ಪುಸ್ತಕ ಸಂಗಾತಿ
ಡಾ. ಅಣ್ಣಪ್ಪ ಪಾಂಗಿ ಅವರ
“ಆಹಾರದಿಂದ ಆರೋಗ್ಯದೆಡೆಗೆ”
ರೋಹಿಣಿ ಯಾದವಾಡ
“ಆಹಾರದಿಂದ ಆರೋಗ್ಯದೆಡೆಗೆ”
ಕೃತಿಕಾರರು ಡಾ. ಎ.ಎ.ಪಾಂಗಿ
ಪ್ರಕಾಶನ ಅನ್ನಪೂರ್ಣ ಪ್ರಕಾಶನ
ಬೆಲೆ. ರೂ.350
ಸಿಗುವ ಸ್ಥಳ
ಡಾ.ಎ ಎ.ಪಾಂಗಿ ಅನ್ನಪೂರ್ಣ ಕ್ಲಿನಿಕ
ಬಸ್ ಸ್ಟ್ಯಾಂಡ್ ರೋಡ
ಅಥಣಿ ೫೯೧೩೦೪.
ಅಥಣಿಯ ಪ್ರತಿಷ್ಠಿತ ಪಾಂಗಿ ಮನೆತನದ ಡಾ. ಅಣ್ಣಪ್ಪ ಪಾಂಗಿ ( ಎ.ಎ.ಪಾಂಗಿ ಎಂದೇ ಪ್ರಸಿದ್ಧರು) ಅವರು ಹಿರಿಯ ವೈದ್ಯರು. ಕಳೆದ ೪೨ ವರುಷಗಳಿಂದ ವೈದ್ಯ ವೃತ್ತಿಯೊಂದಿಗೆ ವೈದ್ಯಕೀಯ ಸೇವೆ ಹಾಗೂ ಸಂಶೋದನಾ ಸಂಸ್ಥೆಯ ಅಡಿಯಲ್ಲಿ ಹಾಗೂ ರೋಟರಿ ಸಂಸ್ಥೆಯ ಮೂಲಕ ತಮ್ಮನ್ನು ಸಾಮಾಜಿಕ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು. ಸೃಜನಶೀಲ ಮನಸ್ಸುಳ್ಳ ಡಾ. ಪಾಂಗಿಯವರು ಕರೋನಾ ಸಮಯದ ಸದುಪಯೋಗ ಪಡೆದು ತಮ್ಮ ವ್ಯಕ್ತಿತ್ವಕ್ಕೊಂದು ಹೊಸ ತಿರುವನ್ನು ಪಡೆದುಕೊಂಡವರು. ಅದೇನೆಂದರೆ ಈ ಸಮಯದಲ್ಲಿ ಅವರು ಸಂಸ್ಕೃತ ಭಾಷೆಯನ್ನು ಕಲಿತು ಪರೀಕ್ಷೆಗಳನ್ನು ಕಟ್ಟಿದರು. ಅಲ್ಲದೇ ಜನರಿಗಾಗಿ ಏನಾದರೊಂದು ಕನಸ್ಟ್ರೆಕ್ಟಿವ್ ವರ್ಕ ಮಾಡಬೇಕೆನಿಸಿ, ಕರೋನಾ ಪೆಂಡಾಮಿಕದಲ್ಲಿ ಬರಹಗಳ ಮೂಲಕ ಧೈರ್ಯ ತುಂಬುವ ಕಾಯಕಕ್ಕಿಳಿದರು. ಆಗ ಆಹಾರ ಸೇವಿಸುವ ವಿಧಾನ, ಮಾಹಿತಿ ತಿಳಿಸುತ್ತಿರುವಂತೆಯೇ , ಬದುಕಿಗೆ ಅತ್ಯಗತ್ಯವಾದ ಆಹಾರ ಸೇವನೆ ಬಗ್ಗೆ ಸರಿಯಾದ ಪರಿಕಲ್ಪನೆ ನೀಡಲು ನಿಶ್ಚಯಿಸಿ ಅಂಕಣ ಬರಹಗಳನ್ನು ಬರೆಯುತ್ತ ಹೋದರು. ಅವುಗಳನ್ನೆಲ್ಲ ಒಟ್ಟುಗೂಡಿಸಿ ಇದೀಗ ” ಆಹಾರದಿಂದ ಆರೋಗ್ಯದೆಡೆಗೆ ” ಎಂಬ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿ ತಾವೊಬ್ಬ ವೈದ್ಯ ಅಷ್ಟೇ ಅಲ್ಲ, ವೈದ್ಯ ಸಾಹಿತಿಯೂ ಎಂಬುದಾಗಿ ನಿರೂಪಿಸಿ ತೋರಿದ್ದಾರೆ.
" ಆಹಾರದಿಂದ ಆರೋಗ್ಯದೆಡೆಗೆ " ಇದೊಂದು ೪೭೨ ಪುಟಗಳುಳ್ಳ ಮಹಾಕೃತಿ. ಅನ್ನಪೂರ್ಣ ಪ್ರಕಾಶನದಿಂದ ಮೂಡಿಬಂದ ಈ ಕೃತಿಯನ್ನು ಬೆಳಗಾವಿಯ ರೇನಬೋ ಆಫಸೆಟ್ ಪ್ರಿಂಟರ್ಸದವರು ತುಂಬ ಆಕರ್ಷಕವಾಗಿ ಮುದ್ರಿಸಿದ್ದಾರೆ. ಬೆಲೆ ರೂ.೩೫೦ . ಮುನ್ನುಡಿಯನ್ನು ಮುಧೋಳದ ಖ್ಯಾತ ವೈದ್ಯರು , ಸಾಹಿತಿಗಳೂ ಆದಂತಹ ಡಾ. ಶಿವಾನಂದ ಕುಬಸದ ಅವರು ಈ ಕೃತಿಗೆ ಮುನ್ನುಡಿಯನ್ನಿತ್ತಿದ್ದು ಇದೊಂದು " ಜನಾರೋಗ್ಯ ಬಯಸುವ ಅನನ್ಯ ಗ್ರಂಥವಾಗಿದ್ದು ಡಾ. ಎ.ಎ ಪಾಂಗಿಯವರು ಕನ್ನಡ ವೈದ್ಯ ಸಾಹಿತ್ಯಕ್ಕೆ ಒಬ್ಬ ಭರವಸೆಯ , ಸೃಜನಶೀಲ ಬರಹಗಾರರನ್ನು ನೀಡಿದಂತಾಗಿದೆ. ಅಲ್ಲದೇ ನಾವು ಸೇವಿಸುವ ಆಹಾರ ಹಾಗೂ ಅದು ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮ - ದುಷ್ಪರಿಣಾಮಗಳನ್ನು ತಿಳಿಸುವ ಸಂಪೂರ್ಣ: ಮಾಹಿತಿಯ ಬಗ್ಗೆ ತಿಳಿಸುವಲ್ಲಿ ಲೇಖಕರು ಸಫಲರಾಗಿದ್ದಾರೆ" ಎಂದಿದ್ದಾರೆ. ಬೆನ್ನುಡಿಯನ್ನು ಸಾಹಿತಿ ಅಪ್ಪಾಸಾಹೇಬ ಅಲಿಬಾದಿಯವರು ಬರೆದಿದ್ದು " ಜನಸಾಮಾನ್ಯರಿಗೆ ಆರೋಗ್ಯಕ್ಕಾಗಿ ಆಹಾರ ಕುರಿತು ಹಲವಾರು ಮಾಹಿತಿ ಒದಗಿಸುವ ಕೃತಿ " ಎಂದಿದ್ದಾರೆ. ಅಥಣಿ ಮೋಟಗಿಮಠದ ಪೂಜ್ಯ ಪ್ರಭುಚನ್ನಬಸವ ಸ್ವಾಮೀಜಿಗಳು ಕೃತಿಗೆ ಹದುಳ ನುಡಿಯನ್ನಿತ್ತು ಶ್ರೀರಕ್ಷೆ ನೀಡಿದ್ದಾರೆ.
ಕೃತಿಯು " ಆಹಾರ ಹಾಗೂ ಆರೋಗ್ಯ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು" ಎಂಬ ವಿಷಯ ನಿವೇದನೆಯೊಂದಿಗೆ ತೆರೆದುಕೊಳ್ಳುತ್ತದೆ. ಮುಂದೆ ಹನ್ನೊಂದು ವಿಭಾಗಗಳಲ್ಲಿ ಆಹಾರ ಮಾಹಿತಿಯನ್ನು ವಿಂಗಡಿಸಿ ಅವುಗಳಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಮಾಹಿತಿ ಒದಗಿಸಿದ್ದಾರೆ. ೧) ಆಹಾರದ ಘಟಕಗಳು, ೨)ಧಾನ್ಯಗಳು, ೩) ಬೀಜಗಳು, ೪) ಎಣ್ಣೆ ಬೀಜಗಳು ಹಾಗೂ ಖಾದ್ಯ ತೈಲಗಳು, ೫) ಹಣ್ಣುಗಳು, ೬) ತರಕಾರಿಗಳು, ೭) ಸಿಹಿ ಪದಾರ್ಥಗಳು , ೮) ಹಾಲು ಹಾಗೂ ಇತರ ಡೇರಿ ಪದಾರ್ಥಗಳು, ೯) ಖನಿಜ ಕೊರತೆ ರೋಗಗಳು, ೧೦) ಆಹಾರ- ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ, ೧೧) ಇತರ ವಿಷಯಗಳು ಹೀಗೆ ಹನ್ನೊಂದು ಶಿರ್ಷೀಕೆಗಳಡಿ ಉಪಯುಕ್ತ ಮಾಹಿತಿಗಳನ್ನು ನೀಡುತ್ತ ಸುಲಭವಾಗಿ ಓದುಗರ ಮನಮುಟ್ಟುವಂತೆ ಸರಳ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಲೇಖಕರೇ ಹೇಳುವಂತೆ " ಆಹಾರ" ವನ್ನೇ ಕೇಂದ್ರಿಕರಿಸಿ ಬರೆಯಲು ನಿರ್ಧರಿಸಿ ನಿತ್ಯವೂ ಸೇವಿಸುವ ಆಹಾರ ಪದಾರ್ಥಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕೃತಿಯಾಗುವಂತೆ ನಿರ್ಧರಿಸಿ ಬರೆಯಲಾರಂಭಿಸಿದ್ದಾರೆ. ಅದೂ ಯಶಸ್ವಿಯೂ ಆಗಿದೆ ಎಂದು ಕೃತಿ ಓದಿದವರಿಗೆ ಅನಿಸದಿರಲಾರದು. ತಮ್ಮ ೪೨ ವರುಷಗಳ ವೈದ್ಯಕೀಯ ವೃತ್ತಿಯಲ್ಲಿ ಅನುಭವಕ್ಕೆ ಬಂದದ್ದನ್ನು ಗಮನದಲ್ಲಿರಿಸಿಕೊಂಡಿದ್ದು ಕೃತಿಯು ಸಶಕ್ತವಾಗಲು ಕಾರಣವಾಗಿದೆ. ಕೃತಿಯ ಇನ್ನೊಂದು ವಿಶೇಷತೆ ಎಂದರೆ ಈ ಕೃತಿಯನ್ನು ಉಳಿದ ಕೃತಿಗಳಂತೆ ಆರಂಭದಿಂದ ಓದಲು ಪ್ರಾರಂಭಿಸಬೇಕಂತಿಲ್ಲ. ಇಲ್ಲಿಯ ಪ್ರತಿಯೊಂದು ವಿಭಾಗವು ಶೀರ್ಷಿಕೆಗೆ ತಕ್ಕಂತೆ ತನ್ನಿಂದ ತಾನೇ ಪರಿಪೂರ್ಣತೆ ಹೊಂದಿವೆ. ಆದಕಾರಣ ಓದುಗರು ತಮಗೆ ಬೇಕಾದ ವಿಷಯವನ್ನು ಆಯ್ದುಕೊಂಡು ಓದಬಹುದಾಗಿದೆ. ಆದರೂ ಕೃತಿಯನ್ನು ಕೈಗೆತ್ತಿಕೊಂಡರೆ ಸಾಕು ಸಂಪೂರ್ಣ ಓದಿಯೇ ಮುಗಿಸಬೇಕೆನ್ನುವ ಮನಸ್ಸಾಗುವುದು ಸುಳ್ಳಲ್ಲ. ಒದುಗರು ಓದುತ್ತಾರೆ ಎಂಬ ಭರವಸೆ ನನಗಿದೆ.
ಜಾಗತೀಕರಣದ ಇಂದಿನ ದಿನಗಳಲ್ಲಿ ಆಹಾರವೂ ಕೂಡ ಇಂದು ವಿಶ್ವವ್ಯಾಪಿಯಾಗುತ್ತಿದೆ ಎಂಬುವುದು ನಿಜವಾದರೂ ಡಾ. ಪಾಂಗಿಯವರು ನಮ್ಮ ಭಾಗದ , ನಮ್ಮ ಜನರು ದಿನ ನಿತ್ಯ ಸೇವಿಸುವ ಆಹಾರಗಳನ್ನು ಕುರಿತು ಬರೆದಿದ್ದಾರೆ. ಇಂದು ಫಾಸ್ಟ್ ಫುಡ್, ಜಂಕ ಫುಡ್ ಗಳ ದಾಸರಾಗುತ್ತಿರುವ ನಾವು, ನಮ್ಮ ದೇಶಿಯ ಹಾಗೂ ಸಾಂಪ್ರದಾಯಿಕ ಆಹಾರಗಳನ್ನು ಕಡೆಗಣಿಸುತ್ತಿದ್ದೆವೆ. ಇದನ್ನು ನೋಡಿದರೆ ಮುಂದೊಂದು ದಿನ ಕಿಚನ್ ಲೆಸ್ ಮನೆಗಳು ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ ಎಂಬ ಆತಂಕದಿಂದ ನಿತ್ಯ ಸೇವಿಸುವ ನೀರು, ಉಪ್ಪು, ಸಕ್ಕರೆ, ಅಕ್ಕಿ, ಜೋಳ, ಗೋಧಿ, ಚಹಾ , ಧಾನ್ಯಗಳು, ಹಣ್ಣುಗಳು, ತರಕಾರಿಗಳು , ಮಸಾಲೆ ಪದಾರ್ಥಗಳು , ಎಣ್ಣೆ ಹೀಗೆ ಎಲ್ಲವನ್ನೂ ಆಯ್ದುಕೊಂಡು ಅವುಗಳ ಸೇವೆನೆಯ ಉಪಯೋಗ ಹಾಗೂ ದುಷ್ಪರಿಣಾಮಗಳನ್ನು ಅವುಗಳಿಂದ ಆವರಿಸುವ ರೋಗಗಳನ್ನು ವಿವರಿಸಿದ್ದಾರೆ. ಯಾವುದನ್ನು ಎಷ್ಟು ಸೇವಿಸಬೇಕು, ಯಾವಾಗ ಸೇವಿಸಬೇಕು ಎಂಬ ಮಹತ್ವದ ಮಾಹಿತಿಯೂ ಇಲ್ಲಿದೆ.
ಆಹಾರ ಕ್ರಮ ಹೇಗಿರಬೇಕು ಎನ್ನುವಲ್ಲಿ " ಉಪಹಾರ ಅವಶ್ಯಕವೆ? ಹಾಗೂ ಉಪಹಾರ ಹೇಗಿರಬೇಕು" ಎಂಬ ಶಿರ್ಷೀಕೆಯಡಿ ಹೇಳುತ್ತ , ಹಿಂದೆ ಮನುಷ್ಯ ಕೇವಲ ದಿನಕ್ಕೆ ಎರಡು ಹೊತ್ತಿನ ಊಟ ಮಾಡಿ ಆರಾಮವಾಗಿದ್ದರು. ಈಗ ಅದರೊಂದಿಗೆ " ಬೆಳಗಿನ ಉಪಹಾರ" ಎಂಬುದು ಸೇರಿಕೊಂಡಿದೆ. ಇದು ನಮ್ಮ ದೇಶದಲ್ಲಿ ೧೪ ನೇ ಶತಮಾನದವರೆಗೆ ಇರಲೇ ಇಲ್ಲವೆನ್ನುತ್ತ, ಉಪಹಾರವನ್ನು ಸೇವಿಸುವ ಸಮಯ, ಸೇವಿಸುವ ಪದಾರ್ಥಗಳು ಹಾಗೂ ಉಪಹಾರದ ಬಗೆಗಿರುವ ನಂಬಿಕೆಗಳ ಕುರಿತು ಬಹಳ ಸ್ಪಷ್ಟವಾಗಿ ಮೌಲಿಕ ಮಾಹಿತಿಯನ್ನು ಉಪಹಾರ ಮತ್ತು ಊಟದ ತಟ್ಟೆಗಳನ್ನು ವರ್ಣ ಚಿತ್ರದಲ್ಲಿ ಆಹಾರ ಪದಾರ್ಥಗಳೊಂದಿಗೆ ಓದುಗರಿಗೆ ತೋರಿಸಿದ್ದಾರೆ. ಕೊನೆಯಲ್ಲಿ ಮುಖ್ಯ ಸಂದೇಶಗಳನ್ನು ನೀಡಿದ್ದು ಪ್ರಸುತ್ತಕ್ಕೆ ಬೇಕಾದ ಮಾಹಿತಿಯಾಗಿದೆ.
ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿ ಇರುವ ಪೌಷ್ಟಿಕಾಂಶಗಳ ಪ್ರಮಾಣವನ್ನು ಕೊಡುತ್ತ ಹೋಗಿರುವುದು ಓದುಗರಿಗೆ ತುಂಬ ಸಹಕಾರಿಯಾಗುವಂತಿದೆ. ‘ ಆಹಾರ ಸಂರಕ್ಷಕ ಬಳಕೆ’ ಕುರಿತೂ ಅತೀ ಮಹತ್ವದ ಮಾಹಿತಿ ಇದ್ದು ರಾಸಾಯನಿಕ ಸಂರಕ್ಷಕಗಳಿಂದ ಆರೋಗ್ಯದ ಮೇಲೆ ಹಲವು ಬಗೆಯ ವ್ಯತಿರಿಕ್ತ ಪರಿಣಾಮಗಳು ಬೀರುವ ಸಾಧ್ಯತೆ ಕುರಿತು ಖಚಿತ ಮಾಹಿತಿ ಇದೆ. ನೈಸರ್ಗಿಕ ಗೊಬ್ಬರ ಬಳಕೆಯ ಆಹಾರ , ಯಾವುಗಳು ಸೇವನೆಗೆ ಯೋಗ್ಯ ಎಂಬ ಸಂದೇಶವಿದೆ.
ಬದುಕುವುದಕ್ಕೆ ಆಹಾರ ಸೇವನೆ ಮಾಡುವದಕ್ಕಿಂತಲೂ , ನಾಲಿಗೆ ಚಪಲಕ್ಕೆ ಆಹಾರ ಸೇವಿಸುವುದೇ ಮುಖ್ಯವಾಗಿದೆ. ಇದರಿಂದ ಅನೇಕ ರೋಗಗಳಿಗೆ ನಾವೇ ಆಹ್ವಾನ ಇಡುತ್ತೇವೆ. ಈ ರೋಗಗಳು ಬಾಧಿಸುವಾಗ ವೈದ್ಯರತ್ತ ಮುಖ ಮಾಡುವುದು ಸಾಮಾನ್ಯ. ವೈದ್ಯರಿಗದು ಉಪಜೀವನದ ವೃತ್ತಿ. ಆದರೆ ಡಾ. ಪಾಂಗಿಯವರು ರೋಗಿಗಳು ತಮ್ಮಲ್ಲಿ ಬರಲಿ ಎಂಬುವುದನ್ನು ಬಿಟ್ಟು , ಅವರಿಗೆ ವೈದ್ಯರತ್ತ ಮುಖಮಾಡುವುದನ್ನು ಬಿಡಲು ತುಂಬ ಉಪಯುಕ್ತ ಮಾಹಿತಿಯನ್ನು ನೀಡುವ ಮೂಲಕ ಸ್ವಾಸ್ಥ್ಯ ಆರೋಗ್ಯ ಹೊಂದಿ , ಚನ್ನಾಗಿ ಬಾಳಿ ಎಂದು ಈ ಕೃತಿಯನ್ನು ಕೈಪಿಡಿಯಾಗಿ ನೀಡಿರುವುದನ್ನು ನೋಡಿದಾಗ ಅವರ ಸಾಮಾಜಿಕ ಕಳಕಳಿ ಎಷ್ಟರ ಮಟ್ಟಿಗಿದೆ ಎಂಬುದರ ಅರಿವಾಗುತ್ತದೆ.
ಸುದೀರ್ಘ ವೈದ್ಯಕೀಯ ವೃತಿಯಲ್ಲಿ ಅವರು ತಮ್ಮ ರೋಗಿಗಳ ಒಡನಾಟದಲ್ಲಿ ಅಪಾರ ಅನುಭವ ಪಡೆದಿದ್ದೇ ಈ ಕೃತಿಗೆ ವಸ್ತುವಾಗಿದೆ. ರೋಗಿಗಳಿಗೆ ತಿಳಿಹೇಳುವ ಮಾಹಿತಿಯೇ ಅವರಿಂದ ಈ ಕೃತಿ ಒಡಮೂಡಿ ಬರಲು ಪ್ರೇರಣೆಯಾಗಿದೆ.
ಈಗ ಆಯ್ದ ಕೇಲವೆ ವಿಷಯ ಕುರಿತು ಮಾಹಿತಿ ನೀಡಿದ್ದಾಗಿ ಹೇಳಿರುವ ಲೇಖಕರು, ಬರುವ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆಯೇ ತಮ್ಮ ವಿಚರಾಗಳನ್ನು, ತಮ್ಮದೆ ಆದ ಯೂಟ್ಯೂಬ್ ಮೂಲಕ ಹಾಗೂ ಬರಃಗಳ ಮೂಲಕ ನೀಡುವುದಾಗಿ ಹೇಳಿರುವುದು ತುಂಬ ಸಂತಸದ ಸಂಗತಿ. ಎಪ್ಪತ್ತರ ಅಂಚಿನಲ್ಲಿರುವ ಅವರು ಸಾಕಷ್ಟು ಅನುಭವಗಳನ್ನು ಹೊಂದಿದ್ದಾರೆ.
ಸಧ್ಯ ಮಗ ರವಿ, ಸೊಸೆ ದೀಪಾ ಇರ್ವರೂ ವೈದ್ಯರಾಗಿದ್ದು ಜನಸೇವೆಗೆ ಅವರಿಗೆ ಮಾರ್ಗದರ್ಶನ ಮಾಡುತ್ತ ತಾವು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿತುತ ಕಾರ್ಯದಲ್ಲಿ ತೊಡಗುವ ಆಶಯ ವ್ಯಕ್ತ ಪಡಿಸಿದ್ದು ನಮ್ಮಲ್ಲರ ಭಾಗ್ಯ ಎನಿಸಿದೆ.
ಪ್ರತಿಷ್ಠಿತ ರಾಜಕೀಯ ಹಿನ್ನಲೆಯುಳ್ಳ ಕತ್ತಿ ಮನೆತನದ ಹೆಣ್ಣುಮಗಳು ಪೂರ್ಣಿಮಾ ಇವರು ಡಾ. ಪಾಂಗಿಯವರ ಧರ್ಮಪತ್ನಿ. ಅವರೂ ಕೂಡ ಇನ್ನರವಿಲ್ ಹಾಗೂ ಸಮಾಜದ ವಿವಿಧ ಸ್ತರಗಳಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡವರು. ಪತಿಗೆ ಪ್ರೇರಣೆ ನೀಡುತ್ತ ಅವರ ಕಾರ್ಯದಲ್ಲಿ ಸಹಭಾಗಿಯಾಗಿ ಯಶಸ್ವಿಗೆ ಸಹಕಾರ ನೀಡುತ್ತಿದ್ದಾರೆ. ಹತ್ತನೆಯ ತರಗತಿವರೆಗೆ ಮಾತ್ರ ಕನ್ನಡ ಕಲಿತಿದ್ದ ಡಾ. ಪಾಂಗಿಯವರಿಂದ ಈ ಕೃತಿ ಮೂಡಿಬರಲು ಅವರ ಧರ್ಮಪತ್ನಿ, ಮಗಳು ರಶ್ಮಿ ಅಳಿಯ ಶಿವಚಿತ್, ಮಗ ಡಾ.ರವಿ. ಸೊಸೆ ಡಾ.ದೀಪಾ ಇವರೆಲ್ಲರ ಒತ್ತಾಸೆಯವೇ ಕಾರಣವಾಗಿದೆ.
ಒಟ್ಟಾರೆಯಾಗಿ ಈ ಕೃತಿ ಅಮೂಲ್ಯವಾಗಿದೆ. ವೈದ್ಯ ಸಾಹಿತ್ಯದಲ್ಲಿ ಅಪೂರ್ವ ಕೊಡುಗೆ. ಪ್ರತಿ ಮನೆಯೊಂದಕ್ಕೆ ಸಂಗ್ರಹಯೋಗ್ಯ ಕೃತಿ. ಆರೋಗ್ಯದ ಅಪೂರ್ವ ಮಾಹಿತಿ ಕಣಜವಾಗಿರು ಡಾ. ಎ.ಎ.ಪಾಂಗಿ ಅವರಿಂದ ಇನ್ನುಷ್ಟು, ಮತ್ತಷ್ಟು ಕೃತಿಗಳು ರಚನೆಯಾಗಿ ಸಾಹಿತ್ಯ ಕ್ಷೇತ್ರ ಬೆಳಗಲಿ. ಜನತೆಗೆ ಉಪಯೋಗವಾಗಲಿ ಎಂದು ಹಾರೈಸೋಣ.
----------------------------------------------------------------