ಗಾಳೇರ್ ಬಾತ್

ಗಾಳೇರ್ ಬಾತ್ -03

Bliss Torn From Emptiness | Nadja

ಬದುಕು ಏನೆಲ್ಲಾ ಮಾಡಿಸುತ್ತದೆ……..

ಇವನೌನ್ ಇವನೇನು ಬರಿತಾನ ಅಂತೀರಲಾ….. ನಿಜ ಕಣ್ರೀ ನಾನು ಬೇರೆ ಏನು ಬರೆಯುವುದಿಲ್ಲ! ನಮ್ಮ-ನಿಮ್ಮ ನಡುವೆ ನಡೆಯುವ ದಿನ ನಿತ್ಯದ ಘಟನೆಗಳೇ ನನ್ನ ಬರವಣಿಗೆಗಳಿಗೆ ಶೃಂಗಾರ.

         ಆಗ ತಾನೆ ನಾನು duty ಮುಗಿಸಿಕೊಂಡು restroom ನಲ್ಲಿ ಏನೋ ಯೋಚಿಸುತ್ತ ಕೂತಿದ್ದೆ. Duty ನಾ.. ಯಾವ duty….  ಅಂತ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಅದೇ ನಾನು ಮಾಡ್ತಿದ್ನಲ್ಲ housekeeping ಕೆಲಸ. ಹೀಗೆ ಕೂತಿರಬೇಕಾದ್ರೆ ಪ್ರಕಾಶ ಎಲ್ಲಿಂದ ಬಂದ್ನೋ ಗೊತ್ತೆ ಆಗಲಿಲ್ಲ. ಬಂದವನೇ “ಮಗ ಸುಜಾತಾ ಆಂಟಿ ಮತ್ತು ಮಹೇಶ್ ಇಬ್ರೂ ರಜೆ ಹಾಕಿದರೋ” ಅಂತೇಳಿ ಪೆಚ್ಚುಮೋರೆ ಹಾಕಿಕೊಂಡಿದ್ದ. ನಾನು ಈ ಮಾತಿಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ “ಹೌದಾ….!” ಅಂತ ಹೇಳಿ ಸುಮ್ಮನೆ ಆದೆ. ಅಷ್ಟಕ್ಕೇ ಬಿಡದೆ ಮಹೇಶ “ಗುರು ಸುಜಾತಾ ಆಂಟಿ ಸರಿ ಇಲ್ಲ ಗುರು” ಅಂದಾಗ ನನ್ನ ಕುತೂಹಲ ಹೆಚ್ಚಾಯಿತು. “ಯಾಕೆ ಪ್ರಕಾಶ ಏನಾಯ್ತು, ಸುಜಾತ ಆಂಟಿ ನಿನಗೇನು ಮಾಡಿದ್ಲು”. ಆಗ ಪ್ರಕಾಶ “ಗುರು ನಾನು ಮೂರು ತಿಂಗಳಿಂದ ಆಂಟಿನ love ಮಾಡ್ತಾಯಿದೀನಿ ಕಣೋ. ಅವಳು ಕೂಡ ನಂಜೊತೆ Park, film, Mall ಅಂತ ಸುತ್ತಿದಾಳೆ, ಹಣ ಕೂಡ ತುಂಬಾ ಕೊಟ್ಟಿದ್ದೇನೆ ಮಗ, ಇವತ್ತು ನೋಡಿದ್ರೆ ಮಹೇಶನ ಜೊತೆ filmಗೆ ಹೋಗಿದ್ದಾಳಂತೆ” ಅಂತ ಬೇಜಾರು ಮಾಡ್ಕೊಂಡ. ಹೀಗೆ ಬೇಜಾರು ಮಾಡಿಕೊಂಡಿದ್ದ ಪ್ರಕಾಶನನ್ನು ನಾನು ಸಮಾಧಾನ ಪಡಿಸಲು “ಗುರು ಹೆಣ್ಣು-ಹೊನ್ನು-ಮಣ್ಣು ಈ ಮೂರರ ಹಿಂದೆ ಯಾವತ್ತೂ ಹೋಗಬಾರದು” ಅಂತ ಹೇಳಿದೆ. ಆಗ ಅವನು “ಹೌದು ಗುರು… ನೀನು ಹೇಳಿದ್ದು ನಿಜ! ನೀನು ಬಿಡಪ್ಪ gentleman” ಅಂತ ಹೇಳಿ ಹೊರಟು ಹೋದ.

        ಅವನೇನು ಹೊರಟು ಹೋದ! ಆದರೆ ನನಗೆ ಸುಜಾತ ಆಂಟಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ಹುಟ್ಟಿತು. ಹಾಗೋ ಹೀಗೋ ಹೇಗೋ ಮಾಡಿ ಸುಜಾತಾ ಆಂಟಿಯ ಬಗ್ಗೆ information ಕಲೆ ಹಾಕಿದಾಗ ತಿಳಿತು. ಅವಳು ಹೀಗೆ ಹತ್ತು ವರ್ಷದ ಕೆಳಗೆ ಮಂಡ್ಯದ ಯಾವುದೋ ಹಳ್ಳಿಯಿಂದ ತನ್ನ ಗಂಡನೊಂದಿಗೆ ದುಡಿಯಲು ಬೆಂಗಳೂರಿಗೆ ಬಂದಳೆಂದು. ಮೂವತ್ತೈದು ರಿಂದ ನಲವತ್ತು ವಯಸ್ಸಿನ ಆಜುಬಾಜಿನವಳಾದ ಅಂಟಿ ನೋಡಲು ತುಂಬಾ ಅಪ್ಸರೆಯಂತೆ ಕಾಣುತ್ತಿದ್ದಳು. ಎರಡು ಮಕ್ಕಳ ತಾಯಿಯಾದರೂ ಸಹ ಅವಳ ಅಂದದ ಕಡಲೆನೂ ಕಪ್ಪಗಿರಲಿಲ್ಲ. ಯಾವುದೇ ವಯಸ್ಸಿನ ಹುಡುಗರಾಗಲಿ ವಯಸ್ಕರರಾಗಲಿ ಅವಳು ನೋಡುವ ನೋಟಕ್ಕೆ ಅವಳ ಬಲೆಗೆ ಬೀಳುವುದರಲ್ಲಿ ಅನುಮಾನವಿಲ್ಲ. ಆದರೆ ಸುಜಾತಾ ಆಂಟಿ ಮಾತ್ರ ಯಾವತ್ತೂ ನನ್ನ ಆ ರೀತಿ ನೋಡಿರಲಿಲ್ಲ. ನನ್ನಷ್ಟೇ ಅಲ್ಲ ನನ್ನಂತೆ ಸೌಜನ್ಯವಾಗಿ ವರ್ತಿಸುವ ಯಾವುದೇ ಯುವಕರನ್ನು ಕೂಡ ಅವಳು ತನ್ನ ಕಡೆ ಸೆಳೆಯುತ್ತಿರಲಿಲ್ಲ. ಕಾಮಲೆ ತುಂಬಿದ ಪಡ್ಡೆ ಹುಡುಗರನ್ನು ಮಾತ್ರ ಅವಳು ತನ್ನ ಬಲೆಗೆ ಬೀಳಿಸಿ ಕೊಳ್ಳುತ್ತಿರುವುದು ದಿನಗಳೆದಂತೆ ಗೊತ್ತಾಯ್ತು. Sex ಎನ್ನುವುದು ಮೂಲಭೂತ ಅಲ್ಲದಿದ್ದರೂ ಸಹ. ಅದು ಸಹಜವಾಗಿಯೇ ಮನುಷ್ಯನಲ್ಲಿ ಮೂಲಭೂತ ವಸ್ತುವಿನಂತೆ ಬೆರೆತು ಬಿಡುತ್ತದೆ. ಇದಕ್ಕೆ ಯಾವೊಬ್ಬ ಹೆಣ್ಣು ಮತ್ತು ಗಂಡು ಕೂಡ ಹೊರತಾಗಿಲ್ಲ.

        ನಾನು ಒಂದು ದಿನ housekeeping ಕೆಲಸ ಮುಗಿಸಿಕೊಂಡು ಶಾಂತಿನಗರದ ಯಾವುದೋ ಗಲ್ಲಿಯಲ್ಲಿ ಒಂಟಿಯಾಗಿ ಸಾಗುತ್ತಿರಬೇಕಾದರೆ. ಯಾವುದೋ ಚಿಕ್ಕ ಅಡ್ಡ ರಸ್ತೆಯಲ್ಲಿ ಸಿಕ್ಕ ಸುಜಾತ ಅಂಟಿ “ಏನು ಗಾಳೇರ ಇಲ್ಲಿ”. ಎಂದಾಗ ಅವಳ ಜೊತೆ ಮಾತಿಗಿಳಿಯಲು ನನಗೆ ಒಂತರ ಇರಿಸು ಮುರಿಸು ಉಂಟಾದರು ಮಾತಿಗಿಳಿಯದೆ ಬೇರೆ ಮಾರ್ಗವಿಲ್ಲ ಎಂದು “ಆಗೆ ಆಂಟಿ ಸುಮ್ಮನೆ ಬೆಂಗಳೂರನ್ನು ಸುತ್ತೋಣವೆಂದು ಬಂದೆ”. “ಹೌದಾ….. ಇಲ್ಲೇ ನಮ್ಮ ಮನೆ, ಬಾ ಮನೆಗೆ ಹೋಗೋಣ” ಎಂದಾಗ ನನಗೆ ಮಾತು ಬರದಾಯಿತು. ಯಾಕೆಂದರೆ ನನ್ನ ಮನಸ್ಸಿನಲ್ಲಿ ಅವಳೊಬ್ಬ ವೇಶ್ಯೆ ಎಂಬ ಪಟ್ಟ ಕಟ್ಟಿಕೊಂಡಿತ್ತು. ಯಪ್ಪಾ ಸೂಳೆ ಮನೆಗೆ ಹೋಗುವುದಾ! ಎಂದು ಮನಸ್ಸಿನಲ್ಲಿ ಭಯ ಶುರುವಾಯಿತು. ತಕ್ಷಣ ಅವಳು ನನ್ನ ಯೋಚನೆಯನ್ನು ಅರ್ಥಮಾಡಿಕೊಂಡವಳಂತೆ “ಪ್ರಕಾಶ ಮತ್ತು ಮಹೇಶ ಅವರು ನನ್ನ ಜೊತೆ ಮಾತನಾಡುವುದು ಬಿಟ್ಟು ತುಂಬಾ ದಿನಗಳಾಗಿವೆ ಅವರು ನಮ್ಮ ಮನೆಗೆ ಈಗ ಬರುವುದಿಲ್ಲ. ನೀನು ಬಂದಿದ್ದು ಯಾರು ನೋಡುವುದಿಲ್ಲ ಯೋಚಿಸಬೇಡ ಬಾ ಗಾಳೇರ” ಎಂದು ನನ್ನ ಕೈಯನ್ನು ಹಿಡಿದುಕೊಂಡಾಗ ಅವಳ ಕಣ್ಣಲ್ಲಿ ಕಾಮದ ಭಾವ ತುಂಬಿದೆ ಎಂದು ನನಗೆ ಅನಿಸಲಿಲ್ಲ. ಯಾವಾಗಲೂ ಅಪ್ಸರೆ ಕಣ್ಣುಗಳಂತೆ ಕಾಣುತ್ತಿದ್ದ ಅವಳ ಕಣ್ಣುಗಳು. ಮಮತೆಯ ತುಂಬಿದ ಮಡಿಲಿನ ತಾಯಿ ಹೃದಯದಂತೆ ಶಾಂತವಾಗಿದ್ದವು. ಅವಳು ಸ್ಪರ್ಶಿಸಿದಾಗ ರೋಮಾಂಚನಗೊಳ್ಳಬೇಕಿದ್ದ ದೇಹ ಜಡವಾಗಿತ್ತು. ಹೀಗೆ ನನ್ನಲ್ಲಾದ ಬದಲಾವಣೆಗಳನ್ನು ಅರಿತ ಮೇಲೆ ಅವಳ ಹಿಂದೆ ಹೊರಟೆ.

     ಹಲವಾರು ಯುವಕರೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ  ಸುಜಾತ ಅಂಟಿ ಅದೆಷ್ಟು ದುಡ್ಡು ಮಾಡಿರಬಹುದು. ಅವಳ ಮನೆ ಹೇಗೆಲ್ಲಾ ಐಶಾರಾಮಿ ಹೊಂದಿರಬಹುದು! ಎಂದು ಮನಸ್ಸಿನಲ್ಲಿ ಏನೇನೋ ವಿಚಾರಗಳನ್ನು ಮಾಡುತ್ತಾ ಅವಳ ಹಿಂದೆ ಹೋದೆ. ಅದೊಂದು ದೊಡ್ಡ ಚರಂಡಿ ಸರಿಸುಮಾರು ಬೆಂಗಳೂರಿನ ಮುಕ್ಕಾಲು ಏರಿಯಾದ wastewater ಆ ಚರಂಡಿಯಲ್ಲಿ ಹರಿಯುತ್ತಿತ್ತು. ಅದರ ಪಕ್ಕ ಸಾಲಾದ ಮನೆಗಳು. ಆ ಮನೆಗಳಿಗೆಲ್ಲಾ ಒಂದೇ toilet. ಆ ಮನೆಗಳ ಚಾವಣಿಗಳನ್ನ ಸಿಮೆಂಟಿನ ತಗಡುಗಳಿಂದ ಹೊದಿಸಲಾಗಿತ್ತು. ಅದರಲ್ಲಿ ಸುಜಾತ ಆಂಟಿದು ಒಂದು. ಅದು ಸ್ವಂತದ್ದಲ್ಲ ಬಾಡಿಗೆಯ ಮನೆ. ” ಬಾ ಗಾಳೇರ ಒಳಗೆ” ಎಂದಾಗ “ಹಾ ಅಂಟಿ” ಎಂದು ಆಚೆ ಈಚೆ ನೋಡುತ್ತಾ ಒಳಗಡೆ ಕಾಲಿಟ್ಟೆ. ಎರಡು ಕೋಣೆಗಳನ್ನು ಹೊಂದಿದ ಆ ಮನೆಯಲ್ಲಿ hall ಮತ್ತು kitchen ಬೇರೆ ಬೇರೆ ಆಗಿರಲಿಲ್ಲ. ಎರಡು ಚಿಕ್ಕ ಹೆಣ್ಣು ಮಕ್ಕಳು ಓದುತ್ತ ಕುಳಿತಿದ್ದವು. ಆ ಮಕ್ಕಳ ಹೋಲಿಕೆ ಸುಜಾತ ಅಂಟಿ ತರ ಇದ್ದುದರಿಂದ ಅಂಟಿಯ ಮಕ್ಕಳಿರಬಹುದು ಅನಿಸಿತು. ಇನ್ನೊಂದು ಮೂಲೆಯಲ್ಲಿ ರಗ್ಗು ಒದ್ದು ಕೊಂಡು ಮಲಗಿದ ವೆಕ್ತಿ ಅಂಟಿಯ ವಯಸ್ಸಾದ ತಂದೆ ಇರಬಹುದೆಂದು ಅಂದು ಕೊಂಡೆ. ಅಲ್ಲೇ ಪಕ್ಕದಲ್ಲಿ ಒಂದು ಮಂಚ. ಅದನ್ನು mostly ಆಂಟಿ ಬೆಂಗಳೂರಿಗೆ ಬಂದ ಹೊಸತನದರಲ್ಲಿ ತಂದಿರಬಹುದೆನಿಸುತ್ತಿತ್ತು. ಯಾಕೆಂದರೆ ಆ ಮಂಚ ತಗ್ಗು-ದಿಮ್ಮಿ ಇಂದ ಕೂಡಿತ್ತು. ಅದರ ಮೇಲೆ ಹಳೆಯದಾದ ಕೌದಿ. ಅದನ್ನು ನೋಡಿದ ತಕ್ಷಣ ನನಗೆ ಪ್ರಕಾಶ ಮತ್ತು ಮಹೇಶ ಅಷ್ಟೇ ಅಲ್ಲದೆ ಇನ್ನೂ ಎಷ್ಟೋ ಯುವಕರು ಈ ಮಂಚದ ಮೇಲೆ ಹತ್ತಿ ಇಳಿದಿದ್ದಾರೋ….. ಎಂದು ಯೋಚಿಸುತ್ತಾ ಕುಳಿತಿರಬೇಕಾದರೆ. ಆಂಟಿ ಒಳಗಿನಿಂದ “ಗಾಳೇರ ಟೀ ಕುಡಿತೀರಾ…..” ಎಂದಾಗ ವಾಸ್ತವಕ್ಕೆ ಮರಳಿದೆ.

       ಮೂಲೆಯಲ್ಲಿ ರಗ್ಗನ್ನು ಒದ್ದು ಕೊಂಡು ಮಲಗಿದ್ದ ವೆಕ್ತಿ. “ಏನೇ ಸುಜಿ ಔಷಧಿ ತಂದೆಯಾ” ಎಂದಾಗ ನನಗೆ ಆಶ್ಚರ್ಯವಾಯಿತು. ಅಲ್ಲಿವರೆಗೆ ಸುಜಾತಳ ತಂದೆ ಎಂದುಕೊಂಡಿದ್ದ ನಾನು ಆ ವ್ಯಕ್ತಿ ಆಂಟಿಯನ್ನು ಸುಜಿ ಅಂದಾಗ ಓ ಇವರು ಆಂಟಿಯಾ ಗಂಡ ಇರಬೇಕೆಂದುಕೊಂಡೆ. ಆಗ ಆಂಟಿ “ಹಾ ತಂದಿದ್ದೀನಿ ಇರು ವಸಿ ಕೊಡ್ತೀನಿ” ಎಂದಳು. ಆಗ ನನ್ನ ಮನಸ್ಸಿನಲ್ಲಿ ಮತ್ತೆ ಯೋಚನೆಗಳ ಲಹರಿಯೇ ತೇಲಿದವು. ಓ ಆಂಟಿಯ ಗಂಡ ರೋಗಿಷ್ಟನದ್ದರಿಂದ ಆಂಟಿ ತನ್ನ ದೇಹದ ಆಸೆ ತಾಳಲಾಗದೆ ಯುವಕರಿಗೆ ಬಲೆ ಬೀಸುತ್ತಿದ್ದಾಳೆಂದು ಯೋಚಿಸುತ್ತಿರುವಾಗಲೇ…..ಅಂಟಿ “ಏನು ಗಾಳೇರ… ಏನು ಯೋಚಿಸ್ತಾ ಇದ್ದೀಯ. ಅವರು ನಮ್ಮ ಯಜಮಾನ್ರು. ನಾನು ಅವರನ್ನು ಹೀಗೆ ಇಪ್ಪತ್ತು ವರ್ಷಗಳ ಕೆಳಗೆ ಲವ್ ಮಾಡಿ ಮದುವೆಯಾಗಿ ಹಳ್ಳಿ ಬಿಟ್ಟು ಬೆಂಗಳೂರು ಸೇರಿಕೊಂಡೆವು. ಆಗ ನಮಗೆ ಹುಟ್ಟಿದ್ದೇ ಈ ಎರಡು ಹೆಣ್ಣು ಮಕ್ಕಳು. ನನ್ನ ಗಂಡ ಎಂತಹ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ನನಗೆ ಸಮಯಕ್ಕೆ ಸರಿಯಾಗಿ ಊಟ ಆಯಿತಾ ಎಂದು ಕೇಳದೆ ಇರಲಾರ. ಅಷ್ಟೊಂದು ಪ್ರೀತಿ ನನ್ನ ಗಂಡನಿಗೆ…..” ಎಂದು ನಿಟ್ಟುಸಿರು ಬಿಟ್ಟಳು. “ಆಗಿದ್ದರೆ ಪ್ರಕಾಶ ಮತ್ತು ಮಹೇಶನನ್ನೂ…..” ಎಂದು ಮಾತನ್ನು ತೊದಲಿಸಿದಾಗ; ಅಂಟಿ “ಗಾಳೇರ ಇಲ್ಲಿ ನೋಡು ನನ್ನ ಗಂಡನಿಗೆ ಏಡ್ಸ್ ರೋಗ, ಇದಕ್ಕೆ ಕಾರಣ ಏನು ಗೊತ್ತಾ ನಾನು ಇವರನ್ನು ಮದುವೆ ಆಗುವುದಕ್ಕಿಂತ ಮುಂಚೆ ಇವರು ಅದೆಷ್ಟು ಮಹಿಳೆಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದರು ಗೊತ್ತಿಲ್ಲ. ಅದರ ಪ್ರತಿಫಲವೇ ಈ ರೋಗ. ಆದರೆ ಮದುವೆಯಾದ ಮೇಲೆ ನನ್ನ ಬಿಟ್ಟು ಬೇರೆ ಯಾರನ್ನೂ ಕೂಡ ಕಣ್ಣೆತ್ತಿ ನೋಡಿಲ್ಲ. ಏನು ಪ್ರಯೋಜನ! ಮಿಂಚಿ ಹೋದ ಕಾಲ ಮತ್ತೆ ಬರುವುದೆ. ಅದಕ್ಕೆ ಪ್ರಕಾಶ ಮತ್ತು ಮಹೇಶ ಇನ್ನೂ ಏನು ಅರಿಯದ ಯುವಕರು ಇವಾಗಲೇ ಹಲವಾರು ಹುಡುಗಿಯರ ಹಿಂದೆ ಬಿದ್ದರೆ ನನ್ನ ಗಂಡನಂತೆ ಮೂಲೆಯಲ್ಲಿ ಮಲಗುತ್ತಾರೆ ಅವರ ಹೆಂಡತಿಯರು ನನ್ನಂತೆ ರೋಗಿಷ್ಟ ಗಂಡನನ್ನು ಕಟ್ಟಿಕೊಂಡು ದಿನನಿತ್ಯ ಕಣ್ಣೀರು ಹಾಕಬಾರದೆಂದು ಅವರನ್ನು ನನ್ನತ್ತಾ ಸೆಳೆದುಕೊಂಡು. ಮತ್ತೆ ಹೆಣ್ಣಿನ ಬಗ್ಗೆ ಜಿಗುಪ್ಸೆ ಬರುವಂತೆ ಮಾಡಿದೆ. ಈಗ ನೋಡು ಅವರು ಯಾವ ಹೆಣ್ಣನ್ನು ಸಹ ನೋಡುವುದಿಲ್ಲ. ಇದಕ್ಕೆ ನಾನು ಅವರಿಂದ ಪ್ರತಿಫಲವಾಗಿ ದುಡ್ಡನ್ನು ಪಡೆದುಕೊಂಡು ನನ್ನ ಗಂಡನಿಗೆ ಔಷಧಿ ತರುತ್ತಿದ್ದೆ” ಎನ್ನುವ ಮಾತುಗಳನ್ನು ಕೇಳಿದ ನನಗೆ ಕಣ್ಣಂಚಿನಲ್ಲಿ ನೀರು ತಾನಾಗಿಯೇ ಹರಿಯಿತು. ಅಷ್ಟರಲ್ಲಿ ಪಕ್ಕದಲ್ಲಿ ಕುಳಿತ ಮಕ್ಕಳು “ಅಮ್ಮ ಈ homework ಹೇಳಿ ಕೊಡಮ್ಮ” ಎಂದಾಗ; ಅಂಟಿ “ನಾನು ಅಡುಗೆ ಮಾಡಬೇಕು ಇವತ್ತು ಅಣ್ಣ ಹೇಳಿಕೊಡತಾನೆ ಅಂತ ನನ್ನ ಕಡೆ ತೋರಿಸಿದಾಗ” ನನ್ನ ಮನಸ್ಸು ಶಾಂತತೆಯ ಕಡಲಿಗೆ ಜಾರಿತು.

********

ಮೂಗಪ್ಪ ಗಾಳೇರ

Leave a Reply

Back To Top