ಖಾಲಿಯಾಗುಳಿಸಿದವನು
ಶಿವಲೀಲಾ ಹುಣಸಗಿ
ಈಗೆಲ್ಲಿ ಮಾಯವಾದೆ
ನಿನ್ನೊಡನಾಟದ ಬಿಸಿಯೊಳಗೆ ಬೀಸಿದಬ್ಬರದ
ಬಿರುಗಾಳಿಯಲಿ
ಸಿಲುಕಿ ಹೊಯ್ದಾಡುತಿಹೆ
ದೇಹದ ಕಣಕಣದಲೂ ಬೆರೆತ ನೀನು
ಬಯಸಿದಾಗ ಕೈ ಜಾರುವ ಮೀನು
ಹೆಪ್ಪುಗಟ್ಟಿದ ನರಗಳಲಿ
ನೆತ್ತರು ಹರಿಸಿ
ನೀನಪ್ಪಿದಾಗ ಬಯಕೆ ಕಾಡಿತ್ತು ನಿನ್ನೊಳಗೊಂದಾಗುವ
ಕ್ಷಣದೆ
ಬಟಾಬಯಲು
ಗಾಳಿಯ ಹುಯಿಲು
ಮರುಚಣ ಮುತ್ತಿದ ಮೌನದ ಹೊರತಾಗೇನು ಉಳಿದಿಲ್ಲವಿಲ್ಲಿ
ಕನಸಿಗೆ ಮುನ್ನುಡಿಯಾದವನು
ಬೆನ್ನುಡಿಯಾಗಲಿಲ್ಲ ನನಸಿಗೆ
ಇಲ್ಲೀಗ ಅದೇ ಕೋಣೆ ಅದೇ ಕನಸುಗಳು
ಅದೇ ಹಾಸಿಗೆದಿಂಬುಗಳು
ಮತ್ತೆ ಮರಳುವೆಯೇನು ಹಸಿವಾದಾಗ?
ಎದೆಗೊರಗಿ ಮಲಗಿದವ
ಹೇಳಿ ಹೋಗಬಾರದಿತ್ತೇನು
ಪಿಸುಮಾತಿನಲಾದರೂ!
*******
ಚೆಂದ ಕವಿತೆ