ಗಝಲ್
ಈರಪ್ಪ ಬಿಜಲಿ
ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ
ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।।
ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ
ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।।
ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ
ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।।
ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು
ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।।
ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ ಮಿನುಗಿ ಒಳಿತಾಗಲಿ
ನಡುನೀರಲಿ ನಿಂತವರು ದಡಸೇರಲು ಮುತ್ತಿಕೊಂಡು ನಡೆದಿದ್ದೇವೆ
*****