ಗಜಲ್ ಜುಗಲ್ ಬಂದಿ-ವಿಜಯಪ್ರಕಾಶ್ ಕಣಕ್ಕೂರು,ನಯನ. ಜಿ. ಎಸ್ .

ಕಾವ್ಯ ಸಂಗಾತಿ

ಗಜಲ್ ಜುಗಲ್ ಬಂದಿ-

ವಿಜಯಪ್ರಕಾಶ್ ಕಣಕ್ಕೂರು,ನಯನ. ಜಿ. ಎಸ್ .

ಜುಗಲ್ ಬಂಧಿ ಗಜಲ್

ನಿನ್ನೆಗಳು ಮರೆತು ನೇಪಥ್ಯವ ಸೇರುವ ಮುನ್ನ ಅನುಭಾವಿಯಾಗು
ಇಂದು ಕಳೆದು ಸಾಧ್ಯತೆಗಳು ಕ್ಷೀಣಿಸುವ ಮುನ್ನ ಕ್ರಿಯಾಶೀಲನಾಗು

ಕರುಣಿಸಿದವನಿಗಷ್ಟೇ ತಿಳಿದಿಹುದು ನಮಗೆ ಉಳಿದ ಕ್ಷಣಗಳ ಲೆಕ್ಕ
ಒಣ ಪ್ರತಿಷ್ಠೆಯನ್ನು ತೋರಿ ಮೆರೆದಾಡುವ ಮುನ್ನ ಮಾನವನಾಗು

ಕೊಟ್ಟಷ್ಟು ವೃದ್ಧಿಯಾಗುವ ಐಶ್ವರ್ಯ ಅರಿವೊಂದೇ ಈ ಜಗದಲ್ಲಿ
ಕೆಟ್ಟ ಮಾರ್ಗದ ಸಂಪತ್ತು ಲೂಟಿಯಾಗುವ ಮುನ್ನ ದಾನಿಯಾಗು

ನಿರೀಕ್ಷೆಗಳನುಳಿದರೆ ಅನಿರೀಕ್ಷಿತ ತಿರುವುಗಳು ಧೃತಿಗೆಡಿಸಲಾರವು
ಜಗಕೆ ಉಪದೇಶವನು ನೀಡಲು ಹೊರಡುವ ಮುನ್ನ ಜ್ಞಾನಿಯಾಗು

ಅನ್ಯರ ಮನೆ ಮನವನು ಮುರಿದು ಗೆದ್ದು ಬೀಗುವುದಲ್ಲ ವಿಜಯ
ಸ್ವಾರ್ಥಿಗಳ ಲೋಕಕೆ ಅಡಿಯಿಡುವ ಮುನ್ನ ಹೃದಯವಂತನಾಗು


ವಿಜಯಪ್ರಕಾಶ್ ಕಣಕ್ಕೂರು

******

ಗಜಲ್

ನಾಳೆಗಳು ಬಳಿತು ವಾಸ್ತವ ಮಾಸುವ ಮುನ್ನ ಚಲನಶೀಲನಾಗು
ಪ್ರಾಯದ ಸೊಕ್ಕು ಸುಕ್ಕುಗಳನು ಅಪ್ಪುವ ಮುನ್ನ ಧೀಮಂತನಾಗು

ಇಂದು ನಾಳೆಗಳ ಪರಾಪರಗಳ ಅರಿತವರು ಯಾರೂ ಇಲ್ಲವಿಲ್ಲಿ
ಚಣವೊಂದರ ಮೌಲ್ಯವು ಮಸುಕಾಗುವ ಮುನ್ನ ಅರಿವಿಗನಾಗು

ನೆಲಕಚ್ಚಿದ ಅವಶೇಷಗಳು ಸಾರಿ ಹೇಳುತ್ತಿವೆ ನಶ್ವರತೆಯ ತತ್ವವನು
ಪಾರಮ್ಯತೆಯು ಗರ್ವದೊಳು ಪವಡಿಸುವ ಮುನ್ನ ಸಜ್ಜನಿಗನಾಗು

ಭಾವ ತಂತುಗಳ ಹಸನತೆಯಲಿ ಹೃದಯ ಇರಿಯುವವರೇ ಅಧಿಕ
ಹಿಗ್ಗಿನೊಳು ಆತ್ಮದಸ್ಮಿತೆ ಬಿಕರಿಯಾಗುವ ಮುನ್ನ ಅಪರಂಜಿಯಾಗು

ಚಿರಂತನವಲ್ಲದ ಬಾಳ್ವೆಯಲಿ ಚಿಂತೆಗಳ ಸಾಂಗತ್ಯವೇಕೆ ನಯನ
ಇಡಿ ದೇಹವಿದು ಹಿಡಿ ಮಣ್ಣ ಅಪ್ಪಿಕೊಳ್ಳುವ ಮುನ್ನ ಶೌರಿಗನಾಗು.

ನಯನಾ ಜಿ.ಎಸ್.


Leave a Reply

Back To Top