ನಾನೇಕೆ ಬರೆಯುತ್ತೇನೆ?

The Law of The Spirit of Life in Christ Jesus

ಬದುಕಿನ ಉತ್ಸಾಹ ಕಾಪಿಟ್ಟುಕೊಳ್ಳಲು

ನಾನೇಕೆ ಬರೆಯುತ್ತೇನೆ?

ಈ ಪ್ರಶ್ನೆಗೆ ನನಗಿನ್ನೂ ಸಮಾಧಾನಕರ ಉತ್ತರ ದೊರೆತಿಲ್ಲ.  ಯಾಕೆಂದರೆ ನಾನು ಬರೆಯುವಾಗ ಯಾವುದೇ ಉದ್ದೇಶವನ್ನಿಟ್ಟುಕೊಂಡು ಬರೆಯುವುದಿಲ್ಲ. ನನ್ನಬರವಣಿಗೆಯಿಂದಸಮಾಜದಲ್ಲಿಮಹತ್ತರಬದಲಾವಣೆ ತರಬಹುದೆಂಬ ಭ್ರಮೆ ನನಗಿಲ್ಲ.  ನನ್ನ ಬರವಣಿಗೆಗಳಿಂದ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನಾನೊಬ್ಬ ಮಹಾನ್ ಲೇಖಕ ನಾಗ ಬೇಕೆಂಬ ಮಹತ್ವಾಕಾಂಕ್ಷೆ ನನಗಿಲ್ಲ.ನನ್ನ ಜ್ಞಾನದ, ಪ್ರತಿಭೆಯ ಪರಿಮಿತಿಯಲ್ಲಿ ಬರೆಯುವ ನಾನು ಯಾವುದೆ ಇಸಂ ಗಳಿಗೆ,ರಾಜಕೀಯಸಿಧ್ಧಾಂತಗಳಿಗೆ, ಜಾತಿ ಮತಗಳಿಗೆ ಬದ್ಧನಾಗಿ ಬರೆಯುವುದಿಲ್ಲ.



ವೈಶಾಖದುರಿಬಿಸಿಲಮಧ್ಯಾಹ್ನ ಸುರಿವ ಮಳೆಹನಿಗಳ ಸ್ಪರ್ಷಕ್ಕೆ ಅರಳುವ ಮಣ್ಣಿನ ಕಣಗಳ ಕಂಪು ನನ್ನಲ್ಲಿ ಕಾವ್ಯ ಸ್ಪಂದನೆಯನ್ನುಂಟುಮಾಡುತ್ತದೆ.ನಮ್ಮೂರ ಮಲ್ಲಿಕಾರ್ಜುನ ಬೆಟ್ಟದೆತ್ತರದಲ್ಲಿ ಕಾಡು ಹೂವುಗಳ ಕಂಪನ್ನು ಹೊತ್ತು ಬೀಸುವ ತಂಗಾಳಿ ನನ್ನಲ್ಲಿ ಪುಳಕವೆಬ್ಬಿಸುತ್ತದೆ.  ಮುಂಜಾನೆ ಅಂಗಳದಲ್ಲರಳಿದ ಮಲ್ಲಿಗೆ,
ಗುಲಾಬಿ, ದಾಸವಾಳ, ಮಂದಾರ ಹೂವುಗಳ ಮೇಲೆ ಮೃದುವಾಗಿ ಕುಳಿತು ನೇಸರನ ಎಳೆಕಿರಣಗಳನ್ನು ಪ್ರತಿಫಲಿಸುವ ಮಂಜು ನನಗೆ ಆನಂದ ನೀಡುತ್ತದೆ. ನನ್ನ ಸುತ್ತಲಿನ ಪರಿಸರದ, ಹಾಗೂ ವಿಶ್ವದ ಆಗು ಹೋಗುಗಳು ನನ್ನಲ್ಲಿ ಸ್ಪಂದನೆಯುಂಟುಮಾಡುತ್ತವೆ. ನನಗೇ ಅರಿವಾಗದಂತೆ ನನ್ನೊಳಗಿನೊಳಗೆಲ್ಲೋ ಈ ಎಲ್ಲವೂ ತುಂಬಿಕೊಂಡು ಬಿಡುತ್ತವೆ..



ಸುಖ ದುಃಖಗಳ ಬದುಕಿನ ಚಕ್ರ, ಅದನ್ನುರುಳಿಸುವ ಕಾಲ, ಮಾನವೀಯ ಸಂಬಂಧಗಳ ನಿಗೂಢಜಾಲ,ನನ್ನನ್ನು ಸದಾ ಕಾಡುತ್ತವೆ.  ವೃತ್ತಿ ಜೀವನದ ಬೆನ್ನು ಹತ್ತಿ ಹಲವು ಹತ್ತು ಊರುಗಳ ಸುತ್ತಿ ಬರುವಾಗ ದಕ್ಕಿದ ಅನುಭವಗಳ ಸರಕು ನನ್ನೊಳಗಿನ ಗೊಡೋನಿನಲ್ಲಿ ಭದ್ರವಾಗಿವೆ.ಸೂಕ್ಷ್ಮ ಸಂವೇದಿ ಮನಸ್ಸಿನ ಸ್ನೇಹಿತರೊಂದಿಗಿನ ಮಾತು ಕತೆ, ಚರ್ಚೆ, ಜತೆಗೆ ಉತ್ತಮ ಸಾಹಿತ್ಯ ಕೃತಿಗಳ ಓದು ನನ್ನೊಳಗೊಬ್ಬಕವಿಯನ್ನು ಸೇರಿಸಿವೆ.ಕೆಲವೊಮ್ಮೆ ಮನಸ್ಸು ತಳಮಳದಬೀಡಾದಾಗ , ಬದುಕು ದುರ್ಭ್ಹರವೆನಿಸಿದಾಗ ನನ್ನೊಳಗಿನ ಕವಿಯನ್ನು ಕರೆಯುತ್ತೇನೆ.  ಶಿಥಿಲ ಗೊಂಡ ಮನಸ್ಸನ್ನು ಪುನಹ ಕಟ್ಟಿಕೊಳ್ಳಲು , ಕಾಲದ ಉರುಳಿಗೆ ಸಿಕ್ಕು ಸವೆದು ಹೋದ ಬದುಕನ್ನು ಪುನರ್ನಿರ್ಮಿಸಿಕೊಳ್ಳಲು, ಬದುಕಿನಉತ್ಸಾಹವನ್ನು ಸದಾ ಕಾಪಿಟ್ಟುಕೊಳ್ಳಲು, ಮತ್ತು ಕಾವ್ಯ ನಿರ್ಮಿತಿಯಿಂದ ದೊರಕುವ ಆನಂದವನ್ನು ಅನುಭಿಸಲು –

ನಾನು ಕವಿತೆಗಳನ್ನು ಬರೆಯುತ್ತೇನೆ.

*******

ಮೇಗರವಳ್ಳಿ ರಮೇಶ್




 

  • RA

One thought on “ನಾನೇಕೆ ಬರೆಯುತ್ತೇನೆ?

Leave a Reply

Back To Top