ಕಾವ್ಯಯಾನ

ಹಬ್ಬ

ಗೌರಿ.ಚಂದ್ರಕೇಸರಿ

ನಾವು ಸಾಬೀತುಪಡಿಸಿದ್ದೇವೆ.
ಪ್ರಾಣಕ್ಕಿಂತ ದೊಡ್ಡದು
ಆಚರಣೆಗಳೆಂದು.
ನೆತ್ತಿಯ ಮೇಲೆ
ತೂಗುತ್ತಿದ್ದರೂ ಕತ್ತಿ
ಬಾರಿಸುತ್ತಿದ್ದರೂ
ಎಚ್ಚರಿಕೆಯ ಗಂಟೆ
ನಡೆದು ಬಿಡುತ್ತೇವೆ
ಚೀಲ ಹಿಡಿದು
ಸಾವಿನ ಮನೆಯ ಕಡೆಗೆ
ಮುಗಿ ಬೀಳುತ್ತೇವೆ
ಹೂ ಕಾಯಿ ಹಣ್ಣುಗಳಿಗೆ
ತುಂಬಿಕೊಳ್ಳತ್ತೇವೆ
ಭವಿಷ್ಯವನ್ನೆಲ್ಲ ಭೂತವೆಂಬ ಚೀಲಗಳಿಗೆ
ಹೊತ್ತು ನಡೆಯುತ್ತೇವೆ
ತಪ್ಪಿಸಿ ಪೋಲೀಸರ
ಕಣ್ಗಾವಲನ್ನು
ಬಂದು ಸೇರಿ ಮನೆ
ಬೀಗುತ್ತೇವೆ ಚಪ್ಪನ್ನೈವತ್ತಾರು ಕೋಟೆಗಳ ಗೆದ್ದಂತೆ
ತಳಿರು ತೋರಣವಿಲ್ಲದ
ಸಿಹಿಯಡುಗೆ ಮಾಡದ
ನೆರೆಹೊರೆಯವರನ್ನು
ನೋಡಿ ನಗುತ್ತೇವೆ
ಜೀವವಿದ್ದಲ್ಲಿ ಮಾಡೇವು
ನೂರು ಹಬ್ಬ ಹರಿದಿನ
ಅವಿವೇಕಿಗಳು ನಾವು
ಹಬ್ಬ ಮಾಡುವ
ಹವಣಿಕೆಯಲ್ಲಿ
ಆಗದಿರಲಿ ನಮ್ಮದೇ ಹಬ್ಬ
ಆಗ ನಮ್ಮವರೇ ಬಾರದೆ
ದೂರದಿ ನಿಂತು ನೋಡುವರು
ನಮ್ಮ ದಿಬ್ಬಣ
ಹಿಡಿ ಮಣ್ಣೂ ಹಾಕಿಸಿಕೊಳ್ಳದೆ
ಭಾವನೆಗಳೇ ಇಲ್ಲದ
ಯಂತ್ರ ತೋಡಿದ
ಗುಂಡಿಯೊಳಗೆ
ಹೂತು ಹೋಗಬೇಕಾದೀತು
ಅನಾಥ ಶವದಂತೆ
*******

One thought on “ಕಾವ್ಯಯಾನ

Leave a Reply

Back To Top