ಕೊರೊನ ಕಾಲದಲ್ಲಿ…
ಶ್ವೇತಾ ಎಂ ಯು.
ಕರೋನಾ ಕಾಲದಲ್ಲಿ ಕೂತುಂಡು
ಮೈ ಭಾರ ಹೆಚ್ಚಿಸಿದವರ ನಡುವೆ
ದುಡಿಮೆಯಿಲ್ಲದೆ
ಜೀವಭಯದಿಂದ ಬದುಕೊ ಹಠವು
ನಾಳೆ ಹೇಗೆಂದು ಸೊರಗಿದವರು
ಅನಾಯಾಸವಾಗಿ ಸಿಕ್ಕ ರಜೆಗೆ
ಹಾಯಾಗಿ ಪ್ರವಾಸ ಮಾಡಲಾಗದೆ
ಮರುಗುತಿರುವ ಮಂದಿಯ ನಡುವೆ
ತವರ ಸೇರಿಕೊಳ್ಳಲು
ಉಟ್ಟ ಬಟ್ಟೆಯಲಿ ಬರಿಗಾಲಲ್ಲಿ ನಡೆದು ಬೀದಿ ಪಾಲಾದವರು
ಚೆಂದ ಸೀರೆಯುಟ್ಟು
ತುಟಿಗೊಂದಿಷ್ಟು ಹೆಚ್ಚೇ ರಂಗು ಬಳಿದ ಲಲನೆಯರು
ರಾಜಕೀಯ ಭವಿಷ್ಯವು
ಲೆಕ್ಕಾಚಾರವು
ಸಹಾಯ ಹಸ್ತ ಚಾಚಿ
ತೆಗೆದ ಸೆಲ್ಫಿಗೆ
ನಗುವ ಚೆಲ್ಲಿ,
ಕೈ ಚಾಚಿದ ನೋವ ಮರೆತು
ಹಸಿದೊಡಲ ತುಂಬಲು
ಕಾದುನಿಂತಿರುವವರು
ಕುಡಿದು ಮೋಜು ಮಸ್ತಿ
ಖಾಲಿ ರೋಡು ಜಾಲಿ ರೈಡು
ದಕ್ಕಿದ ಪಾಸಿಗೆ ತುಂಬಿದ ಜೇಬು
ತುಂಬು ಗರ್ಭಿಣಿ ಹತ್ತಾರು ಮೈಲಿ ನಡೆದು
ಉಸಿರ ಬಿಡುವಾಗ
ಅಯ್ಯೋ! ಏನದ ಯಾವುದೇ ಚೆಕ್ ಪೋಸ್ಟು
ಮನೆಯಲ್ಲಿರಿ ಸುರಕ್ಷಿತರಾಗಿರಿ
ಎಂದರೆ ರಸ್ತೆಗಿಳಿದು
ಗೊತ್ತು ಗುರಿಯಿಲ್ಲದೆ
ಸುಖಾಸುಮ್ಮನೆ ಅಲೆದವರ ನಡುವೆ
ತಮ್ಮವರ ಸಾವು ನೋವಿಗೂ
ಸ್ಪಂದಿಸಲಾರದೆ ಕ್ವಾರಂಟೈನ್ ಗೆ ಸಿಲುಕಿದ ಬಡಪಾಯಿಗಳು
ದೊಡ್ಡ ಕಾರೊಳಗಿದ್ದ
ಸೆಲೆಬ್ರಿಟಿ ಮಾಡಿದ ಅಪಘಾತಕ್ಕೆ
ಚಿಕ್ಕದೆ ಒಂದು ಕೇಸು
ದೊಡ್ಡವರ ಕಾನೂನಿಗೆ ಹೆದರಿ
ರೈಲು ಹಳಿಗಳ ಮೇಲೆ
ದಣಿವಾರಿಸಿಕೊಳ್ಳುವ ಧಾವಂತದಲ್ಲಿ
ಕಟ್ಟಿಟ್ಟರೊಟ್ಟಿ ಮರೆತು
ಪ್ರಾಣ ತೆತ್ತು ಕರೋನ ಕಾಲದಲ್ಲಿ
ಸುದ್ದಿಯಾದವರು
ನನ್ನ ಜನ.
**********
ಅರ್ಥ ಭರಿತವಾದ ಕವನ ಸೊಗಸಾಗಿದೆ ಮೇಡಂ
ಸಂದರ್ಭೋಚಿತ, ಜನಸಾಮಾನ್ಯರ ಪ್ರತಿನಿಧಿಸುವ ಕವನ
ತುಂಬಾ ಚೆನ್ನಾಗಿದೆ