ಆ ಕವಿತೆ ಇದಲ್ಲ.
ಪೂರ್ಣಿಮ ಸುರೇಶ್
ಆ ಕವಿತೆ ಇದಲ್ಲ
ನೀನು ಹಕ್ಕಿಯ ಬಗ್ಗೆ,
ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ
ಹೊಸೆಯುವಿಯಲ್ಲ..
ಪ್ರಣಯ ಕಾಡಲಾರದೇ?
ನೇರ ಪ್ರಶ್ನೆ.,.
ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ.
ನಡು
ವಯಸ್ಸಿಗೆ ಅದೆಂತಹ ಪ್ರಣಯ ಎಂದೆ
ನಿನಗೆ ಗೊತ್ತಾ ನಿನ್ನ ನಡು ಚೆಂದ
ಒಮ್ಮೆ ಪುಟ್ಟ ಉನ್ಮಾದ
ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ
ನೋಡು, ನಾಚಿದೆಯಾ..
ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ
ಛೇಡಿಸಿದ:
ಎಲ್ಲೋ ಗರ್ಭದೊಳಗಿನ ನಗೆ
ಕಿವಿಯ ಸುತ್ತ ಕಚಕುಳಿ ಇಟ್ಟಿತು
ಊರು ಉರುಳೀತು ನಿಲ್ಲಿಸೋ ನಗೆ ಗೋಗೆರೆದೆ
ಮುತ್ತಿನ ಸರಪಳಿ ಎಲ್ಲಿಗೆ ತೊಡಿಸಲಿ?
ಮತ್ತೆ ಮತ್ತೆ ನಗು..
ಕರುವಿನ ಕಿವಿಗೆ ಗಾಳಿ ಊದಿದರೆ.,.
ಪೋಲಿ ನಗು
ತಾವರೆಯ ಕೆಂಪಾಗಿಸಿ ಬೊಗಸೆಯಲ್ಲಿ ತುಂಬಿ
ಕವಿತೆ ಎಂದರೇನೇ..
ಜುಂ ಎನಿಸುತ್ತಾನೆ
ಕವಿತೆಯ ಎಸಳು ಎಸಳು ತೆರೆದು
ಘಮ ನೇವರಿಸುತ್ತಾನೆ
ತಾವರೆ ದಂಟು ಬೆನ್ನ ಹುರಿಗೆ ಕಸಿ ಮಾಡುತ್ತಾನೆ
ಮುತ್ತು ಮತ್ತು,..
ತೆರೆದುಕೋ ಕವಿತೆ
ಗುಂಗಿನ ಗುನುಗು
ಬೇಡ, ನನ್ನ ಅವನ ಪ್ರಣಯವನ್ನು ಕವಿತೆಯಲ್ಲಿ ಜಾಲಾಡದಿರಿ
ನಾನು ಆ ಕವಿತೆ ಹೆಣೆಯಲಾರೆ
******
.