ನಿತ್ಯೋತ್ಸವದ ಕವಿಗೆ ನಮನ
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ….
ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ.
ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ಕೃಷಿ ಆರಂಭಿಸಿದರು.
ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ.
ರಾಜಕಾರಣಿಗಳನ್ನು ಕುರಿತು ಬರೆದ ಕವಿತೆ ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಗೀತೆಯಾಗಿ ಪ್ರಸಿದ್ಧಿಯಾಗಿ ನಿಸಾರ್ ಅಹಮದ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕವಿತೆ.
“ಕೃಷ್ಣನ ತುಂಟತನವನ್ನು ವರ್ಣಿಸುವ ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ನಮ್ಮ, ಬೆಣ್ಣೆ ಕದ್ದು ಜಾರುತ ಬಿದ್ದು “ಈ ಹಾಡಿಗೆ ಮರುಳಾಗದವರಾರು.
“ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ, ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ “ಎಂದು ಅಸಮಾನತೆ ವಿರುದ್ದ ಬರೆದ, ಕುರಿಗಳು ಸಾರ್ ಎಂದು ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದ ಜೋಗದ ಸಿರಿಯ ಕವಿ ಕೆ ಎಸ್ ನಿಸಾರ್ ಅಹಮದ್ ಈ ನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಕವಿ.
ಕನ್ನಡಾಂಬೆಯ ತೇರು ಎಳೆದಿರುವ, ಎಳೆಯುತ್ತಾ ಇರುವ ನನ್ನ ಅಚ್ಚುಮೆಚ್ಚಿನ ಅನೇಕ ಕವಿಗಳಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕೂಡ ಒಬ್ಬರು.
“ಎಲ್ಲಾ ಮರೆತಿರುವಾಗ ಇಲ್ಲಾ ಸಲ್ಲದ ನೆವವಾ ಹೂಡಿ ಬರದಿರು ಮತ್ತೆ ಹಳೆಯ ನೆನಪೇ “ಈ ಕವಿತೆ ನಾನು ಸದಾ ಗುನುಗುನಿಸುತ್ತಿದ್ದ ಅಚ್ಚುಮೆಚ್ಚಿನ ಭಾವಗೀತೆ ಯಾಗಿತ್ತು.
ಗಾಂಧಿಬಜಾರು ಮತ್ತು ನಿತ್ಯೋತ್ಸವ ನಿಸಾರ್ ಅಹಮದ್ ಅವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟವು. ನಿತ್ಯೋತ್ಸವ ಗೀತೆ ಕನ್ನಡ ನಾಡಿನಲ್ಲಿ ತನ್ನದೆ ಹೊಸ ಸಂಗೀತ ಮತ್ತು ಸಾಹಿತ್ಯ ಲೋಕ ಸೃಷ್ಟಿಗೆ ಕಾರಣವಾಯಿತು.ಅದರಲ್ಲಿದ್ದ ಅಷ್ಟೂ ಹಾಡುಗಳೂ ಜನರಿಗೆ ಅತ್ಯಂತ ಇಷ್ಟವಾದ ಹಾಡುಗಳಾಗಿದ್ದವು.ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿವೆ.ಸುಗಮ ಕ್ಷೇತ್ರದಲ್ಲಿ ಇವತ್ತಿಗೂ ಜನ ಆಸಕ್ತಿ ಮತ್ತು ಇಷ್ಟ ಪಟ್ಟು ಕೇಳುವ ಬಹುಪಾಲು ಗೀತೆಗಳಲ್ಲಿ ನಿಸಾರ್ ಅಹಮದ್ ಅವರ ಕವನಗಳ ಪಾಲು ಬಹುದೊಡ್ಡದು . ಇವರಿಗೂ ಸುಗಮ ಸಂಗೀತ ಕ್ಷೇತ್ರಕ್ಕೂ ಬಿಡಸಲಾರದ ನಂಟು. ನಿಸಾರ್ ಕವನಗಳನ್ನು ಆಧರಿಸಿದ ಅನೇಕ ಆಲ್ಬಂಗಳು ಸದಭಿರುಚಿಯ ಹೊಸ ಕೇಳುಗ ಲೋಕ ಸೃಷ್ಟಿಗೆ ಕಾರಣವಾಯಿತು .
ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇವರ ರಚನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ.
. ನಿತ್ಯೋತ್ಸವ ಕವಿಯೆಂದೇ ಮನೆಮಾತಾಗಿದ್ದ, ನಿಸಾರ್ ಅಹಮದ್ ಅವರು, ಸಾಹಿತ್ಯೋತ್ಸವ ನಿಲ್ಲಿಸಿದರು ಅನ್ನೋ ಸುದ್ದಿ ನಿಜಕ್ಕೂ ಆಘಾತಕಾರಿ ವಿಷಯ.ನಾಡು ನುಡಿಯ ಪ್ರಿಯರಾದ ನಿಸಾರ್ ಅಹಮದ್ ಎಂದರೆ ಎಲ್ಲರಿಗೂಅಚ್ಚುಮೆಚ್ಚು.
ಅದ್ಬುತ ವ್ಯಕ್ತಿತ್ವದ ಅಪರೂಪದ ಕವಿ ಶ್ರೀ ನಿಸಾರ್ ಅಹಮದ್ ರವರು.ಅವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ . ನಿತ್ಯೋತ್ಸವದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ
**********
ಶೈಲಜ ಹಾಸನ