ಕಾವ್ಯಯಾನ

ನನಗೀಗ ಅಟ್ಟಗಳೆಂದರೆ ಪ್ರೀತಿ

Book Old Isolated Images, Stock Photos & Vectors | Shutterstock

ಶೀಲಾ ಭಂಡಾರ್ಕರ್

ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ..
ಮನೆಯಲ್ಲಿ ಸ್ವಚ್ಛತಾ ಅಭಿಯಾನ.
ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ
ಮದ್ಯಾಹ್ನದ ಊಟ..
ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು,
ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ
ಆರೋಗ್ಯಕ್ಕೆ ಒಳ್ಳೆಯದು.
ಹೂಂಕರಿಸಿದರು..
ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ.

ಅವರು ಹೋದ ಮೇಲೆ…
ನಿಂತು ಒಮ್ಮೆ ಯೋಚಿಸಿದೆ..
ಎಲ್ಲಿಂದ ಶುರು ಮಾಡಲಿ..!
ನಮ್ಮ ಅನುಕೂಲಕ್ಕೆ ಎಂದು
ಮನೆಯ ಮೇಲೆ ಮನೆ ಕಟ್ಟಿಸಿದಾಗ
ಬೇಕು ಬೇಕು ಎಂದು ಕಟ್ಟಿಸಿದ್ದ
ಮುಚ್ಚಿದ್ದ ಬಾಗಿಲಿನ ಹಿಂದಿನ ಎಲ್ಲ
ಅಟ್ಟಗಳೂ ಗಹಗಹಿಸಿ ನಕ್ಕಂತಾಯಿತು..
ಏಳು ವರ್ಷದ ಹಿಂದೆ ಮನೆ ಸೇರಿದಾಗ
ಮೇಲೆ ಏರಿಸಿದ ಯಾವ ವಸ್ತುವನ್ನೂ
ತಿರುಗಿ ನೋಡಿರಲಿಲ್ಲ…
ಒಂದೆರಡು ಸಲ ದಿಢೀರ್ ನೆಂಟರು
ಬರುತ್ತಾರೆಂದಾದಾಗ ಕೈಗೆ
ಸಿಕ್ಕಿದ್ದನ್ನು ಎತ್ತಿ ಅಲ್ಲಿಯೇ
ತುರುಕಿದ್ದು ಬಿಟ್ಟರೆ.. ಮುಚ್ಚಿದ್ದು
ತೆರೆದಿರಲೇ ಇಲ್ಲ.

ನಿಮಗನ್ನಿಸಬಹುದು.. ಮತ್ಯಾಕೆ
ಇವತ್ತು ಇಷ್ಟು ಆಸಕ್ತಿ..!?
ಏನಿಲ್ಲ..
ನನ್ನದೊಂದು ಪುಸ್ತಕ
ಕಾಣಿಸುತ್ತಿಲ್ಲ..
ಯಾರಿಗೆ ಕೊಟ್ಟು ಮರೆತು
ಕುಳಿತಿದ್ದೇನೊ ನೆನಪಾಗುತ್ತಿಲ್ಲ…
ಹುಡುಕಿ ಹುಡುಕಿ.. ಇನ್ನು ಉಳಿದಿರುವುದು
ನಾಲ್ಕು ಕೋಣೆಗಳ ನಾಲ್ಕು ಅಟ್ಟಗಳು.

ನನ್ನ ಪುಸ್ತಕವೆಂದರೆ..
ಅದು ನಮ್ಮ ರೂಮಿನ
ಅಟ್ಟದ ಮೇಲೆಯೇ ಇರುವ ಸಂಭವ ಹೆಚ್ಚು..
ಹೋಗಿ ..ಮಡಚುವ ಏಣಿ ತಂದಿಟ್ಟೆ.
ಒಂದು ಕಡೆಯ ಬಾಗಿಲು ತೆರೆದಾಕ್ಷಣ
ದೊಪ್ಪೆಂದು ತಲೆಯ ಮೇಲೊಂದು
ಮೂಟೆ ಬಿತ್ತು..
ಹಾಗೇ… ನೆಲದ ಮೇಲೆ ಬಿದ್ದಿರಲಿ.
ಆಮೇಲೆ ನೋಡಿದರಾಯಿತು …
ಉಳಿದ ಸಾಮಾನುಗಳ ಮೇಲೆ
ದೃಷ್ಟಿ ಹಾಯಿಸಿದರೆ.. ಬರಿಯ
ಹಾಸಿಗೆ ದಿಂಬುಗಳು..

ಅದರಲ್ಲೊಂದು
ಮದುವೆಯಾದಾಗ
ತವರಿನಿಂದ ಕೊಟ್ಟ ಹಾಸಿಗೆ..
ನೆನಪಿಗಿರಲಿ ಎಂದು ಇಟ್ಟು
ಮರೆತು ಹೋಗಿ ವರುಷಗಳಾಗಿವೆ ಏಳು.
ತವರು ಮನೆಯ ನೆನಪಿನ
ಅಕ್ಕರೆಯಿಂದ
ಕೈಯಾಡಿಸಿದೆ ಮೆತ್ತಗೆ.
ಹಳೆಯ ಬಟ್ಟೆ
ಮುಚ್ಚಿಟ್ಟು ಕುಂಬಾಗಿ
ಬಂತೊಂದು ಚೂರು ಕೈಗೆ.
ಮನಸ್ಸು ಹೋಯ್ತು ಇಪ್ಪತ್ನಾಲ್ಕು ವರ್ಷಗಳ ಹಿಂದೆ..
ಇನ್ನಿವತ್ತು ಇಲ್ಲ ಹುಡುಕುವ
ಕೆಲಸ ಆಗುವ ಸೂಚನೆ
ಎಂದು ಅಟ್ಟದ ಬಾಗಿಲು ಮುಚ್ಚಿ
ಏಣಿಯಿಂದ ಇಳಿದೆ ಮೆಲ್ಲನೆ.

ಕೆಳಗೆ ಬಿದ್ದ ಮೂಟೆಯನ್ನು ಬಿಚ್ಚಿ ನೋಡಿದರೆ..
ಯಪ್ಪಾ…….. ನಾಲ್ಕು ವರ್ಷದಿಂದ
ಹುಡುಕಿ ಆಸೆ ಬಿಟ್ಟು ಬಿಟ್ಟಿದ್ದ
ನನ್ನದೊಂದು ಇನ್ನೂ ಉಡದ ಸೀರೆ…
ನಾಡಿದ್ದು ಸತ್ಯನಾರಾಯಣ ಪೂಜೆಗೆ
ಹೋಗುವಾಗ ಉಡಲೊಂದು
ಹೊಸ ಸೀರೆಯಾಯ್ತು..
ಒಂದು ಚಿಂತೆ ಕಳೆಯಿತು..

ಒಂದೊಂದಾಗಿ ಸಿಕ್ಕಿದವು..
ಒಂದರ ಹಿಂದೆ ಒಂದು
ಕಳೆದು ಹೋಗಿತ್ತು ಎಂದುಕೊಂಡಿದ್ದ
ಎಷ್ಟೊಂದು ಅಮೂಲ್ಯ ವಸ್ತುಗಳು

ಜತೆಗೆ ಅದರ ಜತೆಗಿನ ನೆನಪುಗಳು…
ಅಡಿಯಲ್ಲಿತ್ತು ನನ್ನ ಆ ಪುಸ್ತಕ..
ದಿನ ಭವಿಷ್ಯದ ಅನಿರೀಕ್ಷಿತ ಲಾಭ
ಅಂದರೆ ಇದೇ ಏನೊ
ಅಂದ ಹಾಗಾಯಿತು ನನಗೀಗ.

ಮನೆಗಳಲ್ಲಿ ಸರಂಜಾಮುಗಳು
ಜಾಸ್ತಿಯಾಗಲು ಕಾರಣ..
ಆಲಸ್ಯವಲ್ಲ…
ಅದರ ಜತೆಗೆ ಜೋಡಿಸಲ್ಪಟ್ಟಿರುವ
ಅನೇಕ ಸವಿ ನೆನಪುಗಳು,
ನವಿರಾದ ಭಾವನೆಗಳು.
ನಮ್ಮನ್ನು ಆ ವಸ್ತುವಿನ ಆ ಕಾಲಕ್ಕೆ
ಕೊಂಡೊಯ್ಯುವ ಕಾಲ ಯಂತ್ರಗಳು.

ಎಸೆಯಲು ಬಿಡದೆ
ನಮ್ಮನ್ನು ಕಟ್ಟಿಹಾಕಿ
ತುಂಬಿಕೊಳ್ಳುತ್ತವೆ ಮನೆ ತುಂಬ.

ಇನ್ನೂ ಇವೆ ಬಾಕಿ..
ಮೂರು ಅಟ್ಟಗಳು ..
ಮುಂದಿನ ಜೀವನಕ್ಕಾದೀತು..
ದಿನ ಕಳೆಯುವ ಸಾಧನ.
ನೆನಪುಗಳ ದಾಸ್ತಾನು.

ನನಗೀಗ ಅಟ್ಟಗಳೆಂದರೆ ಬಲು ಪ್ರೀತಿ.

********

Leave a Reply

Back To Top