ನಾವು ಕಾರ್ಮಿಕರು
ರಾಜು ದರ್ಗಾದವರ
ಕಲ್ಲುಬಂಡೆ ತಲೆ ಮೇಲೆ ಹೊತ್ತು
ಆಗಸದಗಲ ನಗುವ ಬಯಸಿ
ಕಷ್ಟನಸ್ಟ ಪಕ್ಕಕ್ಕಿಟ್ಟು
ಜೋಳಿಗೆಯಲ್ಲಿ ಕೂಸುಬಿಟ್ಟು
ದೂರದ ಬೆಟ್ಟಕ್ಕೆ ಲಗ್ಗೆ ಜಡಿದು
ಹಗಲುಗನಸು ಅದರೊಂದಿಗೆ ಬೆಸೆದು
ಇರುಳು ಕಳೆದು, ಹಗಲು ಬರುವ ದಿಕ್ಕಿನಡಿಗೆ
ಬಿಸಿಲುಬಾಗಿಲ ಬಡಿದು,
ಗಟ-ಗಟ ಗಂಟಲ ಸಪ್ಪಳದಿ
ಹೊಟ್ಟೆಯ ಹಸಿವನ್ನು ತಳಕು ಹಾಕಿದವರು
ನಾವು ಕಾರ್ಮಿಕರು,ನಾವು ಕಾರ್ಮಿಕರು
ಕೊಳಕುಬಟ್ಟೆ ಮೈಮೇಲೆ ಉಟ್ಟು
ಮನದ ತುಂಬ ಪಿರುತಿ ಹೊಯ್ದು
ಉಪ್ಪುನೀರು ಹರಿಯಲುಬಿಟ್ಟು
ಎಚ್ಚತ್ತ ಕಣ್ಣು ಮಲಗದಂತೆ,ಬೆಚ್ಚನೆ ಕಣ್ಣೀರಿಗೆ
ಕರಿಗಲ್ಲ ತೊಯ್ದು
ಕಾರು,ಬಂಗ್ಲೆ ಆಸೆ ಗಂಟುಮಾಡಿ ಸುಟ್ಟುಬಿಟ್ಟು
ಹೊತ್ತುಗಂಜಿ ಆಸೆಪಟ್ಟು
ಕುದಿಯುವ ರೋಡಿಗೆ ಬರಿಗಾಲ ಎದೆಯ ಬಡಿದು
ಹಳ್ಳಿಯಿಂದ ಮುಖ ತಿರುವಿ,ದುಡಿವ ಮೈಯ ಕೊಡವಿ, ಪಟ್ಟಣದ ಗರ್ಭವ ಸೇರಿ
ಎತ್ತೆತ್ತರ ಕಟ್ಟಡದ ಅಂಗಾಲಲಿ ಬಗ್ಗಿ ನಡೆದು
ಅಣಿಕಿಸಿಹೋಗುವ ಹೊತ್ತು ಕಳೆದವರು
ನಾವು ಕಾರ್ಮಿಕರು, ನಾವು ಕಾರ್ಮಿಕರು
*********