ನಿತ್ಯೋತ್ಸವವಿನ್ನು ನೆನಪು

ನಿಂತು ಹೋದ ನಿತ್ಯೋತ್ಸವ

ಕೆ.ಎಸ್.ನಿಸಾರ್ ಅಹಮದ್

ನಿತ್ಯೋತ್ಸವ ಕವನ’ ನಿಲ್ಲಿಸಿದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್..!

ನಿತ್ಯೋತ್ಸವದ ಕವಿ ಎಂದೇ ಖ್ಯಾತರಾದ ಕನ್ನಡ ಹಿರಿಯ ಕವಿ ಪ್ರೊ. ಕೆ.ಎಸ್‌ ನಿಸಾರ್ ಅಹಮದ್ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು…

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದವರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದವರು…

ನಿಸಾರ್ ಅಹಮದ್ ಅವರಲ್ಲಿ 10ನೇ ವಯಸ್ಸಿನಲ್ಲೇ ಸಾಹಿತ್ಯಾಸಕ್ತಿ ಮೂಡಿತು. ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ 21ಕ್ಕೂ ಹೆಚ್ಚು ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ…

ಅವುಗಳಲ್ಲಿ- ಮನಸು ಗಾಂಧಿ ಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ…

1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘು ಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದು ವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ…

ಕುರಿಗಳು ಸಾರ್‌ ಕುರಿಗಳು, ರಾಜಕೀಯ ವಿಡಂಬನೆ ಕವನವಾಗಿದೆ. ಭಾರತವು ನಮ್ಮ ದೇಶ (ಸರ್‌ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಛಾ ಕವನದ ಕನ್ನಡ ಭಾಷಾಂತರ) ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ…

ಅವರ ಕವನ ಸಂಕಲನಗಳು

ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ (1974), ಆಯ್ದ ಕವಿತೆಗಳು (1974), ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬಹಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು ಇವರ ಕವನ ಸಂಕಲನಗಳಾಗಿವೆ…

ಅವರ ಗದ್ಯ ಸಾಹಿತ್ಯ–

‘ಅಚ್ಚುಮೆಚ್ಚು’, ‘ಇದು ಬರಿ ಬೆಡಗಲ್ಲೊ ಅಣ್ಣ’ ಷೇಕ್ಸ್ ಪಿಯರ್ನ‌ನ ಒಥೆಲ್ಲೊದ ಕನ್ನಡಾನುವಾದ, ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು- ಇವುಗಳು ನಿಸಾರ್ ಅಹಮದ್ ಅವರ ಗದ್ಯ ಕೃತಿಗಳಾಗಿವೆ…

ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು

2006 ರ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ, 2003ರ ನಾಡೋಜ ಪ್ರಶಸ್ತಿ, 2006 ರ ಅರಸು ಪ್ರಶಸ್ತಿಗೆ ಅವರು ಭಾಜನರಾಗಿದ್ದರು…

2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಕೂಡ..!

ಇಂತಹ ಕವಿ, ಸಾಹಿತಿ ಕೆ.ಎಸ್‌. ನಿಸಾರ್ ಅಹಮದ್ ರು ಈಗ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇದೋ ಅನಂತಾನಂತ ನಮನಗಳು…

**********

ಕೆ.ಶಿವು.ಲಕ್ಕಣ್ಣವರ

Leave a Reply

Back To Top