ಡಾ.ವೈ.ಎಂ.ಯಾಕೊಳ್ಳಿಯವರ ತನಗ ಸಂಪದ

ಕಾವ್ಯಸಂಗಾತಿ

ಡಾ.ವೈ.ಎಂ.ಯಾಕೊಳ್ಳಿ

ತನಗ ಸಂಪದ


ಮಾತೆಂಬುದು ಬೆಳಕು
ಕತ್ತಲೆ ಕಳೆವುದು
ಮಾತಿಲ್ಲದ ಈ ಜಗ
ಅಂಧಕಾರವಪ್ಪುದು

ಸಂಸಾರವು ಸರ್ಕಸ್ಸು
ತಂತಿ‌ ಮೇಲಣ ಅಲೆ
ತೂಗಿ ನಡೆದರಷ್ಟೇ
ನಿರಾಳವು ಈ ಬಲೆ

ಮನದಲಿರುವದ
ಹೇಳದಿರು ಒಮ್ಮೆಲೆ
ಮುಚ್ಚಿಡುವದು ಕೂಡ
ಬಾಳ ಗೆಲ್ಲುವ ಕಲೆ

ಎಲ್ಲವೂ ತಿಳಿಯದು
ಒಂದು ಸಲ ಓದಿಗೆ
ಬಾಳಿನ ಪಠ್ಯವದು
ಕಠಿಣದ  ಹೊತ್ತಿಗೆ



 ನಿನ್ನ ನೀನು ಗೆಲ್ಲಲು
ಜಗವು ಸೋಲುವುದು
ಎಲ್ಲ ಸೋಲಿಪೆನೆಂದೆ
ಅಲ್ಲಿ ಗೆಲುವಿರದು


ಹಿರಿಯರ ನುಡಿಯು
ಅನುಭವ ಸಾಗರ
ಕಂಡುಂಡ ಸುಖ ದುಃಖ
ಮಾತು ರೂಪದ ಹಾರ

ಬರೆದಂಥ ಬರಹ
ಆಗುವದದು ಪಾಕ
ತಿದ್ದಿ ತೀಡಿದರಷ್ಟೇ
ಬದುಕು ಪರಿಪಾಕ

ಆಡುವ ಮಾತಿನೊಳು
ಇದ್ದರೆ ಸತ್ಯ ಭಾವ
ಮನ್ನಣೆ ಕೊಡುವದು
ಜಗತ್ತಿನ ಸ್ವಭಾವ

ಮಾತಿನಲಿ ತೋರಿಪ
ಕರುಣೆಯದು ಸುಳ್ಳು
ಎದೆಯಿಂದ ಬಂದರೆ
ಅಮೃತ ಸಮ ಪಾಲು
೧೯
 ಜೀವನದ ಹಾದಿಯು
ಸರಳವೇನಲ್ಲವು
ಕಲ್ಲು‌ಮುಳ್ಳು ತುಳಿದೆ
ಗಮ್ಯವ ಸಾಗಬೇಕು
೧೧
ಹರಿವ  ಸವಿಜೇನು
ಪ್ರೀತಿಯ ಕಾಮಧೇನು
ಒಲವಿನ ಹಾಲದು
ಸಿರಿ ಸ್ವರ್ಗ ಸಮನು
೧೨
ಬಹುದೆಲ್ಲ ಹೇಳದು
ಆಕಸ್ಮಿಕದ ನಡೆ
ತಡೆಯಲಸದಳ
ಉಣ್ಣಬೇಕಾದ ಎಡೆ


ಡಾ.ವೈ.ಎಂ.ಯಾಕೊಳ್ಳಿ

3 thoughts on “ಡಾ.ವೈ.ಎಂ.ಯಾಕೊಳ್ಳಿಯವರ ತನಗ ಸಂಪದ

  1. ತುಂಬಾ ಚೆನ್ನಾಗಿವೆ ಸರ್, ಮೂರನೇ ತನಗ ಆಪ್ತವಾಯ್ತು

  2. ನೀತಿ ಶತಕಗಳಂತೆ ತುಂಬಾ ಅರ್ಥಪೂರ್ಣವಾದ ತನಗಗಳು ಸರ್
    ಧನ್ಯವಾದಗಳು

  3. ತುಂಬಾ ಸುಂದರ ಸರ್, ಕಿರಿದರಲ್ಲಿ ಹಿರಿದಾದ ಅಥ೯. -ವೀರಭದ್ರ ಕೌದಿ

Leave a Reply

Back To Top