ನಾನಲ್ಲದ ನಾನು
ವಿದ್ಯಾಶ್ರೀಎಸ್ಅಡೂರ್
ಬಂಧಿ ನಾನು ಕೋಟೆ ಕೊತ್ತಲಗಳಲ್ಲಲ್ಲ
ನನ್ನದಲ್ಲದ ಬದುಕಿನಲ್ಲಿ,
ಬಂಧಿ ನಾನು, ನಾಲ್ಕು ಗೋಡೆಗಳ ನಡುವಲ್ಲಲ್ಲ
ಗೊಡ್ಡು ಸಂಪ್ರದಾಯಗಳ ಮುಖವಾಡದಲ್ಲಿ,
ಒಂಟಿ ನಾನು, ಈ ಜನಜಾತ್ರೆಯ ನಡುವಲ್ಲಲ್ಲ
ನನ್ನ ಮನದ ವಿಶ್ವದಲ್ಲಿ
ಒಂಟಿ ನಾನು, ನನಗೆ ನನ್ನವರು ಇಲ್ಲದೆ ಅಲ್ಲ
ನನ್ನತನವೆಂಬ ಲೋಕದಲ್ಲಿ.
ಮೂಕಿ ನಾನು, ಮಾತ ಮಲ್ಲಯುಧ್ಧದಲ್ಲಲ್ಲ
ನನ್ನ ಮೌನವಾದ ಕನಸುಗಳಲ್ಲಿ
ಮೂಕಿ ನಾನು, ಈ ಮಾತಿನರಮನೆಯಲ್ಲಲ್ಲ
ನನ್ನ ಸ್ವಂತಿಕೆಯ ದಿಗಂತದಲ್ಲಿ.
ಬೊಂಬೆ ನಾನು, ನನಗೆ ಭಾವಗಳು ಇಲ್ಲದೆ ಅಲ್ಲ
ನನ್ನ ಆವರಿಸಿದ ಬಾಹ್ಯ ಮಾನಸಿಕತೆಗಳಲ್ಲಿ
ಬೊಂಬೆ ನಾನು, ನನ್ನ ಕೈ ಕಾಲು ಅಲ್ಲಾಡದೆ ಅಲ್ಲ
ಅನೇಕ “ಅಹಂ”ಗಳ ಕಪಿಮುಷ್ಟಿಯಲ್ಲಿ.
ಯಂತ್ರ ನಾನು, ನನ್ನ ಚಲಿಸುವಿಕೆ ನನ್ನ ಕೈಯಲ್ಲಿ ಇಲ್ಲದೆ ಅಲ್ಲ
ನನ್ನ ದಿನಚರಿಯ ಪುನರಾವರ್ತನೆಯಲ್ಲಿ
ಯಂತ್ರ ನಾನು, ನನ್ನ ಬೇಕು ಬೇಡಗಳ ಅರಿವಿಲ್ಲದೆ ಅಲ್ಲ
ಕೂಪಮಂಡೂಕದಂತಿರುವ ಮನಸ್ಥಿತಿಗಳಲ್ಲಿ.
**********