ಧಾರಾವಾಹಿ-ಅಧ್ಯಾಯ –11

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ತನ್ನ ಅಸಮ್ಮತಿಯನ್ನು

ನಾಣುವಿಗೆ ಸ್ಪಷ್ಟ ಪಡಿಸಿದ ಕಲ್ಯಾಣಿ

ಪತಿಯು ಮಕ್ಕಳಿಗೆ ಹೇಳಿದ ಪ್ರತಿಯೊಂದು ಮಾತೂ ಕಲ್ಯಾಣಿ ಅಡುಗೆ ಮನೆಯಿಂದ ಕೇಳಿಸಿಕೊಳ್ಳುತ್ತಾ ಇದ್ದರು.

ಮಕ್ಕಳ ಮನಸ್ಸಿಗೆ ಉಂಟಾಗುವ ಆಘಾತ ನೆನೆದು ಕಣ್ಣು ತುಂಬಿ ಬಂದಿತ್ತು. ಇಂದು ಮತ್ತೊಮ್ಮೆ ತಾನು ಮನದಲ್ಲಿ ಮಾಡಿಕೊಂಡ ದೃಢ ನಿರ್ಧಾರವನ್ನು ಪತಿಯೊಂದಿಗೆ ನಿವೇದಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಮೌನವಾಗಿ ಎಲ್ಲರೂ ಊಟ ಮಾಡಿದರು. ಮಕ್ಕಳೆಲ್ಲಾ ತಮ್ಮ ಕೋಣೆಗೆ ಮಲಗಲು ಹೋದರು. ನಾರಾಯಣನ್ ಒಬ್ಬರನ್ನು ಬಿಟ್ಟರೆ ಬೇರೆ ಎಲ್ಲರ ಮುಖವೂ ಕಳೆಗುಂದಿತ್ತು. ಮಲಗಲು ಹೋದ ಮಕ್ಕಳಿಗೆ ನಿದ್ರೆ ಬರಲಿಲ್ಲ. ಸುಮತಿ ಅಕ್ಕನ ಮಡಿಲಲ್ಲಿ ತಲೆ ಇಟ್ಟು ಮಲಗಿದಳು. ಅಮ್ಮನ ಹಾಗೇ ಅಕ್ಕರೆಯಿಂದ ತಲೆ ಸವರುತ್ತಾ ತಂಗಿಗೆ ಸದ್ದಿಲ್ಲದೆ ಸಾಂತ್ವನ ಮಾಡಿದಳು ಅಕ್ಕ. ತಮ್ಮಂದಿರು ಇಬ್ಬರೂ ಅವರ ಹಾಸಿಗೆ ಬಿಟ್ಟು ಅಕ್ಕಂದಿರ ಪಕ್ಕದಲ್ಲಿ ಬಂದು ಮಲಗಿದರು. ಅಪ್ಪನ ಮಾತು ಹಾಗೂ ಅಕ್ಕಂದಿರು ನಡೆದುಕೊಳ್ಳುತ್ತಾ ಇರುವ ರೀತಿ ನೋಡಿ ತಮಗೆ ಅರ್ಥ ಆಗದೇ ಇರುವ ವಿಷಯ ಏನೋ ಇದೆ ಎಂಬುದು ಇಬ್ಬರಿಗೂ ತಿಳಿಯಿತು. ಅವರೂ ಮೌನವಾಗಿ ನಿದ್ರೆ ಹೋದರು. ಕಲ್ಯಾಣಿಯವರು ಮಲಗುವ ಕೋಣೆಗೆ ಬಂದರು. ನಾಣು ನಿದ್ರೆ ಮಾಡದೇ ಪತ್ನಿ ಬರುವುದನ್ನೇ ಕಾಯುತ್ತಾ ಇದ್ದರು. ಪತ್ನಿ ಕೋಣೆಗೆ ಬಂದ ಕೂಡಲೇ ನಾಣು ನಸು ನಗುತ್ತಾ ಕೇಳಿದರು….”ಏನು ಇವತ್ತು ಅಮ್ಮ ಮತ್ತು ಮಕ್ಕಳು ಹೆಚ್ಚು ಮಾತುಕತೆ ಏನೂ ಇಲ್ಲ. ಮಕ್ಕಳ ಆಟ ನಗು ಇಲ್ಲ…. ಇದು ನನ್ನ ಮನೆಯೇ ಎಂದು ಸಂಶಯ ಬರುವಷ್ಟು ಮೌನ….ನೀನು ಏನಾದರೂ ಮಕ್ಕಳಿಗೆ ಬೇಸರ ಆಗುವ ಹಾಗೆ ಗದರಿದೆಯಾ ಹೇಗೆ?…. ಈ ರೀತಿ ಇಷ್ಟೊಂದು ಮೌನವಾಗಿ ಮಕ್ಕಳು ಇರುವುದನ್ನು ಇಲ್ಲಿಯವರೆಗೆ ಕಂಡಿದ್ದೇ ಇಲ್ಲ”…. ಪತಿಯ ಮಾತು ಕೇಳಿ ಕಲ್ಯಾಣಿಯ ಮುಖದಲ್ಲಿ ನೋವಿನ ಗೆರೆಗಳು ಮೂಡಿ ಮಾಯವಾದವು.

ಮಂಚದ ಪಕ್ಕದಲ್ಲಿ ಪತಿಯ ಕಾಲ ಬಳಿ ಬಂದು ಕುಳಿತ ಕಲ್ಯಾಣಿ ಪತಿಯ ಮುಖವನ್ನೇ ಕಣ್ಣು ಮಿಟುಕಿಸದೆ ಕ್ಷಣಕಾಲ ನೋಡಿದರು. ಮಕ್ಕಳ ಮೌನದ ಅರ್ಥ ಇನ್ನೂ ಆಗಿಲ್ಲವೇ ಇವರಿಗೆ? ಮಕ್ಕಳ ಮೃದು ಮನಸ್ಸಿನ ವ್ಯಾಕುಲತೆಯ  ಸೂಕ್ಷ್ಮತೆ ಇವರು  ಗಮನಿಸಲಿಲ್ಲವೆ? ಎಂದು ಯೋಚಿಸುತ್ತಲೇ ಹೇಳಿದರು….”ಏನೂಂದ್ರೆ ಸಕಲೇಶಪುರಕ್ಕೆ ನಾವು ಹೋಗುತ್ತೇವೆ ಎಂದು ತಿಳಿದ ಕೂಡಲೇ ಮಕ್ಕಳ ಮುಖ ಬಾಡಿತು…. ವಿಷಯ ತಿಳಿದ ಕೂಡಲೇ ಹೆಣ್ಣುಮಕ್ಕಳು ಇಬ್ಬರೂ ತುಂಬಾ  ಮಂಕಾಗಿದ್ದಾರೆ….ಸುಮತಿಯಂತೂ ಅತ್ತು ಬಾಡಿ ಸೊರಗಿದ್ದಾಳೆ….ನೀವು ಹೇಳಿದ ವಿಷಯಗಳನ್ನು ನಾನು ಅವರಿಗೆ ವಿವರಿಸಿ ಹೇಳಿದ ಕೂಡಲೇ ಮಕ್ಕಳು ಮೌನವಾಗಿ ಬಿಟ್ಟಿದ್ದಾರೆ…. ಈ ಊರು ರಾಜ್ಯ ಬಿಟ್ಟು ಹೋಗಲು ಅವರಿಗೆ ಸ್ವಲ್ಪವೂ ಇಷ್ಟ ಇದ್ದಂತೆ ಕಾಣುತ್ತಾ ಇಲ್ಲ…. ನನ್ನ ಮನಸ್ಸು ಕೂಡಾ ಯಾಕೋ ಅಲ್ಲಿಗೆ ಹೋಗುವುದು ಬೇಡ ಎಂದು ಹೇಳುತ್ತಿದೆ…. ಏನೇನೋ ಅಪಶಕುನಗಳು ಕಾಣಿಸಿಕೊಳ್ಳುತ್ತಿದೆ”….ಪತ್ನಿಯ ಮಾತುಗಳನ್ನು ಗಮನವಿಟ್ಟು ಕೇಳಿದ ನಾಣು ಹೇಳಿದರು… “ಹೊಸ ಬದಲಾವಣೆಗೆ ಹೀಗೆಲ್ಲಾ ಅನಿಸುವುದು ಸಹಜ….ನಾವು ನಮ್ಮ ಊರು ಬಿಟ್ಟು ಮನೆ ಆಸ್ತಿ ಎಲ್ಲಾ ಮಾರಿ ಪರ ಊರಿಗೆ ಹೋಗಬೇಕಲ್ಲವೇ?  ಆಕಸ್ಮಿಕವಾಗಿ ಘಟಿಸಿದ ಅನಿರೀಕ್ಷಿತ ಬದಲಾವಣೆಯಿಂದ ನಿಮಗೆಲ್ಲರಿಗೂ ಹೀಗೆ ಅನಿಸಿರುವುದು ಸಹಜ… ಕಾಲಕ್ರಮೇಣ ಎಲ್ಲವೂ ಸರಿ ಹೋಗುತ್ತದೆ. ಮೊದಲು ನಿನ್ನ ಮನಸ್ಸನ್ನು ಸರಿ ಮಾಡಿಕೋ ನಂತರ ಮಕ್ಕಳಿಗೂ ತಿಳಿ ಹೇಳು…. ತಂದೆಯಾದ ನಾನು ಹೇಳಿ ಅರ್ಥ ಮಾಡಿಸುವುದಕ್ಕಿಂತ ತಾಯಿಯಾದ ನೀನು ಅರ್ಥ ಆಗುವಂತೆ ಹೇಳಿದರೆ ಅವರು ಖಂಡಿತಾ ಈ ಬದಲಾವಣೆಗೆ ಹೊಂದಿಕೊಳ್ಳುತ್ತಾರೆ”….

ಪತಿಯ ಮಾತುಗಳು ಕಲ್ಯಾಣಿಯವರ ಮನಸ್ಸಿಗೆ ಸಮಾಧಾನ ಕೊಡುವುದರ ಬದಲು ಅವರಲ್ಲಿ ಇನ್ನೂ ಆತಂಕ ಹೆಚ್ಚಿಸಿತು. ಏನು ಮಾಡುವುದು ಎಂದು ತೋಚದೇ ಮೌನವಾಗಿ ಶಿಲೆಯಂತೆ ಕುಳಿತರು. ಕಲ್ಯಾಣಿಯವರ ಮೌನ ನಾಣುವಿನ ಸಹನೆ ಕೆಡಿಸಿತು…. ” ನಾನು ಹೇಳುವ ಒಂದು ಮಾತಿಗೂ ನಿನ್ನಿಂದ ಉತ್ತರ ಇಲ್ಲ ಏಕೆ ಕಲ್ಯಾಣಿ? …ನಾನು ಹೇಳಿದ್ದು ಯಾವುದೂ ನಿನಗೆ ಹಿಡಿಸಿಲ್ಲವೇ ಅಥವಾ ಅರ್ಥ ಆಗಿಲ್ಲವೇ? …. ನಾನು ಸಕಲೇಶಪುರಕ್ಕೆ ಹೋಗುತ್ತೇನೆ ಹಾಗೂ ಅಲ್ಲಿನ ತೋಟವನ್ನು ನೋಡಿ ಬರುತ್ತೇನೆ ಎಂದು ಹೇಳಿದಾಗಿನಿಂದಲೂ ಗಮನಿಸುತ್ತಾ ಇರುವೆ ನಿನ್ನಲ್ಲಿ ಏನೋ ಬದಲಾವಣೆ…ಯಾಕೆ ಕಲ್ಯಾಣಿ ಹೀಗೆ? ನಾನು ಹೇಳಿದ ದಿನದಿಂದಲೂ ನೀನು ನಕಾರಾತ್ಮಕವಾದ ಮಾತುಗಳನ್ನೇ ಆಡುತ್ತಾ ಇರುವೆ…. ಒಂದು ದಿನವೂ ಕೂಡಾ ನೀನು ಒಂದು ಒಳ್ಳೆಯ ಅಭಿಪ್ರಾಯವನ್ನೂ  ಹೇಳಿಲ್ಲ. ನಾನು ಅಲ್ಲಿಗೆ ಹೋಗಿ ಬಂದ ನಂತರವಂತೂ ತೀರಾ ಮೌನಿಯಾಗಿ ಇರುವೆ. ಏನೋ ಮುಖ್ಯವಾದ ವಿಷಯ ಹೇಳಬೇಕೆಂದಿರುವೆ ನೀನು….ಆದರೆ ಇಲ್ಲಿಯವರೆಗೂ ಹೇಳದೇ ಸುಮ್ಮನೇ ಇಲ್ಲಸಲ್ಲದ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾ ಕಾಲ ತಳ್ಳುತ್ತಿದ್ದೀಯ…. ಇಲ್ಲದಿದ್ದರೆ ಏನೂ ಮಾತನಾಡದೇ ಹೀಗೆ ಮೌನವಾಗಿ ಕುಳಿತುಕೊಳ್ಳುತ್ತೀಯ…. ಏನಾಗಿದೆ ನಿನಗೆ? ನಿನ್ನ ಈ ಬದಲಾವಣೆ ನನ್ನಲ್ಲಿ ಏನೋ ಒಂದು ತರಹದ ನಿರಾಸೆ ಮೂಡಿಸಿದೆ…. ನೀನು ಮೊದಲು ಹೀಗೆ ಇರಲಿಲ್ಲ.

ಇಲ್ಲಿಯವರೆಗೂ ನಿನ್ನಲ್ಲಿ ಏನನ್ನೂ ನಾನು ಮುಚ್ಚಿ ಇಟ್ಟಿಲ್ಲ.

ನಿನ್ನ ಜೊತೆ ವಿಮರ್ಶೆ ಮಾಡದೇ ನಾನು ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ…. ಹಾಗಿರುವಾಗ ನಿನ್ನ ಈ ಮೌನ ನನ್ನನ್ನು ಹಿಂಸಿಸುತ್ತಿದೆ ಕಲ್ಯಾಣಿ….ಇನ್ನು ಹೆಚ್ಚು ಸಮಯ ಇಲ್ಲ… ಇಂದು ಈಗಲೇ ನೀನು ಏನು ಹೇಳಬೇಕು ಎಂದು ಇರುವಿಯೋ ಹೇಳಿಬಿಡು…. ನಾನು ಎಲ್ಲಾ ತಯಾರಿಯನ್ನು ಮಾಡಬೇಕಿದೆ…. ನಮ್ಮ ಆಸ್ತಿ ಮನೆ ಎಲ್ಲವನ್ನೂ ಉತ್ತಮ ಬೆಲೆಗೆ ಖರೀದಿ ಮಾಡುವವರನ್ನು ಆದಷ್ಟು ಶೀಘ್ರದಲ್ಲಿ ಹುಡುಕಬೇಕಿದೆ….ಹೇಳು ಕಲ್ಯಾಣಿ ಎಂದು ಅವರ ಭುಜದ ಮೇಲೆ ಕೈಯಿಟ್ಟು ಆರ್ದ್ರತೆ ತುಂಬಿದ ಧ್ವನಿಯಲ್ಲಿ ಕೇಳಿದರು ನಾಣು….

ನಾಣುವಿನ ಮಾತಿಗೆ ಕಲ್ಯಾಣಿಯ ಸ್ವರ ಗಂಟಲಲ್ಲಿಯೇ ಉಳಿದು ಹೋಯಿತು. ಕಣ್ಣು ಮಂಜಾಗಿ ಕತ್ತಲು ಆವರಿಸಿದಂತೆ ಆಯಿತು. ಮಾತನಾಡಲು ಸಾಧ್ಯವಾಗದೇ ಗಂಟಲು ಉಬ್ಬಿ ಬಂತು. ಅಳು ತಡೆಯಲಾರದೇ ಬಾಯಿಗೆ ಕೈ ಅಡ್ಡ ಹಿಡಿದು ಎದ್ದು ಹೋಗಿ ಕಿಟಕಿಯ ಬಳಿ ನಿಂತರು. 

ನಾಣುವಿಗೆ ಕಲ್ಯಾಣಿ ಬಿಕ್ಕಳಿಸುತ್ತಾ ಸಣ್ಣದಾಗಿ ಅಳುತ್ತಿರುವ

ಧ್ವನಿ ಆ ರಾತ್ರಿಯ ನೀರವತೆಯಲ್ಲಿ ಸ್ಪಷ್ಟವಾಗಿ ಕೇಳಿಸಿತು.

ಅಲ್ಲಿಂದಲೇ ಕೇಳಿದರು….”ಏಕೆ ಅಳುತ್ತಿರುವೆ ಕಲ್ಯಾಣಿ? ನೀನು ಹೀಗೆ ಅಳುವಂತೆ ನಾನು ಏನು ಹೇಳಿದೆ?….ಇಲ್ಲಿ ಬಾ ಅಳು ನಿಲ್ಲಿಸು… ನಿನ್ನ ಮನಸ್ಸಲ್ಲಿ ಏನಿದೆ ಅಂತ ನನ್ನಲ್ಲಿ ಹೇಳಬಾರದೇ ಎಂದು ಅನುನಯದಿಂದ ಕೇಳಿದರು. 

ಪತಿಯ ಮಾತಿನಿಂದ ಕಲ್ಯಾಣಿಯ ಮನಸ್ಸು ಸ್ವಲ್ಪ ನಿರಾಳವಾದಂತೆ ಅನಿಸಿತು. ಮೆಲು ಧ್ವನಿಯಲ್ಲಿ ಹೇಳಿದರು

” ಏನೂಂದ್ರೆ ನಾವು ಇಲ್ಲಿಯೇ ಇರೋಣ…. ನಮ್ಮ ಆಸ್ತಿ ಮನೆ ತೋಟ ಯಾವುದನ್ನೂ ಮಾರುವುದು ಬೇಡ. ಸಕಲೇಶಪುರದ ತೋಟ ನಮಗೆ ಬೇಡ…. ನಾವೆಲ್ಲರೂ ಇಲ್ಲಿ ಇರುವುದರಲ್ಲಿಯೇ ಸಂತೋಷವಾಗಿದ್ದೇವೆ. ಯಾಕೋ ನನ್ನ ಮನಸ್ಸು ನೀವು ತೆಗೆದುಕೊಂಡಿರುವ ನಿರ್ಧಾರವನ್ನು ಒಪ್ಪುತ್ತಿಲ್ಲ. ಇಲ್ಲಿಯ ಜೀವನವೇ ನಮಗೆ ಹಿತವಾಗಿದೆ. ನಾವು ಅಲ್ಲಿಗೆ ಹೋಗುತ್ತೇವೆ ಎಂದು ತಿಳಿದೊಡನೆ ಮಕ್ಕಳು ಏನೂ ಹೇಳದೆ ಮಂಕಾಗಿದ್ದಾರೆ. ದಯವಿಟ್ಟು ನಿಮ್ಮ ಈ ನಿರ್ಧಾರವನ್ನು ಬದಲಿಸಿ. ಸ್ವಲ್ಪ ಸಮಯ ತೆಗೆದುಕೊಂಡು ನನಗಾಗಿ ಹಾಗೂ ಮಕ್ಕಳಿಗಾಗಿ ಒಮ್ಮೆ ಸಮಾಧಾನ ಚಿತ್ತದಿಂದ ಯೋಚಿಸಿ ನೋಡಿ….ಇದು ನಿಮ್ಮಲ್ಲಿ ನನ್ನ ಕಳಕಳಿಯ ಪ್ರಾರ್ಥನೆ”…. ಎಂದು ಹೇಳುತ್ತಾ ನಿಧಾನವಾಗಿ ಪತಿಯ ಬಳಿಗೆ ಬಂದು ಕುಳಿತರು.


ರುಕ್ಮಿಣಿ ನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top