ಕಾವ್ಯಯಾನ

ಹಸಿರು ಕುದುರೆ

ನೀ.ಶ್ರೀಶೈಲ ಹುಲ್ಲೂರು

ಹಸಿರು ಕುದುರೆ

An early 20th century painted wooden horse. - Bukowskis

ರಾಜನೊಂದು ಸಂಜೆ ತನ್ನ
ರಾಜ ತೋಟದಲ್ಲಿ ಬರಲು
ಮೋಜುಗರೆವ ಹಕ್ಕಿಯುಲಿಗೆ ಸೋತುಹೋದನು

ಹಚ್ಚಹಸಿರು ಕಂಡ ತಾನು
ಮೆಚ್ಚಿ ಹರುಷ ಸೂಸುತಿರಲು
ಹುಚ್ಚು ಮನದಿ ಆಸೆಯೊಂದು ಹುಟ್ಟಿಕೊಂಡಿತು

ಹಸಿರು ಸಿರಿಯ ನಡುವೆ ನಲಿದು
ಹೊಸತನೊಂದ ಯೋಚಿಸುತಲಿ
ಹಸಿರು ಕುದುರೆ ಏರೊ ಕನಸು ತುಂಬಿಕೊಂಡನು

ಬೀರಬಲ್ಲನನ್ನು ಕರೆದು
ಕೊರೆವ ಆಸೆ ಹೇಳಿಕೊಂಡು
ವಾರದಲ್ಲಿ ಹಸಿರು ಕುದುರೆ ತರಲು ಹೇಳಿದ

ಉಕ್ಕಿಬರುವ ನಗೆಯ ತಡೆದು
ಅಕ್ಕರೆಯಲಿ ಒಪ್ಪಿಕೊಂಡು
ಸಿಕ್ಕ ಸಿಕ್ಕ ಊರಿನಲ್ಲಿ ಸುಮ್ಮನಲೆಯತೊಡಗಿದ

ಉಂಟೆ ಜಗದಿ ಹಸಿರು ಕುದುರೆ?
ಕುಂಟು ನೆಪವ ಮಾಡಿ ರಾಜ
ಗಂಟು ಬಿಡಿಸಲವಗೆ ಒಂದು ದಾಳ ಹಾಕಿದ

ಏಳು ದಿನಕೆ ಸಭೆಗೆ ಬಂದು
ಹೇಳಿಕೊಂಡ ಹಸಿರು ಕುದುರೆ
ನಾಳೆಗೇನೆ ತರಲುಬಹುದು ಇಚ್ಛೆಪಟ್ಟರೆ

ಕುದುರೆ ಒಡೆಯನೆರಡು ಮಾತು
ಮುದದಿ ನೆರವೇರಿಸಲೆಬೇಕು
ಅದನು ಕೇಳಿ ಮೊದಲು ನೀವು ಗಮನದಿಂದಲಿ

ಮೊದಲ ಮಾತು ರಾಜನಷ್ಟೆ
ಕುದುರೆ ತರಲು ಹೋಗಬೇಕು
ಇದಕೆ ತಮ್ಮಭಿಮತವದೇನು ಹೇಳಿ ಈಗಲೆ

ಒಪ್ಪಿಕೊಂಡ ರಾಜನದಕೆ
ತಪ್ಪಿನಡೆಯೆ ಎನಲು ಅವಗೆ
ಗಪ್ಪನೆಯೆ ಮತ್ತೊಂದು ಮಾತ ಹೇಳಿಬಿಟ್ಟನು

ವಾರದೇಳು ದಿನವ ಬಿಟ್ಟು
ಬರಲುಬೇಕು ನಿಮ್ಮ ರಾಜ
ಕರೆದು ಬೇಗ ತರಹೋಗೆಂದು ನನಗೆ ಹೇಳಿದ

ಇದನು ಕೇಳಿ ಬೆಚ್ಚಿ ರಾಜ
ವದನ ಮುಚ್ಚಿ ನಾಚಿಕೊಂಡು
ಸದನದೆದುರು ತನ್ನ ಸೋಲನೊಪ್ಪಿಕೊಂಡನು

ಬೀರಬಲ್ಲ ನಿನ್ನ ಜಾಣ್ಮೆ
ಮೀರಬಲ್ಲ ಮನುಜರಿಲ್ಲ
ಅರಸನ ಕೊಹಿನೂರ ವಜ್ರ ನೀನು ಎಂದನು

********

One thought on “ಕಾವ್ಯಯಾನ

Leave a Reply

Back To Top