ಪುಸ್ತಕ ಸಂಗಾತಿ

ಆಡು ಕಾಯೋ ಹುಡುಗನ ದಿನಚರಿ

ಪುಸ್ತಕ:ಆಡು ಕಾಯೋ ಹುಡುಗನ ದಿನಚರಿ
(ಅನುಭವ ಕಥನ)
ಲೇಖಕರು:ಟಿ.ಎಸ್.ಗೊರವರ
ಪ್ರಕಾಶಕರು:ಪಲ್ಲವ ಪ್ರಕಾಶನ,ಚನ್ನಪಟ್ಟಣ

ಶಿವರಾಜ್ ಮೋತಿ

ಕಳೆದ ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕದಂಗಡಿಗಳ ಬಜಾರಿನಲ್ಲಿ ಮತ್ತೆ-ಮತ್ತೆ ದೋಸ್ತಿಗಳ ಜೊತೆಗೂಡಿ ವಾಲೆಂಟಿಯಾದ್ರೂ ತಿರುಗುತ್ತಿದ್ದಾಗ ಸಂಗಾತದ ಮಳಿಗೆ ಕಣ್ಣಿಗೆ ಬಿದ್ದಿತ್ತು.ಹೋಗಿ ಮಾತಾಡಿಸಿದಾಗ ಈ ಆಡು ಕಾಯೋ ಹುಡುಗನ ದಿನಚರಿ ಪುಸ್ತಕವನ್ನ ಪ್ರೀತಿಯಿಂದ ನನ್ನ ವರ್ತನೆಯನ್ನು ನೋಡಿ ಹವ್ಯಾಸವನ್ನು ಅರಿತುಕೊಂಡಂತೆ ಆಫ್ ರೇಟಿಗೆ ಕೊಟ್ಟಿದ್ದರು.ಉಡಾಳ ಹುಡುಗನಾಗಿ,ಆಡು ಕಾಯುತ್ತಾ,ಎಮ್ಮೆ ಟೀಮಿನವನಾಗಿ ಚೇಷ್ಟೇ-ಕುಚೇಷ್ಟೆಗಳನ್ನೂ ಮಾಡುತ್ತಾ ಬೆಳೆದ ಅಪ್ಪಟ ಹಳ್ಳಿ ಹುಡುಗನ ಬದುಕಿನ ಚಿತ್ರಣವಿದು.

ಈ ಪುಸ್ತಕದಲ್ಲಿ ಒಟ್ಟು ೧೬ ಭಾಗಗಳಿವೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ತನ್ನ ಮುಡಿಲಿಗೇರಿಸಿಕೊಂಡಿದೆ.ಎರಡನೆಯ ಮುದ್ರಣವೂ ಮುಗಿದು,ಮೂರನೆಯದಕ್ಕೂ ಅಣಿಯಾಗುತ್ತಿದ್ದಿರಬಹುದು.ಹಿಂದೊಮ್ಮೆ ಅಲ್ಪ ಓದಿದ್ದೆ, ಈಗ ರಾತ್ರಿ ಎರಡಾದರೂ ಒಂದೇ ಗುಟುಕಿಗೆ ಓದಿ ಮುಗಿಸಿ ಇಲ್ಲಿನ‌ ಕೆಲ ಹಾಸ್ಯಗಳನ್ನು ಒಬ್ಬೊಬ್ಬನೇ ನೆನಪಿಸಿಕೊಂಡು ನಗಾಡುತ್ತಿದ್ದೆ.

ಹಳ್ಳಿಯ ಸೊಡಗು,ಪರಿಸರ,ಪ್ರಾದೇಶಿಕ,ಕೂಲಿಕಾರರ ತಾಯಂದಿರ ಬವಣೆಯ ಕರಾಳ ಬದುಕನ್ನು ಬಿಚ್ಚಿಟ್ಟ ಪರಿ ಅದ್ಭುತವಾಗಿದೆ.ಇಲ್ಲಿ ಬಳಸಿದ ಕೆಲ ಹಳ್ಳಿಯ ಪದಗಳನ್ನು ಮತ್ತೊಮ್ಮೆ ಓದಿಯೇ ಅರ್ಥೈಸಕೊಳ್ಳಬೇಕಾಗಿದೆ.ಉತ್ತರಕರ್ನಾಟಕ ಭಾಷೆಯ ಅಪರೂಪದ ಪುಸ್ತಕವೆಂದರೂ ತಪ್ಪಾಗಲಾರದು.

ಅವ್ವ-ಅಪ್ಪನ ಜಗಳ,ಹೊಡೆದಾಟ,ಧಾರವಾಡದ ಸೊಬಗು,ಅಪ್ಪ ಏಟು ಕೊಟ್ಟಾಗ ರಮಿಸಿ ಅವ್ವನು ಚೇಷ್ಟೆಗೆ ಕೊಟ್ಟ ಏಟು,ಮಂತ್ರಿಸಿದ ತತ್ತಿ ತಿಂದಿದ್ದು,
ಚಿತ್ತಾಬಕ್ಕಾ ಆಡುವಾಗ ಅಪ್ಪನ ಕೈಗೆ ಸಿಕ್ರೂ ಸಿಗದೇ ದ್ಯಾವ್ರನ ನೆನ್ಸಿಕೊಂಡು ಓಡಿದ್ದು,ಜಾತ್ರೆಲಿ ಪಿಸ್ತೂಲ್ ಕದ್ದು ಕಪಾಳಮೋಕ್ಷ ಮಾಡಿಸಿಕೊಂಡಿದ್ದು,ಊರಿನವರ ಕೂಲಿನ ಬಗ್ಗೆ ಎಲ್ಲವೂ ಅನನ್ಯವಾಗಿ,ಅಮೂಲ್ಯವಾಗಿ ಬಹು ಚಿತ್ರಿತವಾಗಿವೆ.

ಇಲ್ಲಿನ‌ ಕೆಲ ಹಾಸ್ಯಗಳನ್ನು ಸಿನಿಮಯ ರೀತಿಯಲ್ಲೇ ಓದಿಯೇ ಅದರ ಸ್ವಾದಿಷ್ಟ ಅನುಭವಿಸಲೆಬೇಕು.

ಈಜಾಡಲು ಹೋದಾಗ ಬತ್ತಲೆಯಾಗಿ ಅವರದು ಇವರು,ಇವರದು ಅವ್ರು ನೋಡಿ ನಗಾಡ್ತಿದ್ದಿದ್ದು.ಅಲೈ ಹಬ್ಬದಾಗ ಹಣಮಂತ ದೇವ್ರ ಪೂಜಾರಿನ ಕಾಡಿಸಿ,
ಅಟ್ಟಕೇರಿಸಿ ಕುಣಿಯ ಬೆಂಕ್ಯಾಗ ಹಾರಿಸಿದ್ದು.ಮಾಟ ಮಂತ್ರಕ ಮೂರುದಾರಿ ಸೇರೋ ಜಾಗದಲ್ಲಿ ಮಾಡಿಸಿಟ್ಟಿದ್ದಿದ್ದನ್ನ ತಿಂದ ದುರಗಮ್ಮ ದೇವ್ರಿಗೆ ಲಂಚಕೊಟ್ಟಿದ್ದು ಇನ್ನೂ ಬಿದ್ದು-ಬಿದ್ದು ನಗಿಸುವ ಪ್ರಸಂಗಗಳಾಗಿವೆ.

ಒಮ್ಮೆ ಜಾತ್ರೆಯಲ್ಲಿ ಕದ್ದ ಪಿಸ್ತೂಲಿನ ಬಗ್ಗೆ ಗೊರವರ ಅವರು ಕನ್ನಡಪ್ರಭದಾಗ ಆ ಬರಹನ ಪ್ರಕಟಿಸಿದ್ದರು.
ಅದನೋದಿದ್ದೆ.ಒಮ್ಮೆ ಅಚಾನಕವಾಗಿ ಧಾರವಾಡದ ಸಂಗಾತ ಕಚೇರಿಗೂ ಹೋಗಿದ್ದೆ,ಅದೇ ಸಮಯದಾಗ ಪಲ್ಲವ ವೆಂಕಟೇಶರೂ ಬಂದಾಗ ಪಿಸ್ತೂಲ್ ಕಳ್ಳನೆಂದು ಗೊರವರ್ ಸರ್ ಗೆ ಮಾತಾಡಿದಾಗ,ನೀನು ಯಾರು,
ನಿನ್ನ ಹಿನ್ನೆಲೆ ಏನು ಎಂದು ಪಲ್ಲವ ಪ್ರಕಾಶನದವರೂ ಕೇಳಿದರು.ತಿಳಿಸಿದಾಗ ಆಗ ಗೊರವರ ಅವ್ರು ಅದ್ಕೇ ಅನ್ನುತ್ತಿನಿ ಇವ ಜಾತ್ರಿ ಬಗ್ಗೆ ಜಾಸ್ತಿ ಯಾಕ ಮಾತಾಡಕಂತ ಅಂತ ಅಂದ್ರು ತುಸುನಕ್ಕಿದ್ದೆ.

ಇಂತ ಪುಸ್ತಕ ಕೊಟ್ಟು ನಗಿಸಿ,ಓದಿಸಿದ ಗೊರವರ ಸರ್ ಗೆ ನನ್ನ ಧನ್ಯತಾಭಾವವಿದೆ.ನನ್ನ ಬಾಲ್ಯದ ಬದುಕಿನ ಎದೆಯಾಳ ಹೊಕ್ಕಿವೆ,ನಿಜಕ್ಕೂ ಖುಷಿಯಾಗಿರುವೆ.ನೀವೂ ಓದಿ ಖುಷಿಯಾಗಿ ಎನ್ನುತ್ತಾ..!!!

************

Leave a Reply

Back To Top