ವಿಶ್ವವೇ….ಶರಣು..
ಶಿವಲೀಲಾ ಹುಣಸಗಿ
ಯಾವ ಅಮೃತ ಗಳಿಗೆಯೋ ನಾ ಕಾಣೇ..
ಅರಿವಿನ ಕ್ಷೀತಿಜದೊಳು…
ಶಶಿಯುದಯಿಸಿದಾ ಕ್ಷಣದೊಳು
ಹೊಸದೊಂದು ಹುರುಪು,ನವೋಲ್ಲಾಸದ ಸುಖ
ತಾರೆಯದಿಪತಿಗೆ ಸವಾಲಾಗುವ ಕ್ಷಣಗಳು..
ಬಯಸಿದ್ದೊಂದು…ಆಗುವುದೊಂದು..
ಸುಖಾತೀತ ಭಾವಗಳೆಲ್ಲ..ಮರಿಚೀಕೆಯಾಗಿಂದು
ಮುಳ್ಳಿನ ಸೊಲ್ಲುಗಳಿಗೊಂದಂದು
ಎಕ್ಕೆಹಾಲನೇರೆವಂತೆ…ಸೂಸಿದ ಹನಿಗಳು..
ಯ್ಯಾರು ಕಾಡಲಿಲ್ಲ,.ಬೇಡಲಿಲ್ಲ ನಿನ್ನೆದೆಗೆ ಇರಿಯಲಿಲ್ಲ
ಆದರೂ ಹೃದಯ ಕೇಳಲಿಲ್ಲ..ಬಣ್ಣಗಳೆಲ್ಲ ಮಾಸಿದಂತೆ..
ಬರಸಿಡಿಲು ಬಡಿದಂತೆ..ಏಕಾಏಕೀ..ಚಿತ್ತ ಹೊರಟಂತೆ..
ಕಂಗಳಿಗೆ ಬರೀ….ಮಿಂಚುಗಳು ಆರ್ಭಟದಂತೆ..
ಯ್ಯಾರು ಕರೆದರೋ…? ಯ್ಯಾರು ಬಂದರೋ.?
ನಡುರಾತ್ರಿ ಶ್ವೇತಾಶ್ವಗಳ ರಥವೇರಿ ಮೌನ ನಡಿಗೆಯ ಬೀರಿ
ಕಾಮದಮಲು ಕರಗಿತ?…ಕೂಸಿನ ಹಂಬಲ ತೀರಿತೇ.?
ಎದೆಗಂಟಿದ ಬೆವರಹನಿಗಳು. ಮಾಯವಾಯಿತೇ..
ರೋಧಿಸಲಾರಿಲ್ಲದಾ ಗಳಿಗೆ….ಚಿರನಿದ್ರೆ..ಆವರಿಸಿದೆ..!
ಮೋಹಬಂಧನವ ಕಳಚಿದಾಗ ಮೌನ ಮಡುಗಟ್ಟಿದೆ.
ಜ್ಞಾನ ದಾಹದ ತೀರಕೆ..ಕರೆಬಂದಿದೆಯೆಂಬಂತೆ..
ಹೋರಟಿತೊಂದು ಆತ್ಮದ ಮೆರವಣಿಗೆ……
ಅಷ್ಟಾಂಗಿಮಾರ್ಗದ ನೆರಳಿನೊಳು..
ಕಷ್ಟಕಾರ್ಪಣ್ಯದ ಹೊಂಗಿರಣದೊಳು..
ಬೋಧಿವೃಕ್ಷದ ದಿವ್ಯಾನುಭದೊಳು
ಲೋಕವ ಬೆಳಗಿಸುವ ಸಂಕಲ್ಪದೊಳು..
ಪ್ರಜ್ಞೆಯ ವಾಸ್ತವದಲಿ ಮನಸರಳಿ
ಶೀಲ ಚಾರಿತ್ರ್ಯದ ಮೇರು ಪರ್ವತವಾಗಿ..
ಸಮಾಧಾನದ ಸಮಾಧಿ ಸ್ಥಿತಿಯೋಳು
ಆಸೆಯೇ ದುಃಖಕ್ಕೆ ಮೂಲವೆಂಬಾಮೃತವ ಸಾರಿ…
ಹುಣ್ಣಿಮೆಯ ಚಂದಿರನ ನಿರ್ಲಿಪ್ತ ಭಾವದೊಳು
ಜ್ಞಾನ ಜ್ಯೋತಿಯಾಗಿ ಮುಕ್ತಿ ಮಾರ್ಗದ ಬೆಳಕಿನೊಳು
ಭವ ಸಂಕಟವ ಕರಗಿಸುವ ಸರಳಮಾಂತ್ರಿಕನೊಳು
ವಿಶ್ವವೇ …ಶರಣಾಗಿಹುದು ಧ್ಯಾನದೊಳು…..
******