ಕಥಾಯಾನ

 ಒಂದು ಹನಿ ನೀರಿನ ಕಥೆ

ಜ್ಯೋತಿ ಬಾಳಿಗಾ

ಸದಾಶಿವ ರಾಯರಿಗೆ ಆರೋಗ್ಯದಲ್ಲಿ ತೊಂದರೆ ಆಗಿ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಹಳ್ಳಿಯಿಂದ ನಿನ್ನ ಮಾವನ ಪೋನು ಬಂದಿತ್ತು ಸಚಿನ್. ರಾಯರು ಹೇಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ ಅಂದರೆ ಅಷ್ಟು ದೂರ ಪ್ರಯಾಣ ನನ್ನಿಂದ ಸಾಧ್ಯವಿಲ್ಲ ಮಗನೇ….ನಿನ್ನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ್ದಾರೆ ರಾಯರು. ನೀನಾದರೂ ಅವರ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಅಪ್ಪಾಜಿ ಹೇಳಿದಾಗ,ಆಸ್ಪತ್ರೆ ಎಂದರೆ ಮಾರು ದೂರ ಓಡುವ ನನಗೆ ಏನು ಮಾಡುವುದೆಂದು ತಿಳಿಯದೇ ಹುಂಗುಟ್ಟಿದೆ. ಊರಿಗೆ ಹೋಗದೇ ಕೆಲವಾರು ವರ್ಷಗಳೇ ಕಳೆದಿವೆ. ಸದಾಶಿವರಾಯರ ಜೊತೆಗೆ ಹಳೆಯ ಸ್ನೇಹಿತರನ್ನು ಭೇಟಿಮಾಡಿದ ಹಾಗೆ ಆಗುವುದು ಎಂದು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ.

ರೋಗಿಯನ್ನು ಬರಿಗೈಯಲ್ಲಿ ನೋಡಲು ಹೋಗಲಾಗುವುದೇ ಎಂದು , ಸ್ವಲ್ಪ ಮುಸುಂಬಿ, ಕಿತ್ತಳೆ ಹಣ್ಣುಗಳನ್ನು ತೆಗೆದುಕೊಂಡು ಮಂಗಳೂರಿನ ಪ್ರಸಿದ್ಧ ಎ.ಜೆ ಆಸ್ಪತ್ರೆಯ ಮೆಟ್ಟಿಲು ಹತ್ತಿದೆ. ಸದಾಶಿವ ರಾಯರು ಯಾವ ವಾರ್ಡನಲ್ಲಿದ್ದಾರೆ ಎಂದು ರಿಷೆಪ್ಶ್ ನ್ ಕೌಂಟರ್ ಬಳಿ ವಿಚಾರಿಸಿ ಅವರ ಕೋಣೆಯ ಬಳಿ ಹೋದಾಗ ಒಳಗಿನಿಂದ ಅಳುವ ಸ್ವರ ಕೇಳಿಸುತ್ತಿತ್ತು. ಅಯ್ಯೋ,ನಾನು ಬಂದ ಹೊತ್ತು ಚೆನ್ನಾಗಿಲ್ಲ !, ಸದಾಶಿವ ರಾಯರು ನಮ್ಮನೆಲ್ಲ ಬಿಟ್ಟು ಹೋದರು ಕಾಣಬೇಕು ಅದಕ್ಕೆ ಈ ತರಹ ಅಳುತ್ತಿದ್ದಾರೆ , ಎಂದು ಸುಮ್ಮನೆ ಕೋಣೆಯ ಹೊರಗೆ ನಿಂತು ಅವರ ಮನೆಯವರ ಮಾತು ಕೇಳಿಸಿಕೊಳ್ಳುತ್ತಿದ್ದೆ. ನೋಡಿದರೆ; ರಾಯರ ಸ್ವರ ಕೇಳಿಸುತ್ತಿದೆ, ಒಂದು ಚಮಚದಷ್ಟು ಆದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ ರಾಯರು.ಅನಾಹುತ ಏನೂ ಸಂಭವಿಸಿಲ್ಲ ಎಂದು ಧೈರ್ಯದಿಂದ ಕೋಣೆಯ ಒಳಗೆ ಹೋದೆ. ನನ್ನನ್ನು ಕಂಡೊಡನೆ ರಾಯರು ಪರಿಚಯದ ನಗು ಬೀರಿದರು.


ಸದಾಶಿವರಾಯರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು. ಆಸ್ತಿ ವಿಚಾರಕ್ಕೆ ಗಲಾಟೆಮಾಡಿ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನೂ ದೂರ ಮಾಡಿ ಬದುಕನ್ನು ಕಟ್ಟಿಕೊಂಡು ,ಕೈಲಾದಷ್ಟು ಸಹಾಯ ಮಾಡಿ ಜನರ ಮನಸ್ಸನ್ನು ಗೆದ್ದವರು.ವ್ಯಾಪಾರದಲ್ಲಿ ಸೋಲು‌ ಗೆಲುವು ಕಂಡರೂ ಮನೆ ಬಾಗಿಲಿಗೆ ಬಂದವರಿಗೆ ಬರೀ ಹೊಟ್ಟೆಯಲ್ಲಿ ಕಳುಹಿಸದೇ ಪಾನಕ ಇಲ್ಲವೇ ಊಟ ಮಾಡಿಯೇ ಬಿಳ್ಗೊಡುತ್ತಿದ್ದಂತಹ ವ್ಯಕ್ತಿತ್ವ ಅವರದ್ದು.

ಆರು ಅಡಿ ಎತ್ತರದ ದಷ್ಟಪುಷ್ಟ ಶರೀರದ ರಾಯರು ಇಂದು ಆರು ಅಡಿ ಉದ್ದದ ಕೋಲನ್ನು ನೆನಪಿಸುವಷ್ಟು ತೆಳ್ಳಗಾಗಿದ್ದಾರೆ. ಲಿವರ್ ಹಾಗೂ ಮೂತ್ರಪಿಂಡ ಸಂಪೂರ್ಣವಾಗಿ ಹಾಳಾಗಿರುವುದರಿಂದ ಜೀವರಕ್ಷಕ ಅಳವಡಿಸಿದ್ದಾರೆ. ಗಂಜಿಯಂತಹ ದ್ರವ ಪದಾರ್ಥಗಳನ್ನು ಪೈಪಿನ ಮೂಲಕ ತಿನ್ನಿಸುವಂತಹ ವ್ಯವಸ್ಥೆ…..ಅಬ್ಬಾ! ಅವರ ಶೋಚನೀಯ ಸ್ಥಿತಿಯನ್ನು ಕಂಡು ನನ್ನ ಕಣ್ಣಿಂದಲೂ ಕೆಲವೊಂದು ಬಿಂದುಗಳು ಜಾರಿದವು


ನನ್ನನ್ನು ಕಂಡ ರಾಯರು ಅತೀ ಕ್ಷೀಣ ಸ್ವರದಲ್ಲಿ ನೀನಾದರೂ ಹೇಳೋ ಸಚಿನ್, ಒಂದು ಚಮಚದಷ್ಟು ನೀರು ಕೊಡಲು ಎಂದಾಗ ,ಈಗ ನೀರು ಕುಡಿಸಬಾರದೆಂದು ಡಾಕ್ಟರ್ ಹೇಳಿದ್ದಾರಲ್ಲ, ಎಂದು ಅವರ ಶ್ರೀಮತಿಯವರು ಸಮಾಧಾನ ಪಡಿಸುತ್ತಿದ್ದರು. ತಂದೆಯ ಕೊನೆಗಾಲದಲ್ಲಿ ಯಾಕೆ ಬಾಯಿಕಟ್ಟಬೇಕೆಂದು ರಾಯರ ಮಗ ತಂದೆಯ ಆಸೆಯಂತೆ ,ಒಂದು ಗ್ಲಾಸ್ ನಲ್ಲಿ ನೀರು ತುಂಬಿಸಿ ಚಮಚದಿಂದ ಕುಡಿಸುತ್ತಿದ್ದರು. ಕಾಕತಾಳೀಯವೊ ಎಂಬಂತೆ ರಾಯರು ಮಗನ ಕೈಯಲ್ಲಿಯೇ ಇಹಲೋಕ ತ್ಯಜಿಸಿದರು.ವಿಷಯ ತಿಳಿಯುತ್ತಿದಂತೆ ಸಂಬಂಧಿಕರೆಲ್ಲಾ ಸೇರಿದರು.ಅಲ್ಲಿದ್ದು ಏನೂ ಮಾಡಬೇಕೆಂದು ತೋಚದೆ ಮನೆಯವರಿಗೆ ಸಮಾಧಾನ ಹೇಳಿ ಹೊರಬಂದೆ.

ಕೋಣೆಯಿಂದ ಹೊರ ಬಂದಾಗ ರಾಯರು ಒಂದು ಚಮಚದಷ್ಟು ನೀರಿಗಾಗಿ ಹಂಬಲಿಸುತ್ತಿದ್ದದು ಕಣ್ಣಮುಂದೆ ಕಾಣಿಸುತ್ತಿತ್ತು. ರಾಯರ ಸ್ಥಿತಿಯನ್ನು ನೋಡಿದ ನನಗೆ ಆಸ್ತಿ ಪಾಸ್ತಿ ಅಂತ ಎಷ್ಟೇ ಕೂಡಿಟ್ಟರೂ, ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ,ಕೊನೆಯ ಪ್ರಯಾಣದಲ್ಲಿ ಏನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಅರಿವಾಗಿ ನಿಧಾನವಾಗಿ ಆಸ್ಪತ್ರೆಯ ಮೆಟ್ಟಿಲುಗಳನ್ನು ಇಳಿಯುತ್ತಾ ಮನೆಯ ದಾರಿ ಹಿಡಿದೆ…..

***********

Leave a Reply

Back To Top