ಮನಸು ಮಂಜುಗಡ್ಡೆಯಲ್ಲ.
ಜ್ಯೋತಿ ಗಾಂವಕರ್
“ಈಗೀಗ ಏನೂ ನಿರೀಕ್ಷೆಗಳೇ ಇಲ್ಲ ನೋಡು ಭಾವನಾತ್ಮಕ ಅವಲಂಬನೆಯೂ ಇಲ್ಲ ಆಪ್ತವಾಗಿ ಏನೋ ಹೇಳ್ಕೊಬೇಕು ಅನ್ಸೋದೇ ಇಲ್ಲ ಎದೆ ಬಂಡೆಯಾಗ್ತಿದೆ ಅನ್ನಿಸ್ತಿದೆ “
ಅಂತ ಗೆಳತಿಯೊಬ್ಬಳು ನಿರ್ಭಾವುಕವಾಗಿ ಹೇಳಿಕೊಳ್ಳುತ್ತಿದ್ದರೆ …..
” ಹಾಗಾದರೆ ಬಂಡೆಯ ಮೇಲಿಂದ ಇಳಿಯುವ ಜಲಪಾತದಂತಹ ಭೋರ್ಗರೆತವೇನು ? ಭಾವುಕತೆಗೆ ಹುಟ್ಟಿದ ಕಣ್ಣೀರಲ್ಲವಾ” ಅಂತ ಹೇಳಿ ಅವಳನ್ನು ಆ ನಿರ್ಲಿಪ್ತ ಭಾವದಿಂದ ಹೊರತರುವದಕ್ಕೆ ಪ್ರಯತ್ನಿಸುತ್ತಿದ್ದೆ…
“ನಿಜ ಬಿಡು ಎಷ್ಟೇ ಕಲ್ಲಾಗಿದ್ದೇವೆಂದರೂ ಈ ಹೆಣ್ಣುಮಕ್ಕಳಿಗೆ ಕರಗೋದು ಅಭ್ಯಾಸ ….ಅತಿ ಭಾವುಕತೆ ಅನ್ನೋದು ಶಾಪ ನೋಡು” …ಅನ್ನುತ್ತ ಕಣ್ಣಂಚಲಿ ಜಿನುಗುತ್ತಿರುವ ನೀರನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತಿದ್ದಳು …
“ಇತ್ತೀಚೆಗೆ ತುಂಬಾ ಬದಲಾಗಿಬಿಟ್ಟೆ ನೀನು. ಭಾವನೆಗಳೇ ಇಲ್ಲ. ಎಲ್ಲಾ ಯಾಂತ್ರಿಕ ಅನ್ನಿಸ್ತಿದೆ ನಂಗೆ
ಸರಿಯಾಗಿ ಮಾತೇ ಆಡಲ್ಲ ಎಲ್ಲದಕ್ಕೂ ಸಣ್ಣ ಉತ್ತರ ಕೊಡ್ತಿ. ಊಟ ಮಾಡಿದ್ಯಾ ಅಂತನೂ ಕೇಳಲ್ಲ , ಬೇಜಾರಲ್ಲಿದ್ರೆ ಏನಾಯ್ತು ಅಂತನೂ ಕೇಳಲ್ಲ ಹೊಗ್ಲಿ ನೀನೂ ಏನೂ ಹೇಳ್ಕೊಳಲ್ಲ ನನ್ನತ್ರ. ನಾನೇ ಕೇಳ್ಕೊಂಡು ಬಂದಾಗ್ಲೂ ಅವಾಯ್ಡ್ ಮಾಡ್ತಿ ಎಲ್ಲಾ ಹೇಳ್ತಾ ಕೂರೋಕೆ ಟೈಮ್ ಇಲ್ಲ ಅಂತೀಯ “
ಎನ್ನುತ್ತ ಅಳು ಮೋರೆ ಹಾಕಿಕೊಂಡು ಆಗಾಗ ತಕರಾರು ತೆಗೆಯುತ್ತಿದ್ದ ಅವಳಿಗೆ …”ಈ ಹೆಂಗಸರದ್ದು ಇದೇ ಆಯ್ತು ಕಿರಿಕಿರಿ ..ಮಾಡೋಕೆ ಬೇರೆ ಕೆಲಸ ಇಲ್ವಾ? ಮೂರೊತ್ತೂ ಇಂತದ್ದೇ ಆಯ್ತು ಕೆಲಸಕ್ಕೆ ಬಾರದ ಭಾವನೆಗಳಂತೆ, ಅದಂತೆ ಇದಂತೆ ..ಹೇಳ್ಬೇಕಂತೆ ಕೇಳ್ಬೇಕಂತೆ , ಇವಳದ್ದೊಂದೇ ಪ್ರೀತಿ ಅಂತೆ
ನಮಗಿಲ್ಲಿ ಸಾವ್ರ ಟೆನ್ಷನ್ನು. ಹುಷಾರಿಲ್ದಿದ್ರೆ ಟ್ಯಾಬ್ಲೆಟ್ ತಗೊಬೇಕು ಹಸಿವೆ ಆದ್ರೆ ಊಟ ಮಾಡ್ಬೇಕು ಏನು ಕಡಿಮೆ ಆಗಿದೆ ನಿಂಗೆ ? ಸರಿ ..ನನಗ್ಯಾವ ಭಾವನೆಯೂ ಇಲ್ಲ. ಒಪ್ಕೊತೀನಿ ನಿನಗಿದೆಯಲ್ಲ ಏನು ಮಾಡ್ದೆ ? ಏನು ಸಾಧಿಸಿದೆ ಇಷ್ಟು ದಿನ ..? ಬೇಜಾರು ಮಾಡ್ಕೊಂಡು ಕೂತೆ , ಗಂಡ ಸತ್ತವರಂಗೆ ಮುಖ ಮಾಡ್ಕೊಂಡೆ. ನನಗೊಂದಿಷ್ಟು ಕಿರಿಕಿರಿ ಮಾಡ್ದೆ ಇಷ್ಟೇ ತಾನೇ …ಇನ್ನೇನಾದ್ರೂ ಆಯ್ತಾ .? ಹೋಗ್ಲಿ ಅಷ್ಟೊಂದು ಭಾವನೆ ಇರೊ ನೀನಾದ್ರೂ ಖುಷಿಯಿಂದ ಇದ್ಯಾ ? “
ಅಂತ ಮುಖಕ್ಕೆ ಹೊಡೆದಂತೆ ಹೇಳಿ ಹೋಗುವ ಅವನನ್ನು ನಿರ್ಭಾವುಕವಾಗಿ ಸಹಿಸದೇ ಅವಳಿಗೆ ಬೇರೆ ದಾರಿಯಿರಲಿಲ್ಲ ಮತ್ತದೇ ವಾಸ್ತವವೂ ಕೂಡಾ ಆಗಿರುತ್ತದಲ್ಲ …!!
“ಅರೇ ಹೌದಲ್ವಾ ..? ಅವನಂದಿದ್ದೇ ಸರಿ ಏನುಪಯೋಗವಿದೆ ಅದರಿಂದ ? ನನಗೇನು ಕಮ್ಮಿ ಆಗಿದೆ? ನಾನೇ ಸರಿ ಇಲ್ಲ ನನ್ ಮನಸ್ಸೇ ಸರಿ ಇಲ್ಲ ಸಣ್ಣಪುಟ್ಟದಕ್ಕೂ ಕೊರಗ್ತೀನಿ. ಅತಿಯಾಗಿ ನಿರೀಕ್ಷೆ ಮಾಡ್ತೀನಿ ನಾಳೆಯಿಂದ ಬದಲಾಗ್ಬೇಕು ನಾನೂ” ಎಂದುಕೊಳ್ಳುತ್ತ ಕಣ್ಣೊರೆಸಿಕೊಂಡು , ಮುಖ ತೊಳೆದು ಮತ್ತೆ ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ ಅವಳು ..
ಹೌದು ಭಾವುಕತೆ ಅನ್ನೋದು ಹೆಣ್ಣಿಗೆ ಶಾಪ..ಭಾವುಕ ಮನಸ್ಸಿಗೆ ತನ್ನ ಸುತ್ತಲಿನ ಸಂಭಂದಗಳಲ್ಲಿ ವಿನಾಕಾರಣ ನಿರೀಕ್ಷೆಗಳು, ಪುಟ್ಟ ಪುಟ್ಟ ಆಸೆಗಳು ..
ಪ್ರೀತಿಸಿದ ಜೀವಗಳ ಅನುನಯಿಸಿ ಅನುಸರಿಸಿ, ಕೇಳಿ, ಹೇಳಿ, ಕಾಳಜಿ ಮಾಡಿ, ಸಮಯ ಕೊಡುತ್ತಾಳೆ. ಎಲ್ಲರ ನೋವಿಗೂ ಮಡಿಲಾಗುತ್ತಾಳೆ, ಹೆಗಲಾಗುತ್ತಾಳೆ, ಸುಮ್ಮನೇ ಕಿವಿಯಾಗುತ್ತಾಳೆ. ಭರವಸೆಯಾಗುತ್ತಾಳೆ .
ಆಮೇಲೆ ತನಗೂ ಒಂದಿಷ್ಟು ಅದೆಲ್ಲವೂ ಅನಾಯಾಸವಾಗಿ ಸಿಕ್ಕಲಿ ಅನ್ನೋ ಸಣ್ಣ ನಿರುಪದ್ರವಿ ಸ್ವಾರ್ಥ ಅವಳದ್ದು ..ನಿಸ್ವಾರ್ಥಿಯಾಗಿರೋಕೆ ಅವಳೇನೂ ದೇವರಲ್ವಲ್ಲ..!ಸಾಮಾನ್ಯ ಮನುಷ್ಯಳೇ ತಾನೆ ..?
ಯಾವುದೂ ಪ್ರತಿಯಾಗಿ ಸಿಗುತ್ತಿಲ್ಲ ಕೊಟ್ಟಿದ್ದಷ್ಟೇ ಬಂತು ಅಂದಾಗ ಸಣ್ಣಗೆ ಅಡರಿಕೊಳ್ಳುವ ನಿರಾಸೆ… ಬದುಕು ಇಷ್ಟೇ ಬಿಡು ಅನ್ನೊ ನಿರ್ಲಿಪ್ತತೆ.
“ಸರಿ ನಾಳೆಯಿಂದ ಪಕ್ಕಾ ಪ್ರಾಕ್ಟಿಕಲ್ ಆಗೋಣ. ಇವೆಲ್ಲ ಕೆಲಸಕ್ಕೆ ಬಾರದ ಭಾವಗಳು ನಿರೀಕ್ಷೆಗಳನ್ನು ಮೀರಬೇಕು. ಇಲ್ದಿದ್ರೆ ಖುಷಿಯಿಂದ ಇರೋಕೆ ಆಗಲ್ಲ ನನ್ನಿಂದ ಎಲ್ರಿಗೂ ಬೇಜಾರು ” ಅಂದುಕೊಳ್ಳುತ್ತ ಒಳಗೊಳಗೇ ನಿರ್ಧರಿಸಿ ಮತ್ತೊಂದು ಹೊಸ ಮುಂಜಾವಿಗೆ ತರೆದುಕೊಳ್ಳುವ ಹೊತ್ತಿಗೆ
ನಿರೀಕ್ಷಿಸದೇ, ಕೇಳದೇ, ಒಂದು ಪ್ರೀತಿಯ ಭಾವನಾತ್ಮಕ ಸ್ಪಂದನೆ ,ಮಾತು, ಸಿಕ್ಕಿಬಿಟ್ಟಿರುತ್ತದೆ .. ಆವತ್ತಿನ ಮಟ್ಟಿಗೆ ಅವಳು ಆಕಾಶದಲ್ಲಿನ ಹಕ್ಕಿ ….
ಮತ್ತೆ ಕರಗಿಬಿಡುತ್ತಾಳೆ ..
ಖುಷಿ ಪಡದೇ ಇರೋಕೆ ಅವಳಿನ್ನೂ ಕಲ್ಲಾಗಿರುವದೇ ಇಲ್ಲವಲ್ಲ …!
ಎಲ್ಲವೂ ಅಂದುಕೊಂಡಿರುತ್ತಾಳೆ ಅಷ್ಟೇ
ಅವತ್ತೇ ಹೊಸದಾಗಿ ಬದುಕುತ್ತಿದ್ದೇನೆ ಅನ್ನೊ ಭಾವ . ನಿನ್ನೆ ಅಂದುಕೊಂಡಿದ್ದೆಲ್ಲ ಸುಳ್ಳು ಇವತ್ತಿನದೇ ಖುಷಿ ಅವಳ ಪಾಲಿಗೆ ..
ನಿಜ..ಅಪ್ಪಟ ಭಾವುಕ ಮನಸ್ಸು ಅದು
ಮನಸ್ಸು ಕಲ್ಲಾಗುವದೆಂದರೆ ಕರಗಿದಷ್ಟು ಸಲೀಸಲ್ಲ
ನಿರ್ಭಾವವೆನ್ನುವದು ಸುಖಾಸುಮ್ಮನೇ ಮೆತ್ತಿಕೊಳ್ಳುವದಿಲ್ಲ. ಸ್ಮಶಾನದಂತಹ ಮೌನವು ವಿನಾಕಾರಣ ಅಡರಿಕೊಳ್ಳುವದೂ ಇಲ್ಲ
ಆದರೂ ಅವಳು ಆಗಾಗ ಮನಸ್ಸು ಕಲ್ಲಾಗಿಸಿ ಏನನ್ನೂ ನಿರೀಕ್ಷಿಸದೇ ನಮ್ಮವರಿಗೆ , ಪ್ರೀತಿಪಾತ್ರರಿಗೆ ನಗುವನ್ನಷ್ಟೇ ಹಂಚುವ ಸಾಹಸಕ್ಕೆ ಇಳಿಯುತ್ತಾಳೆ .
ಆದರೆ … ಅವಳ ನಿರ್ಧಾರದ ಹಿಂದೆ ಎಷ್ಟೊಂದು ನಿರಾಸೆಗಳ ಪಟ್ಟಿಯಿರುತ್ತದೆ. ಗೊತ್ತಾ?
ಪುಟ್ಟ ಪುಟ್ಟ ಭಾವಗಳ ಒರತೆಯೆಲ್ಲ ದಿವ್ಯ ನಿರ್ಲಕ್ಷ್ಯದಲಿ ಇಂಗಿ ಹೋದದ್ದಿರುತ್ತೆ .
ಸಣ್ಣ ವಂಚನೆಯಿಂದ ಬೀಸಿ ಬಡಿದದ್ದಿರುತ್ತೆ ಉಡಾಫೆಯ ಉತ್ತರದಲ್ಲಿ ಮಾತೆಲ್ಲ ಅರ್ಧಕ್ಕೇ ಮುಗಿಸಿದ ಅಸಹನೀಯ ಮೌನವಿರುತ್ತೆ
ಅನಾದರವೆಂಬ ಅಗ್ಗಿಷ್ಟಿಕೆಯ ಬಿಸಿ ಇರುತ್ತೆ. ಪ್ರತೀ ಕೊಡುವಿಕೆಯಲ್ಲೂ ..ಬರೀ ಪಡೆದುಕೊಂಡಷ್ಟೇ ಸುಮ್ಮನಾಗಿಬಿಡುವ ಸುತ್ತಲಿನ ಅದೆಷ್ಟೋ ಮನಸುಗಳ ನಿರಾಕರಣೆ ಇರುತ್ತೆ.
“ಭಾವುಕತೆಗಳೆಲ್ಲ ಬಂಡೆಯಂತಾಗುವದು ಹೀಗೇ ನೋಡು ಗೆಳತೀ ಎಲ್ಲ ಭಾವಗಳ ಭೋರ್ಗರೆತವನ್ನೂ ಮೀರಿ ಅರ್ಥಮಾಡಿಸಿ, ನಾವೂ ಅರ್ಥೈಸಿಕೊಂಡು, ಬದಲಾಗುವ ಹೊತ್ತಿಗೆ ನಮಗೇ ಯಾವುದೂ ಬೇಡವನ್ನುವ ಪ್ರಭುದ್ದತೆ ಬಂದುಬಿಡುತ್ತದೆ. ಎಲ್ಲಾ ಮೀರಿ ತುಂಬಾ ಮುಂದೆ ಬಂದಿರ್ತೀವಿ ನೊಡು” ಎಂದು ನಿಟ್ಟುಸಿರುಬಿಟ್ಟ ಅವಳಿಗೆ ಉತ್ತರ ಕೊಡಲಾಗದೇ ಸೋತೆ…
ಅವಳಿಗೊಂದಿಷ್ಟು ವಿನಾಕಾರಣ ಪ್ರೀತಿ ಬೇಕು, ಸುಮ್ಮನೆ ಕಾಳಜಿ ಬೇಕು, ಸಣ್ಣಪುಟ್ಟ ಭಾವನಾತ್ಮಕ ಸಂಭಂದಗಳೇ ಅವಳನ್ನು ದಿನನಿತ್ಯ ಜೀವಂತವಾಗಿಡುವುದು.
ಯಾವುದೇ ಸಂಭಂದವಿರಲೀ
ಹಣ, ಆಸ್ತಿ ಏನನ್ನೂ ಖರ್ಚು ಮಾಡದೆಯೇ , ಎಲ್ಲಿಯೋ ದೂರ ಹೋಗಿ ಕರೀದಿಸದೆಯೇ , ಯಾರಲ್ಲಿಯೂ ಕೈ ಚಾಚದೆಯೇ, ತುಂಬಾ ಸಮಯ ವ್ಯರ್ಥ ಮಾಡದೆಯೇ
ನಮ್ಮೊಳಗೇ ಸಿಗುವ ಇಂತಹ ಸಣ್ಣಪುಟ್ಟ ಪ್ರೀತಿಯನ್ನು ಪ್ರೀತಿಸಿದ ಜೀವಗಳಿಗೆ ನಿರ್ಲಕ್ಷ್ಯ ಮಾಡದೇ ಪ್ರಾಂಜಲವಾಗಿ ಕೊಟ್ಟುಬಿಟ್ಟರೆ , ಅವಳೂ ಖುಷಿಯಾಗಿ
ನಿಮಗೂ ಖುಷಿಯನ್ನೇ ಹಂಚುತ್ತಾಳೆ .
“ಏಕೆಂದರೆ ಒಂದು ಭಾವುಕ ಮನಸ್ಸಿಗೆ ಪಡೆದದ್ದಕ್ಕೆ ದುಪ್ಪಟ್ಟು ಕೊಡುವದು ಕರಗತ” ..
Realy super….i understand that feelings…