ಬೆಳಕಿಗೊಂದು ಮುನ್ನುಡಿ ಅರಸುತ.
ಪೂರ್ಣಿಮಾ ಸುರೇಶ್
ವಿಶ್ವವೆಲ್ಲವನು ಕಪ್ಪು ಕವಿದಾವರಿಸಿದ ವೇಳೆ ಸೃಷ್ಟಿಯಖಿಲದ ಜೀವಜಾತಗಳಿಗೆಲ್ಲ.
ನಿದ್ರೆಯ ಮಾಯೆ ಮುಸುಕಿರುವ ವೇಳೆ
ಸೊಬಗಿನೈಸಿರಿಯೆ ಸಾಕಾರಗೊಂಡಂತೆ
ಪಕ್ಕದಲಿ ಪವಡಿಸಿದ ಸುಕೋಮಲೆಯ.
ಘನವಾದ ಕಟ್ಟಕ್ಕರೆಯ ಚೆಂಬೆಳಕ ಲೆಕ್ಕಿಸದೆ
ಹೊರಟೇಬಿಟ್ಟ ಪುಣ್ಯಾತ್ಮ.
ಹೊಸ ಬೆಳಕಿನ ಮೂರ್ತತೆಯ ಹುಡುಕಾಟದಲ್ಲಿ
ಬದುಕಿನರ್ಥವ ಬಗೆವ ಬೆದಕು ನೋಟದಲ್ಲಿ
ನನ್ನೊಳಗೂ ಆಗಾಗ್ಗೆ ತುಂಬಿಕೊಳ್ಳುವ.
ಕಪ್ಪಿಗೆ ಕಪ್ಪ ಸಲ್ಲಿಸುತ್ತಲೇ ಬಂದಿರುವೆ.
ಆದರೀಗ ಕಪ್ಪಿನೆದೆಯನ್ನಿರಿದು
ಆಚೆ ಹೆಜ್ಜೆ ಹಾಕಿರುವೆ.
ಅವ್ಯಕ್ತದೆಡೆಗೆ ಅವನಂತೆ ಒಬ್ಬಂಟಿ-
ಕೆಮ್ಮಣ್ಣ ಮಾದಕ ಕಂಪನ್ನು ಮೂಸಿ
ಮುಟ್ಟಿರುವೆನವನ ಸಂಪ್ರೀತಿ ದಡವ
ಅವನ ಕಣ್ಣುಗಳ ಒಳಪುಟಗಳಲ್ಲಿ
ಅಚ್ಚಾದ ನಲ್ಗವಿತೆಯನ್ನು ಕದ್ದು
ನನ್ನೆದೆಯ ತಂತಿಯಿಂದದನು ಶ್ರುತಿಗೊಳಿಸಿ
ದನಿ ನೀಡಿ ನಯವಾಗಿ ಹರ್ಷಿಸಿರುವೆ
ತುಂತುರು ತುಂತುರಾಗಿ ಜಿನುಗುವ ನಾದದ ಬೆಳಕನ್ನು
ಬೊಗಸೆಯಲ್ಲಿ ಹಿಡಿದಿಡುವ ಸಾಹಸದ ಆಟ ನನಗೆ;
ಹಂಬಲದ ಅರಗಿಣಿಯ ರಮಣೀಯ ರೆಕ್ಕೆಗಳ
ವಿವಿಧ ವರ್ಣಗಳ ಚೆಂದನೆಯ ಗರಿಗಳಿಂದ ಅಲಂಕರಿಸಿ,
ಸೊಬಗ ಸವಿಯುತ ನನ್ನ ಮೈಯನು ಮರೆತು
ಮಹದಾನಂದಕ್ಕೆ ಚೊಕ್ಕ ಮುನ್ನುಡಿ ಬರೆವಾಸೆ ನನಗೆ.
ಕೊನೆಗೆ, ನಟ್ಟಿರುಳಿನಲ್ಲಿ ಏಕಾಏಕಿ
ಅರಮನೆ ತೊರೆದವನ.
ಶಾಂತ ವದನದ ಕಾಂತಿಯುಕ್ತ ತೇಜಸ್ಸಿನಲಿ
ಮಿಂದೆದ್ದು, ಶುಚಿಗೊಳುವ.
ಅದಮ್ಯ ಸಾರ್ಥಕ್ಯದಾಸೆ ನನಗೆ.
*********