ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ

ಬೆಳಕಿನ ಸಂತ

grayscale photo of buddha statue

ಶಿವಶಂಕರ ಸೀಗೆಹಟ್ಟಿ.

ಊರೂರು ಸುತ್ತಿದ ಬಿಕ್ಕುಪಾತ್ರೆ
ನನ್ನ ಮುಂದೆಯೇ
ಬಂದು ನಿಂತಿದೆ
ಪಾತ್ರೆಗೆ ಬೀಳುವ ಎಲ್ಲವೂ
ನನ್ನೊಳಗೆ ಅಕ್ಷಯವಾಗುತ್ತಿವೆ
ಅಚ್ಚರಿಯೆನಿಸಿತು
ನಾನು ಕತ್ತಲನು ಸುರಿದಾಗ
ಬೆಳದಿಂಗಳು
ನನ್ನ ಕಣ್ಣೆದುರಿಗಿತ್ತು

ಊರೂರು ತಿರುಗಿದ ಬೆಳಕು ಮನವೆಂಬ ಗುಡಿಸಲಿಗೂ
ಬಂದು ಬೆಳಕು ಕೊಟ್ಟಿದೆ
ಬೆಳಕು ಪಡೆಯುವ ತವಕದ ಬಯಕೆಯಲ್ಲಿ
ಗಾಳಿ ತಾಗಬಹುದೆಂದು
ಬದುಕ ಅಡ್ಡಗಟ್ಟಿದ್ದೇನೆ

ಹೆಗಲ ಜೋಳಿಗೆಯಲ್ಲಿ
ಬಯಲೆಂಬ ಸಿರಿಯು ಬದುಕುಗಟ್ಟಿದೆ
ಬಾಚಿ ತಬ್ಬುವ ತವಕದಲ್ಲಿ
ಬೆನ್ನ ಹಿಂದೆಯೇ
ಸಾವರಿಸಿ ನಡೆಯುತಿದ್ದೇನೆ
ಆಸೆ ಅತಿಯಾಗಬಾರದೆಂಬ ಬುದ್ದಗುರುವಿನ
ಮಾತುಗಳನು ನೆನೆದು
ಅರಿವಿನ ಮರದ ಬಳಿ
ದಾರಿ ಕಾಯುತ್ತಿದ್ದೇನೆ.

ಮನದ ಕೊಳೆ ತೊಳೆದ
ಅರಿವಿನ ಸಂತನಿಗೆ
ಕಾರುಣ್ಯದ ಬತ್ತಿಯನು
ಜೀವರಸವೆಂಬ ನೂಲಿನಲದ್ದಿ
ಬೆಳಕೆಂಬ ಬೆಳಕಿಗೆ
ಪೂಜಿತನಾಗಿದ್ದೇನೆ

ಆತನೊ
ಜಂಗಮಕೆ ನಡೆನಡೆದು
ಜಗದ ಗುರುವೆನಿಸಿದನು
ನಾನು
ಬಯಲಲ್ಲಿ ಮೈತ್ರಿಯನಂಚಿ
ಆನಂದಿತನಾದೆನು.

******

Leave a Reply

Back To Top