ನುಗ್ಗಿ “ಏನ್ ಸಾರ್ ಹುಷಾರಿಲ್ವಂತೆ” ಎಂದು ಆರೋಗ್ಯ ವಿಚಾರಿಸಿದ.
“ಹೌದ್ರೀ,ಬೆಳಗಿನಿಂದ ಸ್ವಲ್ಪ ನೆಗಡಿ,ಕೆಮ್ಮು ಜ್ವರವೂ ಇದೆಯೇನೋ?.ಕೆಲಸಕ್ಕೇನೂ ತೊಂದರೆಯಿಲ್ಲ” ಎಂದರು .
“ಸಾರ್,ಡಾಕ್ಟರು ಏನಾದ್ರೂ ಬೇಕಾದ್ರೆ ಹೇಳಿ ಹಾಗೆಲ್ಲ ಅಲಕ್ಷ ಮಾಡಬಾರದು.””ಎನ್ನುತ್ತ ಹೊರಬಂದ.
“ಇರಲಿ ನೋಡೋಣ “ ತಣ್ಣಗೆ ನುಡಿದರು ಬಾಸ್.
ಬಾಸ್ ತನ್ನ ಮಾತಿಗೆ ಅವನು ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆ ನೀಡದಿದ್ದುದು ಅವನಿಗೆ ನಿರಾಸೆ ತಂದಿತ್ತು.
ಸಹೋದ್ಯೋಗಿಗಳಿಗೆ “ಯಾರೂ ಸಧ್ಯಕ್ಕೆ ಒಳಗೆ ಹೋಗಬೇಡಿ ಬಾಸ್ ಸಿಟ್ಟಾಗಿದ್ದಾರೆ”ಎಂದು ಎಚ್ಚರಿಕೆ ನೀಡಿ ಮನಸ್ಸಿನ ದುಗುಡವನ್ನು ಹೊರಹಾಕಿದ.
ಉಳಿದವರಿಗೆ ಈಗ ಸಂದಿಗ್ಧ. ಸೀನನ ಮಾತು ಕೇಳಿ ಸುಮ್ಮನಿರೋಣವೇ?ಅಥವಾ ಧೈರ್ಯ ತೊಗೊಂಡು ಒಂದು ಸಾರಿ ಒಳಕ್ಕೆ ಹೋಗೋಣವೇ ?ತಿಳಿಯದಾಯಿತು. ಬಾಸ್ ಎಂಬ ಹುಲಿ ಬೋನಿಗೆ ದಿನಾ ಸಲೀಸಾಗಿ ನುಗ್ಗುತ್ತಿದ್ದ ಸೀನನಿಗೇ ಈ ದುರ್ಗತಿಯಾದರೆ ಇನ್ನು ನಮ್ಮ ಪಾಡೇನು?ಎನ್ನುವುದು ಅವರ ಚಿಂತೆ
ಕಛೇರಿಯಲ್ಲಿ ಈಗ ನೀರವ ಮೌನ.ಬಾಸ್ ಹುಷಾರಿಲ್ಲ ಅಂತ ಬೇಗ ಮನೆ ಹೋದರೆ ಹೆಂಡತಿ ಮಕ್ಕಳೊಡನೆ ವಂಡರ್ ಲಾ ಗೆ ಹೋಗಬಹುದೇ? ಸದಾನಂದನ ಚಿಂತೆ.ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಾರ್ಯಕ್ರಮದ ಸ್ಕೆಚ್ .ಅವರು ಹೋದದ್ದನ್ನು ನೋಡಿಕೊಂಡು ಮನೆಗೆ ಹೋಗಿ ಸರ್ ಪ್ರೈಸ್ ಕೊಡೋಣ ಎಂದುಕೊಂಡವರು ಮತ್ತೆ ಹಲವರು.
”ಸಿದ್ಲಿಂಗು ಮುಂದಿನ ಸಾರಿ ಒಳಗೆ ಯಾವುದಾದ್ರೂ ಫೈಲೋ ಫೋಲ್ಡರೋ ತೊಗೊಂಡು ಹೋಗೊದಿದ್ರೆ ನನ್ನ ಹತ್ರ ಕೊಡು .ನೀನು ಹೋಗಬೇಡ “ಎಂದು ಒಳಗೆ ಹೋಗುವುದನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ ಮೂರ್ತಿ.
“ಬಾಸ್ ಗಳಿಗೆ ಹುಷಾರಿಲ್ಲದಾಗ ಆರೋಗ್ಯ ವಿಚಾರಿಸುವ ಸದವಕಾಶ ತಪ್ಪಿಸಿಕೊಳ್ಳಲು ಯಾರಿಗೂ ಇಷ್ಟವಿರಲ್ಲ “ಅಂತ ಗೊಣಗಿಕೊಂಡ ಸದಾಶಿವ.”ಮೂರ್ತಿ ನೀನು ಹೋದಾಗ ಎಲ್ಲ ನೀನೇ ಮಾತನಾಡಿಬಿಡಬೇಡ.ನನಗೂ ಒಂದೆರಡು ಪಾಯಿಂಟ್ ಉಳಿಸು “ ಎಂದ ಕೋರಿದ.
ಹೀಗೇ ಮುಂದುವರೆಯಿತು.”ಎದರುಗಡೆ ಇರುವ ಕ್ಲಿನಿಕ್ ನಿಂದ ಎಲ್ ಎಮ್ ಪಿ ಡಾಕ್ಟರ್ ಕರೆದುಕೊಂಡು ಬರಲೆ ಎಂದೊಬ್ಬ,ಗೃಹವೈದ್ಯ,ಆಯುರ್ವೇದ,ಯುನಾನಿ,ರೇಖಿ, ಎಲ್ಲ ಪದ್ಧತಿಗಳೂ ಸಲಹೆಯಾದವು .
ಜತೆಗೆ ರೋಗದ ಕಾರಣವೂ ಚರ್ಚೆಯಾಯಿತು.”ಸಾರ್ ನೀವು ಮೊನ್ನೆ ಹೆಡ್ ಆಫೀಸ್ ಏ ಸಿ ರೂಮ್ ನಲ್ಲಿ ಬೆಳಗಿನಿಂದ ಸಾಯಂಕಾಲದವರೆಗೆ ನಡೆದ ಮೀಟಿಂಗ್ ನಲ್ಲಿ ಇದ್ದ ಪರಿಣಾಮ ದು ” ಅಂತ ಒಬ್ಬ.”ಆ ಧೂಳಲ್ಲಿ ಅಷ್ಟೊಂದು ಹೊತ್ತು ಹೋಗಬಾರದಿತ್ತು ಇನ್ಸ್ಪೆಕ್ಷನ್ ಸಾರ್ .ಅಲರ್ಜಿಯಾಗಿಬಿಟ್ಟಿದೆ “ಅಂತ ಮತ್ತೊಬ್ಬ.ಅಂತೂ ಕಛೇರಿಯ ಪ್ರತಿಯೊಬ್ಬರೂ ಕಾಳಜಿಯ ಅಕ್ಷಯಪಾತ್ರೆಯನ್ನೇ ಸುರಿಸತೊಡಗಿದರು.
ಅತಿಯಾದ ಸಲಹೆಗಳ ಪರಿಣಾಮವೋ ,ಮತ್ತೇನು ಕಾರಣವೋ ಏನೋ ಮಧ್ಯಾಹ್ನದ ಹೊತ್ತಿಗೆ ಬಾಸ್ ಅಸೌಖ್ಯ ಹೆಚ್ಚಾಯಿತು. ಡ್ರೈವರ್ ಶಿವಯ್ಯನನ್ನು ಕರೆತರಲು ಹೊರಟ ಸಿದ್ದಲಿಂಗನಿಂದ ಅವರು ಮನೆಗೆ ಹೋಗುವ ಸೂಚನೆ ಸಿಕ್ಕಿತು.
ಲಗುಬಗೆಯಿಂದ ಎಲ್ಲರೂ ತಂತಮ್ಮ ಯೋಜನೆಗಳ ಬಗ್ಗೆ ಚಿಂತಿಸಿದರು.
ಮನೆಗೆ ಹೊರಟ ಬಾಸ್ ಗೆ “ಸಾರ್,ಹುಷಾರು”ಈಗಲೇ ಡಾಕ್ಟರರ ಹತ್ತಿರ ಹೋಗಿ””ರೆಸ್ಟ್ ತೊಗೊಳ್ಳಿ” ಮುಂತಾದ ಮಾತುಗಳ ಪುನರುಕ್ತಿಯಾಯಿತು.
“‘ಮನೆ ತನಕ ಬರೋಣವೇ ಸಾರ್ “ ಎಂದು ಸೀನ ಕೇಳಿದಾಗ .
“ಬೇಢ ನಿಮ್ಮ ಕೆಲಸ ಗಮನಿಸಿಕೊಳ್ಳಿ,ಸಾಧ್ಯವಾದರೆ ನಾಳೆ ವಾಪಸು ಬರ್ತೇನೇ” ಎನ್ನುತ್ತಾ ಹೊರಟರು .
“ಅರ್ಜೆಂಟ್ ಬೇಡ ಎರಡು ದಿನ ರೆಸ್ಟ್ ತೊಗೊಂಡೇ ಬನ್ನಿ”ಸೀನ ತೀರ್ಪು ನೀಡುವಂತೆ ಹೇಳಿದ.
ಬ್ರಹ್ಮಚಾರಿ ರಾಘವೇಶನಿಗೆ ತಾವೆಲ್ಲ ಹೋದಮೇಲೂ ಸ್ವಲ್ಪ ಹೊತ್ತು ಇರುವಂತೆ ಉಳಿದವರು ಕೇಳಿಕೊಂಡರು.ಪಾಪ!ಮದುವೆಯಾಗದೆ ಇದ್ದವರಿಗೆ ಇದೇ ಹಣೇಬರಹ.
ಎಲ್ಲರೂ ತಾವು ಬೇಗ ಮನೆಗೆ ಬರುವ ವಿಷಯವನ್ನು ತಿಳಿಸಲು ಉತ್ಸುಕರಾದರು.
—-
ಬಾಸ್ ಹೋದದ್ದನ್ನು ನೋಡಿಕೊಂಡು ಪಕ್ಕದ ವಿಭಾಗದ ಅಟೆಂಡರ್ ಕೃಷ್ಣಪ್ಪ ಬಂದು ಸಿದ್ದಲಿಂಗುವಿನೊಡನೆ ಲೋಕಾಭಿರಾಮವಾಗಿ ಮಾತಿಗೆ ನಿಂತ.
“ಇವತ್ತು ನಿನಗೆ ಆರಾಮ ಬಿಡು ಸಿದ್ದಲಿಂಗು ಬೆಲ್ ಹೊಡೆದ್ರೆ ಹೋಗೋ ತೊಂದರೆಯಿಲ್ಲ” ಎಂದ.
“ಹೌದು ಬಿಡಪ್ಪ ,ಹೋದ ವಾರ ನನಗೂ ಹುಷಾರಿರಲಿಲ್ಲ.ಜ್ವರ ,ಶೀತ ನಿದ್ದೆಯಿಲ್ದೆ ಕಣ್ಣು ಕೆಂಪಗಾಗಿತ್ತು.ಯಾರೂ ಕನಿಕರ ತೋರ್ಸೋರು ಇಲ್ಲಿರಲಿಲ್ಲ.ಕಣ್ಣು ನೋಡಿ ಯಾಕೋ ನಿನ್ನೆ ಎಣ್ಣೆ ಪಾರ್ಟಿ ಜೋರಾ ?ಅಂತ ಲೇವಡಿ ಮಾತು ಬೇರೆ”. ಸಿದ್ದಲಿಂಗು ಬೇಸರದ ದನಿಯಲ್ಲಿ ಹೇಳಿದ.
ಕೃಷ್ಣಪ್ಪ “ನಿಜ,ನಿಜ ಗಾದೆ ಕೇಳಿಲ್ವಾ ‘ಕಿರಿ ದೇವರಿಗೆ ಮರದ ಜಾಗಟೆ ಅಂತ ;ಕಂಚಿನ ಜಾಗಟೆ ಬಾರಿಸೋದಕ್ಕೆ ನಾವೇನು ಹಿರೇದೇವ್ರು ಕೆಟ್ಟೋದ್ವಾ ?” ಎನ್ನುತ್ತ ಅಲ್ಲಿಂದ ಹೊರಟ.
*********************