ಪ್ರೀತಿ ಗಂಧವನರಸುತ
ಸಂಧ್ಯಾ ಶೆಣೈ
ಫೋನ್ ರಿಂಗಾಯಿತು.. ಯಾರೆಂದು ನೋಡಿದರೆ ನಾನು ಆಗಾಗ ಊರಕಡೆಯ ತರಕಾರಿ ತೆಗೆದುಕೊಳ್ಳುತ್ತಿದ್ದ ತರಕಾರಿ ವ್ಯಾಪಾರದ ಹೆಂಗಸು.
” ಅಕ್ಕ ಒಳ್ಳೆ ಕಾಟು ಮಾವಿನ ಹಣ್ಣು ಬಂದಿದೆ ಸ್ವಲ್ಪ ತಗೊಂಡ್ ಹೋಗಿ “ಎಂದು ಹೇಳಿದಳು. ನಾನು ಹೇಳಿದೆ “ಬ್ಯಾಡ ಬ್ಯಾಡ ಮಾರಾಯ್ತಿ.. ಈ ಕೊರೋನಾ ಬಂದ ಮೇಲೆ ನಾನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಹೋಗುವುದೂ ಇಲ್ಲ. ಹಾಗಾಗಿ ಬೇಡ ನಂಗೆ ಬರಲಿಕ್ಕಿಲ್ಲ” ಎಂದೆ ಅದಕ್ಕವಳು” ಅಯ್ಯೋ ಅಷ್ಟೇಯಾ.. ಹೌದು ನೀವು ಹೇಳಿದಾಗೆ ಹೊರಗೆ ಬರೋದೇ ಬೇಡ. ನಾನು ರಾತ್ರಿ ಅಂಗಡಿ ಮುಚ್ಚಿ ವಾಪಸ್ ಹೋಗುತ್ತೇನಲಾ ಆಗ ತಂದುಕೊಡುತ್ತೇನೆ” ಎಂದು ಹೇಳಿದಳು .ಆದ್ರೂ ನಾನು ಹೇಳಿದೆ “ತುಂಬ ಹುಳಿಯಿದ್ದರೆ ಬ್ಯಾಡ ಮಾರಾಯಿತಿ. ಆಮೇಲೆ ಅದಕ್ಕೆ ಸಿಕ್ಕಾಪಟ್ಟೆ ಬೆಲ್ಲ ಹಾಕಬೇಕಾಗುತ್ತದೆ. ನಮಗೆ ಡಯಾಬಿಟಿಸ್ನವರಿಗೆ ಒಳ್ಳೆಯದೂ ಅಲ್ಲ ಅಲ್ಲವಾ” ಎಂದೆ . “ಅಯ್ಯೋ!! ಎಷ್ಟು ಒಳ್ಳೆಯದುಂಟು ಅಂದ್ರೆ ನೀವು ತಿಂದು ನೋಡಿ ಆಮೇಲೆ ಹೇಳಿ ನಾನು ನಿನ್ನೆ ನನ್ನ ಮನೆಯಲ್ಲಿ ಮಾಡಿದ್ದೆ ಹಾಗಾಗಿ ನಿಮ್ಮ ನೆನಪಾಯಿತು ಅದಕ್ಕೆ ಫೋನ್ ಮಾಡಿದೆ “ಎಂದಳು . ನಾನು “ಸರಿ ಹಾಗಾದ್ರೆ ಒಂದಿಷ್ಟು ತೆಕ್ಕೊಂಡು ಬಾ.. ನಿನ್ನತ್ರ ಪತ್ರೊಡೆ ಎಲೆ ಇದ್ದರೆ ಅದನ್ನೂ ತಗೊಂಡ್ಬಾ ಸ್ವಲ್ಪ” ..ಎಂದೆ.. ರಾತ್ರಿ ಅಂಗಡಿ ಮುಚ್ಚಿದ ಮೇಲೆ ಮನೆಗೆ ಹೋಗುವ ಮೊದಲು ಬಂದು ಕೊಟ್ಟು ಹೋದಳು.
ಈ ವಿಚಾರವನ್ನು ನಾನು ನನ್ನ ಗೆಳೆಯರೊಬ್ಬರಿಗೆ ಹೇಳಿದೆ. ಅದಕ್ಕೆ ಅವರು “ದುಡ್ಡು ತಗೊಂಡಳಾ ಇಲ್ವಾ” ಎಂದು ಕೇಳಿದರು.ಅದಕ್ಕೆ ನಾನು ಹೇಳಿದೆ “ಮಾವಿನಹಣ್ಣು ಪತ್ರಡೆ ಎಲೆ ಅವಳ ಮನೆಯಲ್ಲಿ ಆಗತದಾ ಅವಳೂ ದುಡ್ಡು ಕೊಟ್ಟೇ ತಂದಿದ್ದಲ್ಲಾ . ದುಡ್ಡು ಕೊಟ್ಟೆ ಅಪ್ಪ” ಎಂದು ಹೇಳಿದೆ. ಅದಕ್ಕೆ ಅವರು “ದುಡ್ಡು ಕೊಟ್ಟಿದ್ದೀಯಾ ಇನ್ನೇನು ಅದರಲ್ಲಿ ವಿಶೇಷ” ಎಂದು ತಮ್ಮ ವ್ಯಾಪಾರಿ ಬುದ್ಧಿಯನ್ನು ತೋರಿಸಿಯೇ ಬಿಟ್ಟರು.
ನನಗೆ ಬಹಳ ದುಃಖವಾಯಿತು ಯಾಕೆಂದರೆ ಅವಳ ವಸ್ತುವಿಗೆ ಹಣ ಕೊಟ್ಟು ಅವಳ ಪ್ರೀತಿಯನ್ನು ಅಳೆಯಲು ಸಾಧ್ಯವೇ ..ಅವಳು ಕೂತಲ್ಲೇ ಬಂದು ತೆಗೆದುಕೊಂಡು ಹೋಗುವಂತಹ ಗಿರಾಕಿಗಳು ಅವಳಿಗಿರುವಾಗ ಆ ಕೆಲಸದ ನಡುವೆ ನನ್ನ ನೆನಪಾಗಿ ಫೋನ್ ಮಾಡಿ ಮನೆತನಕ ತಂದುಕೊಟ್ಟಿದ್ದಾಳಲ್ಲ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಾದರೂ ಎಲ್ಲಿದೆ. ಪ್ರೀತಿಗೆ ಬೆಲೆ ಕಟ್ಟುವಷ್ಟು ಶ್ರೀಮಂತರೇ ನಾವು .ಅದರಲ್ಲೂ ನಾನು ಬದುಕುತ್ತಿರುವುದೇ ಇಂತಹ ಒಂದು ಮುಷ್ಟಿ ಪ್ರೀತಿಗಾಗಿ. ಬಿಡಿ ಇಂತಹ ಭಾವನಾತ್ಮಕ ವಿಚಾರಗಳು ಕೆಲವರಿಗೆ ಎಲ್ಲಿ ಅರ್ಥ ಆಗ್ತದೆ.. ಎಂದು ಅಂದುಕೊಂಡೆ.
ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಅಡುಗೆ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಹಾಕಿ ನಾಳೆ ಮಾವಿನ ಹಣ್ಣಿನ ಉಪ್ಪಕರಿ ಮಾಡುವ ಎಂದು ವಿಚಾರ ಮಾಡಿಕೊಂಡೆ. ಅದನ್ನು ಅಡಿಗೆ ಮನೆಯಲ್ಲಿ ಇಟ್ಟು ರಾತ್ರಿ ನನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಮಲಗಿದ್ದವಳು ಬೆಳಿಗ್ಗೆ ಏಳುವಾಗ ಅದು ಸರಿಯಾಗಿ ಹಣ್ಣಾಗಿದ್ದು ಅಡುಗೆ ಮನೆಯಲ್ಲಿ ಒಂದು ರೀತಿಯ ಮುದ ಕೊಡುವಂತಹ ಪರಿಮಳ ತುಂಬಿತ್ತು .ನಾನಿದ್ದೇನೆ ಇಲ್ಲಿ ಎಂದು ಮಾವಿನ ಹಣ್ಣು ಬಾಯಿಬಿಟ್ಟು ಹೇಳುತ್ತಿರುವಂತೆ ಅನ್ನಿಸುತ್ತಿತ್ತು .ಬಾಗಿಲು ಮುಚ್ಚಿದ್ದರಿಂದಲೋ ಏನೋ ನನ್ನ ಕೋಣೆಗೆ ಆ ಪರಿಮಳ ಬಂದೇ ಇರಲಿಲ್ಲ. ನಾನು ಪುನಃ ಬಂದು ನನ್ನ ಕೋಣೆಯಲ್ಲಿ ಮಲಗಿದೆ .ಸ್ವಲ್ಪ ಹೊತ್ತು ಬಾಗಿಲು ತೆರೆದಿದ್ದರಿಂದಲೋ ಏನೋ ಹೊರಗಿನ ಈ ಮಾವಿನ ಹಣ್ಣಿನ ಮಧುರ ಸುವಾಸನೆ ನಿಧಾನವಾಗಿ ನನ್ನ ಕೋಣೆಯೊಳಗೆ ತುಂಬಲಾರಂಭಿಸಿತು. ಮೊದಮೊದಲು ಮಂದವಾಗಿ ಬರುತ್ತಿದ್ದಂತಹ ಈ ಸುವಾಸನೆ ನಿಧಾನವಾಗಿ ಒಂದು ಹತ್ತು ನಿಮಿಷದೊಳಗೆ ನನ್ನ ಕೋಣೆಯಲ್ಲೆಲ್ಲಾ ತನ್ನದೇ ವಿಶೇಷ ಪರಿಮಳವನ್ನು ತುಂಬಿ ಬಿಟ್ಟಿತು ..ನಾನಂತೂ ಪರಿಮಳವನ್ನು ಆಸ್ವಾದಿಸುತ್ತಾ ಮಲಗಿದಲ್ಲಿಯೇ ಇವತ್ತು ಉಪಕರಿ ಮಾಡಲೇಬೇಕು ಎನ್ನುವ ಲೆಕ್ಕಾಚಾರ ಹಾಕುತ್ತಲೇ ಇದ್ದೆ. ಈ ತನ್ನ ವಿಶಿಷ್ಟ ಪರಿಮಳದಿಂದಲೇ ಈ ಮಾವಿನ ಹಣ್ಣು ತನ್ನ ಅಸ್ತಿತ್ವವನ್ನು ಮನೆಯಲ್ಲೆಲ್ಲ ತೋರಿಸುತ್ತಿತ್ತು. ಆಗ ಆಕಸ್ಮಿಕವಾಗಿ ನನ್ನ ತಲೆಗೆ ಒಂದು ವಿಚಾರ ಬಂತು . ಯಾವ ರೀತಿ ಅಡುಗೆ ಮನೆಯ ಒಂದು ಬದಿಯಲ್ಲಿದ್ದ ಮಾವಿನ ಹಣ್ಣು ನಾನು ನನ್ನ ಕೋಣೆಯ ಬಾಗಿಲನ್ನು ತೆರೆದೊಡನೆ ನಿಧಾನವಾಗಿ ತನ್ನ ಪರಿಮಳವನ್ನು ನನ್ನ ಇಡೀ ಕೋಣೆಯ ತುಂಬ ಪರಿಮಳದೊಂದಿಗೆ ಆಕ್ರಮಿಸಿ ಬಿಟ್ಟಿತ್ತೋ …ಅದೇ ರೀತಿ ಎಲ್ಲೋ ಚೈನಾದಲ್ಲಿ ಹುಟ್ಟಿದ ಆ ಕೋರೋಣ ಕಾಯಿಲೆ ಇಲ್ಲಿ ಈ ಮೂಲೆಯ ಉಡುಪಿಯ ತನಕ ಬರಬೇಕಾದರೆ ಎಷ್ಟು ವಿಚಿತ್ರ . ಆದರೆ ನಿನ್ನೆ ಉಡುಪಿಯಲ್ಲಿ ಲಾಕ್ ಡಾನ್ ಅವಧಿಯನ್ನು ಮೊಟಕುಗೊಳಿಸಿ ಸಮಯ ನಿಗದಿ ಪಡಿಸಿದ ನಂತರ ಜನರ ಓಡಾಟವನ್ನು ನೋಡುವಾಗ ಹೊಟ್ಟೆಯಲ್ಲೆಲ್ಲಾ ಒಂದು ರೀತಿಯ ನಡುಕ ಶುರುವಾಗುತ್ತಾ ಇದೆ. ಯಾರ ಯಾರಲ್ಲಿ ಇದರ ಸೋಂಕಿದೆಯೋ.. ಯಾರನ್ನು ನೋಡಿದರೂ ಒಂದು ರೀತಿ ಅನುಮಾನದಿಂದಲೇ ನೋಡುವಂತಾಗಿದೆ ..ಇದರ ಬದಲು ಈ ಕೋರೋಣ ಎನ್ನುವ ರೋಗದೊಂದಿಗೆ ಅದರದ್ದೇ ಆದ ಒಂದು ವಿಶೇಷ ದುರ್ವಾಸನೆಯೋ ಸುವಾಸನೆಯೋ ಇದ್ದಿದ್ದರೆ ಎಷ್ಟು ದೂರದಿಂದಲೂ ಓಹ್ ಇವರು ಸೋಂಕಿತರು ಎಂದು ಗುರುತಿಸುವಂತಾಗಿದ್ದರೆ ಎಷ್ಟು ಒಳ್ಳೆಯದಿತ್ತು. ಓಡಾಡುವಾಗ ಆ ವಿಶೇಷ ಘಾಟು ಬಂದ ಕೂಡಲೇ ತಕ್ಷಣವೇ ನಾವು ಜಾಗೃತರಾಗ ಬಹುದಿತ್ತು.
ದೇವರೇ!! ಇಷ್ಟೆಲ್ಲಾ ಪ್ರಪಂಚದಲ್ಲೆಲ್ಲ ಹರಡುತ್ತಿರುವ ಈ ಕೊರೋನಾಗೆ ತಕ್ಷಣ ಗುರುತಿಸಬಹುದಾದದಂತಹ ಒಂದು ಕಟು ವಾಸನೆಯನ್ನಾಗಲೀ ಸುಮಧುರ ಪರಿಮಳವನ್ನಾಗಲೀ ಕೊಡಬಹುದಿತ್ತಲ್ಲ.. ಎಂದು ನನ್ನ ಮನಸ್ಸು ಪದೇಪದೇ ಹೇಳುತ್ತಾ ಇದೆ
************