ಮಳೆ
ವಸುಂಧರಾ ಕದಲೂರು
ಕಿಟಕಿ ಸರಳಾಚೆ
ಸುರಿವ ಮಳೆ ಕಂಡು
ಮೂಗೇರಿಸುತ್ತೇನೆ
ಮಣ್ಣ ಘಮಲಿಗೆ..
ಬಿದ್ದ ಹನಿಯೆಲ್ಲಾ
ಸಿಮೆಂಟು ರೋಡಿನಲಿ
ಉರುಳಾಡಿ ಕೊಚ್ಚೆ
ಮೋರಿ ಸೇರುವಾಗ
ಎಲ್ಲಿಂದ ಬರಬೇಕು
ಮಣ್ಣ ವಾಸನೆ..
ಊರ ಮನೆಯಲ್ಲಿ
ಪುಟ್ಟ ತೊರೆಯಾಗಿ
ಮಳೆ ನೀರು ತುಂಬಿ
ಹರಿಯುತ್ತಿದ್ದ ಮೋರಿಗಳು
ಘಮ್ಮೆನುತ್ತಿದ್ದವು…
ಪುಟ್ಟ ಫ್ರಾಕಿನ ಹುಡುಗಿ
ಬಿಟ್ಟ ಕಾಗದದ ದೋಣಿ
ಹೊತ್ತೋಯ್ದು ಮರೆಯಾದ
ನೆನಪೂ ಘಮ್ಮೆಂದಿತು..
ಊರ ಮಳೆ ಕೇರಿ ಮಳೆ
ನೆಲದ ಮಳೆಯಾಗಿತ್ತು.
ಹರಿದು ಕಡಲ ಸೇರಿ
ದಟ್ಟ ಮುಗಿಲಾಗಿ ಘಮ್ಮೆಂದಿತು…
ಈ ನಗರ ಮಳೆ ಮಾತ್ರ
ಒಂದು ನೆನಪೂ ತುಂಬುವುದಿಲ್ಲ.
ಭೋರೆಂದು ಸುರಿದ ಮಳೆಗೆ
ಮಣ್ಣಿಲ್ಲದ ನೆಲವೂ ಇಂಗುವುದಿಲ್ಲಮಣ್ಣಿಲ್ಲದೆ ಘಮಲು ಅಡರುವುದಿಲ್ಲ
********