ಭಾವ ಬೆಳಗು ಕವಿತಾ ಸಂಕಲನ ಅವಲೋಕನ ಮಮತಾ ಶಂಕರ್

ಪುಸ್ತಕ ಸಂಗಾತಿ

ಭಾವ ಬೆಳಗು

ಇಂದಿರಾ ಮೋಟೆ ಬೆನ್ನೂರು

ಮಮತಾಶಂಕರ್

ಮಮತಾ ಶಂಕರ್

ಭಾವ ಬೆಳಗು ಕವಿತಾ ಸಂಕಲನ
ಲೇಖಕರು: ಇಂದಿರಾ ಮೋಟೆ ಬೆನ್ನೂರು ಬೆಳಗಾವಿ
ಪ್ರಕಾಶನ: ಚೇತನ ಬುಕ್ಸ್ ಬೆಂಗಳೂರು
ಬೆಲೆ: 180ರೂ
ಪುಸ್ತಕ ಬೇಕಿದ್ದರೆ ಸಂಪರ್ಕ ಸಂಖ್ಯೆ: 9686118396

ಆತ್ಮೀಯ ಗೆಳತಿ ಇಂದಿರಾ ಮೋಟೆಬೆನ್ನೂರು ಇವರ ಚೊಚ್ಚಲ ಕವನ ಸಂಕಲನ ಕೈ ಸೇರಿ ನಾಲ್ಕು ತಿಂಗಳಿಂದ ಕಾಡುತ್ತಿದೆ. ಓದಿ ಬರೆಯುವಷ್ಟರಲ್ಲಿ ಮತ್ತಾವುದೋ  ಕೆಲಸದ ಒತ್ತಡ… ಮತ್ತೆ ಕೈಗೆತ್ತಿಕೊಂಡಾಗ ಬರೆಯಬೇಕಾದ ಭಾವಗಳೇ ಮಾಯ… ಹೀಗೇ ಸಾಗಿ ಬರೆಯಲಾಗದೆ ದಿನಗಳ ಕಳೆದುಬಿಟ್ಟೆ.  ಇದೀಗ ನನ್ನ ಅನಿಸಿಕೆಗಳ ತೆರೆದಿಡುವೆ.

ಬರವಣಿಗೆಗೆ ಹೆಜ್ಜೆ ಇಡುವವರ ಮೊದಲ ಪ್ರೇಮವೇ ಕವಿತಾ ರಚನೆ. ಇದು ಸರಳವೆಂದೋ, ಸಹಜವೆಂದೋ.. ಸರಿ ಎಂದೋ ಒಟ್ಟಿನಲ್ಲಿ ನಾಲ್ಕು ಸಾಲು ಕವಿತೆ ಬರೆಯುವುದು ಸಾಹಿತ್ಯಕ್ಕೆ ಓಂಕಾರ ಹಾಡಿದಂತೆ ಎನಿಸುತ್ತದೆ… ಸಹಜ ಕೂಡ.. ಇದಕ್ಕೆ ನಾನೂ ಹೊರತಲ್ಲ, ಇಂದಿರಾ ಅಥವಾ ಮತ್ತಾರೂ ಹೊರತಲ್ಲ. ನಮ್ಮ ಅಭಿವ್ಯಕ್ತಿಗೆ ಮೊದಲ ಮಾಧ್ಯಮವೇ ಕವಿತೆಗಳು. ಅಂತರಂಗದ ಭಾವನೆಗಳಿಗೆ ಕನ್ನಡಿ ಹಿಡಿಯುವುದು ಕವಿತೆಯಲ್ಲದೆ ಬೇರೇನೂ ಅಲ್ಲವೇನೋ ಎಂದೇ ನನ್ನ ಭಾವನೆ.

ಪ್ರಸ್ತುತ ಕವನ ಸಂಕಲನವಂತೂ ಭಾವನೆಗಳ ಆಗರ. ಸುಮಾರು 70 ಕವಿತೆಗಳ ಸುರಿಮಳೆಯನ್ನೂ  ಸುರಿಸಿದ್ದಾರೆ. ಜೊತೆಗೆ ಪ್ರಿಯ ಗುರು ಮಾತೆ ಡಾ. ಗುರುದೇವಿ  ಹುಲೆಪ್ಪನವರ ಮಠ ಇವರ ಕೃಪಾಶೀರ್ವಾದದ ಮುನ್ನುಡಿಯ ಮುಕುಟ ಈ ಸಂಕಲನಕ್ಕೆ ಶ್ರೀರಕ್ಷೆಯ ಪುಟದಂತಿದೆ.

ಸಂಕಲನದ ಮೊದಲ ಕವಿತೆ ‘ಛಲ’. ಇದು ಕವಿಯತ್ರಿ ಲೋಕ ಎದುರಿಸುವ ಮನಸ್ಥಿತಿಯನ್ನು ಸಮೀಕರಿಸುವ ಕವಿತೆ. ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಈ ಸಮಯದಲ್ಲಿ ಕವಿತೆಯ ಮೂಲಕ ತಾನು ಏನು ಎದುರಾದರೂ ಸಾಧಿಸಬಲ್ಲೆ ಎಂಬುದನ್ನು ಹೇಳುವಂತೆ ಇದೆ ಈ ಕವಿತೆ. ಆಸರೆ ಕವಿತೆ ಬಾಳ ಪಯಣದ ಕೊನೆಯ ಘಟ್ಟದಲ್ಲಿ ಮನುಷ್ಯನಿಗೆ ತನ್ನ ಮಕ್ಕಳು ಮೊಮ್ಮಕ್ಕಳ ಎಳೆ ಚಿಗುರಿನಂತ ಬೆರಳ  ಸ್ಪರ್ಶವೇ ಹೊಸ ಸಾಂತ್ವನವಾಗಿ ಕಾಣುವ ಭಾವ ಚೆನ್ನಾಗಿ ಮೂಡಿ ಬಂದಿದೆ. ‘ಬರಗಾಲ’ ಮತ್ತೊಂದು ಒಂದು ಒಳ್ಳೆಯ ಆಶಯ ಹೊಂದಿದ ಕವಿತೆ. ಪ್ರಸ್ತುತ ಆಧುನೀಕರಣ ಮನುಕುಲಕ್ಕೆ ಒದಗಿಸಿರುವ ಸವಲತ್ತುಗಳು ಮನುಷ್ಯ ಸಂಬಂಧಗಳಲ್ಲಿ ಏನೇನಕ್ಕೆಲ್ಲಾ ಬರಗಾಲ ತಂದೊಡ್ಡುವುದರಲ್ಲೂ ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ಸೂಕ್ಷ್ಮವಾಗಿ ಬಿಡಿಸಿದ್ದಾರೆ. ಜೊತೆಗೆ ಮನುಷ್ಯ ಒಣ ಮರವಲ್ಲ ಕರುಣೆಯ ಕಣಜ. ಮಾನವತೆ ಮೈಯೆತ್ತಿ ಬರಲಿ… ಮನುಕುಲ ಉಳಿಗಾಲಕ್ಕೆ ಅದೇ ಮದ್ದು ಎನ್ನುವ ಆಶಾಭಾವನೆ ಹೊಂದಿರುವ ಒಂದು ಒಳ್ಳೆಯ ಸುಂದರ ಕವಿತೆ.  ಹಾರಿಬಿಡೆ ಹಕ್ಕಿ ಸ್ತ್ರೀ ಸ್ವಾತಂತ್ರ್ಯವನ್ನು ಒತ್ತಿ ಹೇಳುವ, ಶೋಷಣೆಯ ವಿರುದ್ಧ ಬಂಡಾಯ ಮನಸ್ಥಿತಿಯ ಪ್ರತಿನಿಧಿಯಂತೆ  ರೂಪುಗೊಂಡ ಕವಿತೆ.

ಮತ್ತೊಂದು ಮನಸೆಳೆದ ಪುಟ್ಟ ಕವಿತೆ ‘ಅರಳು’. ಬೇಂದ್ರೆಯವರು ಅರವತ್ತಕ್ಕೆ ಅರಳುಮರಳಲ್ಲ ಮರಳಿ ಅರಳುವುದು ಎಂದಿದ್ದರಂತೆ. ಆ ಭಾವನೆಯನ್ನೇ ತೋರುವ ಈ ಕವಿತೆ  ತೊಂಭತ್ತರ ತಾಯಿಯೇ ತನಗೀಗ ಮಗಳಾಗಿರುವಳು ಎಂಬುದನ್ನು ಚೆನ್ನಾಗಿ ಬಿಂಬಿಸಿದ್ದಾರೆ. ಒಬ್ಬರಿಗಿನ್ನೊಬ್ಬರ ಬೆರಳು ಹಿಡಿದು ನಡೆದು, ಒಬ್ಬರಿಗಿನ್ನೊಬ್ಬರ ಕೊರಳು ತಬ್ಬಿ ಹಿಡಿದು ನಾವು ಬೆರಳು ಕೊರಳು ಎಂದು ತುಂಬಾ ಅರ್ಥಗರ್ಭಿತವಾಗಿ ಮನಸ್ಸಿಗೆ ದಾಟಿಸುವ ಕವಿತೆ. ನಾವು ಹೀಗೇ, ಮುಗುದೆ, ನೋಡಬಾರದೇ ಒಮ್ಮೆ, ನಿನ್ನೆಡೆಗೆ ಮುಂತಾದ ಹಲವು ಕವಿತೆಗಳನ್ನೊಳಗೊಂಡು ಸ್ತ್ರೀ ಸಂವೇದನೆಯ ಅಭಿವ್ಯಕ್ತಿ, ನಾಡು ನುಡಿ ಕುರಿತಾದ ಭಾವಗಳ ಅಭಿವ್ಯಕ್ತಿ, ದೈನಂದಿನ ಬದುಕಿನಲ್ಲಿ ಕಂಡ… ಅನುಭವಿಸಿದ ಎಲ್ಲ ವಿಷಯಗಳ ಕುರಿತಾದ ಕವಿತೆಗಳು ಇವನ್ನೆಲ್ಲ ಓದಿದಾಗ ಕವಿಯತ್ರಿ ಬದುಕಿನ ಎಲ್ಲ ಸ್ತರಗಳಲ್ಲಿ ದಕ್ಕುವ ಅನುಭವಗಳು ಹಾಗೂ ಅವುಗಳಿಗೆ ಸ್ಪಂದಿಸಿದ ರೀತಿ ಅವೆಲ್ಲವುಗಳ ಕುರಿತ ಅವರ ಭಾವದೀಪ್ತಿಯನ್ನು ಅಕ್ಷರ ರೂಪಕ್ಕಿಳಿಸುವ, ಕವಿತೆಯಾಗಿಸುವ ಅವರ ಜಾಣ್ಮೆ ಮೆಚ್ಚುಗೆಯಾಗುತ್ತದೆ. ಇದರಲ್ಲಿನ ಸಾಕಷ್ಟು ಕವಿತೆಗಳು ಅವರಿಗೆ ದಕ್ಕಿದ ಅನುಭವಗಳಿಗೆ ಸಂವೇದನೆಗಳಿಗೆ ಅಕ್ಷರ ರೂಪದಲ್ಲಿದೆ. ಕವಿತೆ ಕಟ್ಟುವ ಪ್ರಯತ್ನಕ್ಕಿಂತ ಹುಟ್ಟಿದ ಕವಿತೆಗಳ ಲೋಕಾಂತ ಗೊಳಿಸಿದ್ದಾರೆ. ಆದ್ದರಿಂದಲೇ ಇವೆಲ್ಲ ಸಹಜ ಕವಿತೆಗಳಾಗಿ ಓದುಗರಿಗೆ ಮನಮುಟ್ಟುತ್ತದೆ. ಕವಿಯಾದವರಿಗೆ ತನ್ನ ಸುತ್ತಲಿನ ಕುರಿತ ಆಗುಹೋಗುಗಳ ಬಗೆಗಿನ ಸ್ಪಂದನೆ, ಸೂಕ್ಷ್ಮ ಅವಲೋಕನ ಬಹಳ ಮುಖ್ಯವಾಗಿರುತ್ತದೆ. ಆ ಸೂಕ್ಷ್ಮತೆ ಕವಿಯತ್ರಿ ಇಂದಿರಾ ಅವರ ಕವಿತೆಗಳಲ್ಲಿ ಎದ್ದು ಕಾಣುತ್ತದೆ. ಹಾಗೆಯೇ ಎಲ್ಲಾ ಭಾವಗಳಿಗೂ ಕವಿತೆ ರೂಪ ಕೊಡಲಾಗುವುದಿಲ್ಲ. ಹಾಗೆ ಕೊಡಲಾಗದ ಭಾವಗಳಿಗೆ ಕವಿತೆಯ ರೂಪ ಕೊಡಲು ಹೋದಾಗ ವಾಚ್ಯವಾಗಬಹುದಾದ ಅಪಾಯವು ಇಲ್ಲ ಎನ್ನಲಾಗುವುದಿಲ್ಲ. ಕವನ ಸಂಕಲ ಚೊಚ್ಚಲ ಕವನ ಸಂಕಲನ ವಾದ್ದರಿಂದ ಲೋಪಗಳು ಎಂದು ತೋರಿಸುವುದು ತಪ್ಪಾದೀತು. ಆದರೂ ಅಂತಹ ಒಂದೆರಡು ಪಕ್ಕಕ್ಕಿಡಬಹುದಾದ ಸಣ್ಣಪುಟ್ಟ ಲೋಪಗಳನ್ನು ಹೊರತುಪಡಿಸಿ ಪ್ರಥಮ ಕವನ ಸಂಕಲನ ಎಂಬ ಟ್ಯಾಗ್ನೊಂದಿಗೆ ಕವಿ ಮತ್ತು ಕವಿತೆಗಳು ಗೆಲುವು ಸಾಧಿಸಿರುವುದು ಈ ಸಂಕಲನದ ವಿಶಿಷ್ಟತೆ ಎನ್ನಬಹುದು. ಮುಂಬರುವ ದಿನಗಳಲ್ಲಿ ಇವರ ಭಾವಗಳ ಬೆಳಕಿನಲ್ಲಿ ಮತ್ತಷ್ಟು ಮಗದಷ್ಟು ಹೊಸತನದ ಕವಿತೆಗಳು ಓದುಗರಿಗೆ ದಕ್ಕುವಂತಾಗಲಿ ಎಂದು ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ‘ಭಾವ ಬೆಳಗು’ ಸಂಕಲನದ ಮೂಲಕ ಹೊಸ ಹೆಜ್ಜೆ ಇಟ್ಟಿರುವ ಶ್ರೀಮತಿ ಇಂದಿರಾ ಮೋಟಬೆನ್ನೂರು ಅವರಿಗೆ ಸ್ವಾಗತಿಸುತ್ತಾ ಶುಭ ಕೋರುತ್ತಾ ಅಭಿನಂದನೆಗಳನ್ನು ಹೇಳಬಯಸುತ್ತೇನೆ…. ಒಳಿತಾಗಲಿ ಗೆಳತಿ.


ಮಮತಾ ಶಂಕರ್

Leave a Reply

Back To Top