ಕಾವ್ಯಯಾನ

ನಿರುಪದ್ರವಿ

ವಸುಂಧರಾ ಕದಲೂರು

ಗಿಡಗಂಟಿ ಬಳಿ ಹೂ ಕೊಯ್ಯಲು
ಹೋದೆ;
ಮೈ ಮೇಲೆ ಕಪ್ಪು ಇರುವೆ
ಹತ್ತಿದೆ.

ಅದು ಹಾದಿ ತಪ್ಪಿತೆ ಅಥವಾ
ನಾನು ತಪ್ಪಿದೆನೆ

ಬೆರಳ ಬೆಟ್ಟಗುಡ್ಡ ಏರಿಳಿದು,
ಅಂಗೈ ರೇಖೆ ಅಳೆದು, ಸರಸರಾ
ಸರಸರಾ ಸಂಚರಿಸಿತು

ಸಾವಧಾನವೇ ಇಲ್ಲ
ಸರಸರಾ ಸರಸರಾ..

ನೋಡುತಿದ್ದೆ
ಕಂಗೆಟ್ಟದ್ದು ಯಾರು

ಭುಜದ ಮೇಲೆ; ಹಣೆ, ಮೂಗು,
ಕೆನ್ನೆ ಮೇಲೆಲ್ಲಾ ಹರಿದಾಡಿತು
ಸರಸರಾ ಸರಾಸರಾ..

ಈ ಮೈ, ಈ ಜೀವವುಳ್ಳ
ನನ್ನನ್ನು ಹೊತ್ತ ಮೈ ; ಬಲು
ಬಂಜರೆನಿಸಿತೇನು

ಎದೆಗಿಳಿಯಲಿಲ್ಲ;
ಒಲವ ಪಸೆ ಕಾಣಲಿಲ್ಲ.

ಹರವಾದ ಈ ದೇಹ
ಒಂದು ಇರುವೆಗೂ
ಆಗಿಬರದಷ್ಟು ದೊಡ್ಡದು;
ಸತ್ತ ಮೇಲೆ ಬೂದಿಕಸ.

ಸರಸರಾ ಸರಸರಾ..
ತಡಕಾಡಿತು ಬಿಡುಗಡೆಯ
ಹಾದಿಗೆ
ಸರಸರಾ ಸರಸರಾ..

ಸಿಕ್ಕಿತದೋ ಕಾಲ ಬುಡದಲ್ಲಿ
ನೆಲ, ಹಸಿರು, ಬದುಕು,
ಒಲವು..
ಸರಸರಾ ಸರಸರಾ..

ಒಮ್ಮೆಗೆಲೆ ಕಳಚಿತು. ಹೇಗೆ
ಜಾರಿಕೊಂಡಿತೋ ತಿಳಿಯದು

ಯಾರಿಲ್ಲಿ ಆ ನಿರುಪದ್ರವಿ !

•••••••••••••

Leave a Reply

Back To Top