ಕಾವ್ಯಯಾನ

ಅಂತಃಶುದ್ಧಿಯ ಸಮಯ…!!

Earthen lamps in Amritsar - A 9-min blackout, diyas, flashlights ...

ಅರ್ಚನಾ ಹೆಚ್

ಜಾತಿ ಧರ್ಮಗಳ ಸುಳಿಯಲರಳಿದ
ಕುಸುಮಗಳಿಂದು‌ ಶಿವಪೂಜೆಗೊದಗದೆ
ಬರಿದೆ ಬಾಡಿದ ಬೆರಗು..!!
ಹೆತ್ತ ಮಡಿಲಲಿ ಮತ್ತೆ ಕೂಸುಗಳು..!
ಬದುಕಿದರೂ ಸತ್ತರೂ ಅವಳೊಡಲೇ ಗಮ್ಯ.. ಮಣ್ಣಾಗಬಾರದವುದೆಂಬುದೊಂದೇ ತಾಯಿ ಹರಕೆ..!!

ನಾನು ನನ್ನಂದೆಂಬ ತುಂಬು ಗರ್ವದಲಿದ್ದೆ..!!??
ಮತ್ತೆ ಮೇಲಿಹನಾಗ್ರಹ..!
ಕಣ್ಣೆವೆಯಿಕ್ಕದೆ ದಿಟ್ಟಿಸಿ ನೋಡು..!
ಸ್ವಾರ್ಥ ದುರಾಗ್ರಹದ ಪೀಡೆಯೊಳಾಡಿದ
ಮರುಳ ಮಾನವರಿಗಿದೇಟು!
ರಣತಂತ್ರ!! ವಿಕೃತ ಮನಸ್ಥಿತಿಗಳಾಟ!
ವಿಶ್ವವ್ಯಾಪಿ ಬೀಸಿ ಚಾಟಿಯೇಟು..!!
ಧನವೋ! ಋಣವೋ!??
ಶಕ್ತಿಯಾಟದಲಿ ಸತ್ತವರ ಲೆಕ್ಕಗಳು
ಸರ್ವವ್ಯಾಪಿ! ಮೃತ್ಯು ಕಡುಕೋಪಿ..!!

ಮಾತೃಭೂಮಿಯ ಸೊಗಡು ಭಕ್ತಿ
ಮರೆತವಗೆ ಜಯಘೋಷವಪರಿಮಿತವಿದ್ದ ಕಾಲ…!
ಹೆತ್ತವರ ಮರೆತವರು ಗೂಡ ಸೇರಿದರು
ಹಾರಿದ ಹಕ್ಕಿಗಳ ರೆಕ್ಕೆ ಮುರಿದು..!
ಹಾರಲಾಗದೇ ಛೀಮಾರಿಯಲಿ ಮುಗಿದು..!

ಮನೆಯೊಳಗೆ ಬೆಚ್ಚಗಿನ ನಾಲ್ಕು ಗೋಡೆಗಳೊಳಗೆ
ಮರೆತ ಮಂತ್ರದ ಘೋಷ ಉದ್ಘೋಷ..!!
ಬದುಕಲು ಹೊರನಡೆದು ದುಡಿಯುವಂತಿಲ್ಲ..
ಕೂತಲ್ಲಿ ತಳಹಿಡಿದು ಸೀಯಬೇಕು!!
ಸೊರಗಿದ ಸೊಡರು ಗಲಬರೆಸಿ ತೊಳೆದು
ಮಡಿಯಲಿ ಕರ್ತನೆಡೆ ಮನಮಾಡಿ ಕೂಡಬೇಕು..!

ಧರ್ಮದ ಹಂಗಿರದೆ, ಮೇಲು ಕೀಳೆನ್ನದೆ
ಉರಿವ ಜ್ಯೋತಿಯು ಒಂದೇ ಲೋಕನೀತಿ..!
ಮೂಡಣದ ನೇಸರನ ಅಸ್ತಂಗತಕೂ ಮುನ್ನ
ಮುಚ್ಚಿದ ರೆಪ್ಪೆಗಳು ತೆರೆದುಬಿಡಲಿ..!
ನ್ಯಾಯನೀತಿಯು ಉಳಿದು
ಈರ್ಷೆ ದುರ್ಬುದ್ಧಿ ಅಳಿದು
ಅಂತಃಶುದ್ಧಿಯ ಸಮಯ‌‌
ಸದುಪಯೋಗವಾಗಿಬಿಡಲಿ…!!

***********************

One thought on “ಕಾವ್ಯಯಾನ

  1. ತುಂಬ ಚೆನ್ನಾಗಿದೆ ಮೇಡಂ

Leave a Reply

Back To Top