ಕಾವ್ಯ ಸಂಗಾತಿ
ಭಾರತಿ ಅಶೋಕ್
ಅವನು ಮತ್ತು ಅವಳು
ಅವನು ಹಗಲು ಇರುಳಿಗೂ ಸೂರ್ಯ,
ಇವಳು ಇರುಳು ಹಗಲಿಗೂ ಚಂದಿರೆ
ಅವರಿಬ್ಬರೂ ಒಂದೇ ಗುಡಾರದಿ
ಬಿಡಾರ ಹೂಡಿದ, ಹಗಲಿರುಳು
ಜೊತೆಗಿರುವ ಸೂರ್ಯ ಚಂದಿರೆಯರು
ಅವನು ಆಗಾಗ ಚಂದಿರನಂತೆ ಕಾಣುತ್ತಾನೆ
ಇಲ್ಲ ಇವಳು ಹಾಗೆ ಭ್ರನಿಸುತ್ತಾಳೆ
ಮೈ ಮನಗಳ ಹರಿದು ತಿಂದ ತೃಪ್ತಿಯಲ್ಲಿ ಅಂಗಾತ ಬಿದ್ದ
ಅವನು ಥೇಟ್ ಸೀಳು ನಾಯಿಯಂತಿದ್ದರೂ ಕ್ಷಣವಾದರೂ
ರಕ್ಕಸ ಕಬಂದದಿಂದ ಜಾರಿದ ಅವಳಿಗೆ
ಒಡಲೊಳಗಿನ ಕಿಚ್ಚು ತಣ್ಣಗಾಗಿ
ಅವನು ಪೌರ್ಣಿಮೆಯ ಚಂದ್ರನಂತೆ ಕಾಣುತ್ತಾನೆ
ಇವಳೆಂದಿಗೂ ತಂಪಾದ ಚೆಂದಿರೆ
ಒಮ್ಮೆ ಸೂರ್ಯನ ಪ್ರತಾಪಕ್ಕೆ ಸುಟ್ಟು,
ಚಂದ್ರನ ತಂಪಿಗೆ ಕರಗಿ(?)
ನೀರಾಗಿ ಮತ್ತೆ ಘನಿಸುವ ಚಂದಿರೆ ಒಡಲಾಗ್ನಿಯೊಳು ನಗುವ
ತಂಪಾದ ಚೆಂದಿರೆ.
ಭಾರತಿ ಅಶೋಕ್