ಗುಲಾಬಿ ನಕ್ಷತ್ರ
ಅಂಜನಾ ಹೆಗಡೆ
ಶಾಪಿಂಗ್ ಹೋದಾಗಲೊಮ್ಮೆ
ಪರಿಚಯದ ಅಂಗಡಿಯವ
ಗುಲಾಬಿ ಬಣ್ಣದ
ಚಪ್ಪಲಿ ಹೊರತೆಗೆದ
ಬೆಳ್ಳನೆಯ ಪೇಪರಿನೊಳಗೆ
ಬೆಚ್ಚಗೆ ಸುತ್ತಿಟ್ಟ
ರಾಣಿ ಪಿಂಕ್ ಚಪ್ಪಲಿ!
“ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ”
ಎಂದ
ಹಳೆ ಚಪ್ಪಲಿಯ ಕಳಚಿ
ಪಾದಗಳನ್ನೊಮ್ಮೆ ಕೈಯಿಂದ ತಡವಿ
ಧೂಳು ಕೊಡಹಿ
ಅಳೆಯಲು ನಿಂತೆ
ಬಣ್ಣ ಗಾತ್ರಗಳ!
ಬಳಸಲಾಗದು ಅಳತೆ ದಕ್ಕದೆ
ಕುತ್ತಿಗೆಯ ತುಸುಬಾಗಿಸಿ
ಬಿಳಿಯ ಸ್ಟ್ರೈಪ್ ಗಳೊಳಗೆ
ಬೆರಳುಗಳ ಬಂಧಿಸಿ
ದಿಟ್ಟಿಸಿದೆ!
ಕನ್ನಡಿಯೊಳಗಿನ ಪಾದಗಳ
ಮೇಲೆ ಹೊಳೆದವು
ಬಿಡಿಸಿಟ್ಟ ಬಿಳಿ ಹೂಗಳು!
ಕೊರೆದಿಟ್ಟ
ಪುಟ್ಟಪುಟ್ಟ ಹೃದಯಗಳೊಂದಿಗೆ
ಗುಲಾಬಿ ನಕ್ಷತ್ರಗಳು!
ಜೊತೆಯಾದವು
ಹೆಜ್ಜೆಗಳ ನೋವು ನಲಿವಿಗೆ;
ನೇಲ್ ಪಾಲಿಷ್ ಗಳ
ಕೂಡಿಟ್ಟ ಕನಸಿಗೆ!
ನನ್ನ ನಿದ್ದೆಗೆ ಆಕಳಿಸಿ
ಎದ್ದಾಗಲೊಮ್ಮೆ ಮೈಮುರಿದು
ಕೂಡಿಕೊಂಡವು
ಹಗಲು ರಾತ್ರಿಗಳಿಗೆ
ಬಾತ್ ರೂಮು ಬಾಲ್ಕನಿ ಟೆರೆಸು
ನಿರ್ಭಯವಾಗಿ ಅಲೆದೆವು
“ದೇವರಮನೆಗೆ ಪ್ರವೇಶವಿಲ್ಲ” ಎಂದೆ
ಮುನಿಸಿಕೊಂಡವು
“ಪ್ಲೀಸ್” ಎಂದು ಪಟಾಯಿಸಿದೆ
ಎಲ್ಲ ಸಲೀಸು
ಪ್ರೈಸ್ ಟ್ಯಾಗ್ ಇಲ್ಲದ ಪ್ರೀತಿ
ಮಾರಿದೆವು; ಖರೀದಿಸಿದೆವು
ಮನಸ್ಸೊಂದು ಫ್ಲೀ ಮಾರ್ಕೆಟ್ಟು
ಈಗ
ಶಾಪಿಂಗ್ ಹೋದಾಗ
ಬಟ್ಟೆ ಬ್ಯಾಗು ತರಕಾರಿ
ಎಲ್ಲ ತರುತ್ತೇನೆ
ಚಪ್ಪಲಿ ಅಂಗಡಿಯವ
ಇನ್ಯಾರಿಗೋ
ಹೊಸ ಜೊತೆಯ ಪಿಂಕ್ ಚಪ್ಪಲಿಯೊಂದನ್ನು
ಮಾರುತ್ತಿರಬಹುದು!
ಅದರ ಮೇಲೂ ಇರಬಹುದು
ಹೂವು ಹೃದಯ ನಕ್ಷತ್ರಗಳು
******
ಕವಿತೆ ಆಪ್ತವಾಯಿತು
ಥ್ಯಾಂಕ್ಸ್ ಲೋಕೇಶ್