ಗಝಲ್
ಸಹದೇವ ಯರಗೊಪ್ಪ
ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ
ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ
ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ
ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ
ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ
ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ
ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ
ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ ನೀ ಬರಲೇ ಇಲ್ಲ
ನೇಸರ ಮಗ್ಗಲು ಬದಲಿಸುವ ಮುನ್ನ ಮರಳಿ ಬರುವ ನೀರಿಕ್ಷೆ ಇತ್ತು
ಪಾದ ಮುತ್ತಿಕ್ಕಿದ ಎದೆಯ ಹೊಸ್ತಿಲು ಕಾಯುತಿದೆ ನೀ ಬರಲೇ ಇಲ್ಲ
ಸಾಚಿಯ ಆ ದಿನಗಳ ನೆನಪು ಕುಡಿದು ತೂರಾಡುತಿವೆ
ತುಟಿಯ ಮೊಗ್ಗಿಗೆ ಮಧು ಸವರಲು ಕಾದೆ ನೀ ಬರಲೇ ಇಲ್ಲ