ಯಶೋಧರೆಯ ಸ್ವಗತ
ಶೋಭಾ ನಾಯ್ಕ
ಬಾನ ಚೆಂದಿರನನ್ನೇ ಇಳಿಸಿಬಿಟ್ಟೆ
ನಿನ್ನ ಪ್ರೀತಿಗೆ ಎಂದು
ಕಂದನ ಕೈಗಿತ್ತವ ನೀನು
ಜೊತೆ ಇರುವೆನೆಂದು
ಜೊತೆ ಹೆಜ್ಜೆ ಇಟ್ಟು
ನಕ್ಷತ್ರಗಳ ಜಾತ್ರೆಯನ್ನೆಲ್ಲ
ಸುತ್ತಿಸಿ ಬಂದವ ನೀನು
ಬದುಕ ಸಿಹಿ ಕಡಲಿನಲ್ಲಿ
ಈಜಾಡಿಸಿ ದಡ ಸೇರುವುದರೊಳಗೆ
ಹೊರಟು ಹೋದೆಯಲ್ಲಾ ?
ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ
ರಥಬೀದಿಯ ಗುಟ್ಟು ಗೊತ್ತಿರದ ನೆಲ,ಗೋಡೆ ಕಿಡಕಿಗಳೆಲ್ಲ
ನನ್ನನ್ನೇ ಜರಿದಂತೆ ಭಾಸವಾಗುತ್ತದೆ!
ಒಣಗಿ ಹಾಕಿರುವೆ ಕಣ್ಣ ನೀರಲ್ಲೇ….ನೆಂದ ಚಾದರವ ಅದರದ್ದೂ….ದಿವ್ಯಮೌನ
ಯಾರ ಬಳಿ ಹೇಳಲಿ
ನನ್ನೊಡಲ ನೋವ?
ಮಗನೀಗ ಕಲಿತು ಕಥೆ ಕೇಳುತ್ತಿದ್ದಾನೆ!
ಯಾರ ಕಥೆ ಹೇಳಲಿ
ರಾತ್ರೋರಾತ್ರಿ ಎದ್ದುಹೋದ ನಿನ್ನದೋ?
ನಿದ್ದೆಯಿರದ ನನ್ನದೋ?